Advertisement
ವಿಜಯಪುರ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಭಾಗವಾಗಿ ಹಲವು ಬೆಳವಣಿಗೆಗಳ ಮಧ್ಯೆ ಐತಿಹಾಸಿಕ ಬೇಗಂ ತಾಲಾಬ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನವಾದ ಸೆ.27ರಂದು ದೋಣಿ ವಿಹಾರ ಆರಂಭಗೊಳ್ಳಲಿದೆ. ಇದಕ್ಕಾಗಿ ಕಾರವಾರದ ಸಂಸ್ಥೆಯೂ ಕಯಾಕಿಂಗ್, ಮೋಟರ್ ಹಾಗೂ ರ್ಯಾಪ್ಟಲ್ ಬೋಟಿಂಗ್ ಆರಂಭಕ್ಕೆ ಬೋಟ್ ಗಳನ್ನು ಕೆರೆ ಪ್ರದೇಶದಲ್ಲಿ ಇಳಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ಬೋಟಿಂಗ್ ಸೇವೆಗೆ ಚಾಲನೆ ದೊರೆಯಲಿದೆ.
Related Articles
Advertisement
ಸೆ.27ರಂದು ವಿಶ್ವ ಪ್ರವಾಸೋದ್ಯಮ ದಿನದಂದು ಬೇಗಂ ತಾಲಾಬ್‌ನಲ್ಲಿ ಬೋಟಿಂಗ್ ಸೇವೆ ಆರಂಭಿಸಲು ಫ್ಲೈಕ್ಯಾಚರ್ ಅಡ್ವೆಂಚರ್ ಸಂಸ್ಥೆ 2 ಮೋಟಾರು ಬೋಟ್ ಗಳು, 15 ಕಯಾಕಿಂಗ್ ಹಾಗೂ 2 ರ್ಯಾಪ್ಟಲ್ ಬೋಟ್ ಗಳು ಬೇಗಂ ತಾಲಾಬ್‌ಗ ಬಂದಿಳಿದಿವೆ. ಈ ಕೆರೆಯ ಪ್ರದೇಶದಲ್ಲಿ ಈಗಾಗಲೇ ಪಿಕ್‌ನಿಕ್ ಯೋಗ್ಯ ಸೌಲಭ್ಯಗಳು ಅಭಿವೃದ್ಧಿಗೊಂಡಿದ್ದು, ನಿತ್ಯವೂ ಸಾವಿರಾರು ಜನರು ಬೆಳಿಗ್ಗೆ-ಸಂಜೆ ವಾಯು ವಿಹಾರಕ್ಕೆ ಬರುತ್ತಿದ್ದಾರೆ. ನಗರದಿಂದ ಹೊರ ವಲಯದಲ್ಲಿರುವ ಈ ಕೆರೆಯಲ್ಲಿ ಬೋಟಿಂಗ್ ಆರಂಭಿಸುವುದು ಎಲ್ಲ ರೀತಿಯಿಂದಲೂ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಪ್ರಾಯೋಗಿಕವಾಗಿ ಒಂದು ತಿಂಗಳ ಬೋಟಿಂಗ್ ಆರಂಭಿಸಲು ಲಿಖೀತವಾಗಿ ಫ್ಲೈಕ್ಯಾಚರ್ ಅಡ್ವೆಂಚರ್ ಸಂಸ್ಥೆಗೆ ಸೂಚಿಸಲಾಗಿದೆ. ವಿಶ್ವ ಪ್ರವಾಸೋದ್ಯಮ ದಿನದಂದು ಬೋಟಿಂಗ್ ಆರಂಭಿಸುತ್ತಿರುವ ಕಾರಣ ಅಂದು ಕೆರೆ ಪ್ರದೇಶಕ್ಕೆ ಭೇಟಿ ನೀಡಿ ದೋಣಿ ವಿಹಾರ ಮಾಡಬಯಸುವ ಎಲ್ಲರಿಗೂ ಉಚಿತ ಸೇವೆ ಕಲ್ಪಿಸಲಿದೆ. ನಂತರದ ದಿನಗಳಲ್ಲಿ ಪ್ರತಿ ಬೋಟ್‌ಗೆ ಪ್ರತಿ ಅರ್ಧ ಗಂಟೆ ವಿಹಾರಕ್ಕೆ ದರ ನಿಗದಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ನೇತೃತ್ವದ ಸಮಿತಿ ಚರ್ಚಿಸಿ ದರವನ್ನು ಅಂತಿಮ ಮಾಡಿದೆ.
ದರ ನಿಗದಿ: ಮೋಟರ್ ಬೋಟಿಂಗ್‌ಗೆ ಅರ್ಧ ಗಂಟೆಗೆ 100 ರೂ. ಕಯಾಕಿಂಗ್ ಅರ್ಧ ಗಂಟೆಗೆ ಒಬ್ಬರಿಗೆ 100, ಜೋಡಿ ಇದ್ದರೆ 150 ರೂ. ಹಾಗೂ ರ್ಯಾಪ್ಟಲ್ ಬೋಟಿಂಗ್‌ಗೆ 50 ರೂ. ದರ ನಿಗದಿ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತಿ ಜಲಾಶಯದ ಆವರಣದಲ್ಲಿ ಉದ್ಯಾನವನ ಆವರಣದಲ್ಲಿ ಬೋಟಿಂಗ್ ಇದೆ.ವಿಜಯಪುರ ನಗರದಲ್ಲಿ ಆರಂಭಗೊಳ್ಳುತ್ತಿರುವ ಬೋಟಿಂಗ್ ಎರಡನೇಯದಾಗಿದೆ.