ವಿಜಯಪುರ: ರೈತರಿಂದ ಕಬ್ಬು ಪಡೆದಿರುವ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ ಕಾರಜೋಳ ಬಳಿಯ ಸಕ್ಕರೆ ಕಾರ್ಖಾನೆಯ ಚರ-ಸ್ಥಿರ ಆಸ್ತಿಯ ಹರಾಜಿಗೆ ಬಂದಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಭೂಬಾಲನ್ ಆಸ್ತಿಗಳ ಮೌಲ್ಯ ಮಾಪನೆಗೆ ಸಮಿತಿ ರಚಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಶ್ರೀಬಸವೇಶ್ವರ ಶುಗರ್ಶ್ ಸಕ್ಕರೆ ಕಾರ್ಖಾನೆ ಕಬ್ಬು ಸಾಗಿಸಿರುವ ರೈತರಿಗೆ ಬಿಲ್ ಪಾವತಿಸಿಲ್ಲ. ಪರಿಣಾಮ ಸದರಿ ಸಕ್ಕರೆ ಕಾರ್ಖಾನೆಯ ಚರ-ಸ್ಥಿರಾಸ್ಥಿಗಳನ್ನು ಹರಾಜು ಹಾಕಿ ರೈತರ ಬಾಕಿ ಹಣ ಪಾವತಿಗೆ ನಿರ್ಧರಿಸಲಾಗಿದೆ. ಇದಕ್ಕಾಗಿ ಸಕ್ಕರೆ ಕಾರ್ಖಾನೆಯನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಲು ವಿಜಯಪುರ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ 10 ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ ಎಂದಿದ್ದಾರೆ.
ಸದರಿ ಕಾರ್ಖಾನೆ 2023-24ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ರೈತರಿಂದ ಕಬ್ಬು ಪಡೆದು, ನುರಿಸಿದೆ. ಆದರೆ ಈ ವರೆಗೂ ರೈತರಿಗೆ 48.00 ಕೋಟಿ ರೂ. ಬಾಕಿ ಬಿಲ್ ಪಾವತಿಸಿಲ್ಲ. ಕಾರಣ ಸಕ್ಕರೆ ಕಾನೂನಿನಂತೆ ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಬೆಂಗಳೂರಿನ ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ರೈತರ ಬಾಕಿ ಬಿಲ್ ಪಾವತಿಗಾಗಿ ಕಾರ್ಖಾನೆಯ ಆಸ್ತಿ ಹರಾಜಿಗೆ ಆದೇಶಿಸಿದ್ದಾರೆ.
ಸದರಿ ಆದೇಶ ಅನ್ವಯ ಕಾರಜೋಳದ ಶ್ರೀಬಸವೇಶ್ವರ ಶುಗರ್ಸ್ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಆಸ್ತಿಗಳ ಭೂ ದಾಖಲೆಗಳಲ್ಲಿ ರೈತರಿಗೆ ನೀಡಬೇಕಾಗಿರುವ ಬಾಕಿ ಹಣದ ಕುರಿತು ಬೋಜಾ ದಾಖಲಿಸಲು ಬಬಲೇಶ್ವರ ತಹಶೀಲ್ದಾರರಿಗೆ ಸೂಚಿಲಾಗಿತ್ತು.
ಸದರಿ ಸೂನನೆ ಅನ್ವಯ ತಹಶೀಲ್ದಾರರು ಸಕ್ಕರೆ ಕಾರ್ಖಾನೆಯ ದಾಖಲೆಗಳಲ್ಲಿ ಬೋಜಾ ನಮೂದಿಸಿದ್ದಾರೆ. ಇದರ ಹೊರತಾಗಿಯೂ ಸದರಿ ಕಾರ್ಖಾನೆ ಯವರು ರೈತರಿಗೆ ಬರಬೇಕಿರುವ ಬಾಕಿ ಬಿಲ್ ಮೊತ್ತ ಸಂದಾಯ ಮಾಡಿಲ್ಲ. ಹೀಗಾಗಿ ಕಾರ್ಖಾನೆಯ ಹರಾಜಿಗೆ ಆಸ್ತಿ ಮೌಲ್ಯಪಾಪನ ಮಾಡಲು ಸಮಿತಿ ರಚಿಸಲಾಗಿದೆ.
ಸದರಿ ಆಸ್ತಿ ಮೌಲ್ಯ ಮಾಪನ ತಂಡ ನೀಡುವ ಮೌಲ್ಯಮಾಪನ ವರದಿ ಅನ್ವಯ ಮುಂದೆ ಕಾರ್ಖಾನೆಯ ಚರ-ಸ್ಥಿರ ಆಸ್ತಿಯ ಹರಾಜು ಪ್ರಕ್ರಿಯೆ ಕೈಗೊಂಡು ರೈತರಿಗೆ ಬರಬೇಕಿರುವ ಬಾಕಿ ಬಿಲ್ ಮೊತ್ತವನ್ನು ಸಂದಾಯ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.