Advertisement

ಭಾರತ ಹಿಂದೂಸ್ತಾನ ಆಗುತ್ತೆ: ಯತ್ನಾಳ

10:56 AM Jun 17, 2019 | Team Udayavani |

ವಿಜಯಪುರ: ಭಾರತ ಹಿಂದೂಸ್ತಾನ ಆಗುವುದರಲ್ಲಿ ಎರಡು ಮಾತಿಲ್ಲ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಯಾರೂ ಸಲಹೆ ಕೊಡುವ ಅಗತ್ಯವಿಲ್ಲ. ಈ ಬಗ್ಗೆ ಮೋದಿ ಅವರೇ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ರವಿವಾರ ನಗರದ ಡಾ| ಫ.ಗು. ಹಳಕಟ್ಟಿ ಸಭಾಭವನದಲ್ಲಿ ಹಿಂದೂಸ್ಥಾನ ಮರು ನಾಮಕರಣ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಂಶೋಧಕ ಡಾ| ಆನಂದ ಕುಲಕರ್ಣಿ ವಿರಚಿತ ಅವರ ಹಿಂದೂಸ್ತಾ ನವಾಗಲಿ ನಮ್ಮ ದೇಶ ಎಂಬ ಕೃತಿ ಲೋಕಾರ್ಪಣೆ ಹಾಗೂ ಹಿಂದೂಸ್ತಾನ ಹೆಸರಿನ ಮಹಿಮೆ ವಿಷಯದ ಚಿಂತನಾಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಮಹಾರಾಣಾ ಪ್ರತಾಪಸಿಂಹ್‌ ಅವರು ದೇವರಲ್ಲದಿರಬಹುದು. ಆದರೆ ದೇವಾಲಯದ ಗುಡಿಗಳಲ್ಲಿ ದೇವರ ಪ್ರತಿಮೆಗಳು ಇರಲು ಸಾಧ್ಯವಾಗಿಸಿದ್ದೇ ಈ ಇಬ್ಬರು ಮಹನೀಯರು. ಈ ಇಬ್ಬರಿಂದಾಗಿ ಹಿಂದೂಗಳು ಹಣೆಗೆ ತಿಲಕ ಹಚ್ಚಿಕೊಳ್ಳಲು ಸಾಧ್ಯವಾಗಿದೆ ಎಂದು ಬಣ್ಣಿಸಿದರು.

ಕಾಶ್ಮೀರದ ಫಾರೂಕ್‌ ಅಬ್ದುಲ್ಲಾ ಜವಾಹರಲಾಲ್ ನೆಹರು ಅವರ ವಂಶಜರು. ಹೀಗಾಗಿ ಅವರ ಕೈಯಲ್ಲಿ ಆಡಳಿತವಿರಬೇಕು ಎಂಬ ಕಾರಣಕ್ಕೆ ಜವಾಹರಲಾಲ್ ನೆಹರು ಅವರು ಕುತಂತ್ರ ಮಾಡಿ ಅಲ್ಲಿ ಕ್ಷೇತ್ರಗಳನ್ನು ರೂಪಿಸಿದ್ದರು. ಫಾರೂಕ್‌ ಅಬ್ದುಲ್ಲಾ ಕುಟುಂಬ ಹಾಗೂ ನೆಹರು ಕುಟುಂಬ ಒಂದೇ ವಂಶಜರು ಎಂಬುದಕ್ಕೆ ಅವರ ಹೋಲಿಕೆ ಇದೆ. ಆದರೆ ಕಾಶ್ಮೀರದಲ್ಲಿ ಬದಲಾವಣೆ ಗಾಳಿ ಬೀಸುತ್ತಿರುವ ಕಾರಣ ಇನ್ನು ಇವರ ಆಟ ನಡೆಯುವುದಿಲ್ಲ. ಭವಿಷ್ಯದಲ್ಲಿ ಕಾಶ್ಮೀರದಲ್ಲೂ ಹಿಂದೂ ಮುಖ್ಯಮಂತ್ರಿ ಅಧಿಕಾರದ ಗದ್ದುಗೆ ಏರುವ ಕಾಲ ದೂರವಿಲ್ಲ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ತ್ರಿಭಾಷಾ ಸೂತ್ರ ಅನಿವಾರ್ಯ, ಆದರೆ ಹಿಂದಿ ಬಗ್ಗೆ ವಿನಾಕಾರಣ ದ್ವೇಷ ಸಾಧಿಸುವ ಕೆಲಸ ನಡೆಯುತ್ತಿದೆ. ಹಿಂದಿ ಭಾಷಿಕರು ರಾಜ್ಯ ಬಿಟ್ಟು ಹೋಗಿ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿರುವುದು ಸರಿಯಾದ ಕ್ರಮವಲ್ಲ. ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಅವರ ಪಿತ್ರಾರ್ಜಿತ ಆಸ್ತಿಯಲ್ಲ ಎಂಬುದನ್ನು ಅರಿಯಬೇಕು ಎಂದು ವಾಗ್ಧಾಳಿ ನಡೆಸಿದರು.

ರಾಜೇಂದ್ರಕುಮಾರ ಬಿರಾದಾರ ಕೃತಿ ಪರಿಚಯಿಸುತ್ತ, ಮಾಯಾವತಿ ಅವರು ಉತ್ತರ ಪ್ರದೇಶದ ಅಕ್ಬರಪುರ ಶಹರವನ್ನು ಅಂಬೇಡ್ಕರಪುರ ಎಂದು ಬದಲಾಯಿಸಿದಾಗ ಕಂಡುಬರದ ವಿರೋಧ, ಹಾಲಿ ಸಿಎಂ ಯೋಗಿ ಆದಿತ್ಯನಾಥ ಅವರು ಅಲಹಾಬಾದ್‌ ನಗರಕ್ಕೆ ಪ್ರಯಾಗರಾಜ್‌ ಎಂದು ಮರುನಾಮಕರಣ ನಡೆಸಿದಾಗ ವಿವಾದ ಆಯ್ತು. ನಮ್ಮ ಸಂಸ್ಕೃತಿಯ ಬಗ್ಗೆ ನಾವೇ ತಾತ್ಸಾರ ತೋರುತ್ತಿದ್ದೇವೆ. ಭಾರತ ದೇಶವನ್ನು ಹಿಂದೂಸ್ತಾನವಾಗಿ ಘೋಷಣೆ ಮಾಡಲು ಮುಸ್ಲಿಮರ ವಿರೋಧವಿಲ್ಲ. ಬದಲಾಗಿ ಹಿಂದೂಗಳೇ ಇದನ್ನು ವಿರೋಧಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ ಎಂದರು.

Advertisement

ಶಿವಬಸವ ಯೋಗಾಶ್ರಮದ ಶಂಭುಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಿದ್ದೇಶ್ವರ ಸಂಸ್ಥೆಯ ಸಿದ್ರಾಮಪ್ಪ ಉಪ್ಪಿನ, ಎಸ್‌.ಎಚ್. ನಾಡಗೌಡ, ಪತ್ರಕರ್ತ ಸಂಗಮೇಶ ಚೂರಿ, ಶ್ರೀರಾಮ ಸೇನೆ ಹಿರಿಯ ಮುಖಂಡ ನೀಲಕಂಠ ಕಂದಗಲ್, ಯು.ಎನ್‌. ಕುಂಟೋಜಿ, ಶರಣಗೌಡ ಪಾಟೀಲ, ವಿಶ್ವನಾಥ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next