Advertisement

ಮತ್ತೊಮ್ಮೆ ಕೊಡುಗೈ ದಾನಿಯಾದ ಬಸವನಾಡು

03:46 PM May 06, 2020 | Naveen |

ವಿಜಯಪುರ: ಬಡತನವೇ ಸಿರಿಯಾಗಿದ್ದರೂ ಸಂಕಷ್ಟದ ಸಂದರ್ಭದಲ್ಲಿ ದೇಶಪ್ರೇಮ ಮೆರೆಯುವುದು ಬಸವನಾಡಿನ ಜನರಲ್ಲಿ ರಕ್ತಗತವಾಗಿದೆ. ಅದರಲ್ಲೂ ಚೀನಾ ವಿಷಯ ಬಂದಾಗ ಜಿಲ್ಲೆಯ ಜನರು ಹಸಿವನ್ನು ಮೀರಿ ದೇಶಕ್ಕಾಗಿ ಕೈ ಎತ್ತಿ ನೀಡುತ್ತಾರೆ. ಚೀನಾ ವಿರುದ್ಧದ ಯುದ್ಧದಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದಾಗ ಇಂದಿರಾಗಾಂಧಿ ಹಾಗೂ ನಿಜಲಿಂಗಪ್ಪ ಅವರನ್ನು ಚಿನ್ನದಲ್ಲಿ ತುಲಾಭಾರ ಮಾಡಿ ಲಕ್ಷ ಗ್ರಾಂ ಚಿನ್ನ ದೇಣಿಗೆ ನೀಡಿದ್ದರು.

Advertisement

ಇದೀಗ ಚೀನಾ ಸಂಜಾತ ಮಾರಕ ಸೋಂಕು ಕೋವಿಡ್‌ ವಿರುದ್ಧ ಹೋರಾಟಕ್ಕೆ ಸ್ವಯಂ ಪ್ರೇರಿತವಾಗಿ ಕೋಟಿ ಕೋಟಿ ರೂ. ದೇಣಿಗೆ ನೀಡಿ ದೇಶಪ್ರೇಮಕ್ಕೆ ಮಾದರಿ ಎನಿಸಿದ್ದಾರೆ. 1962ರಲ್ಲಿ ಚೀನಾ ಯುದ್ಧ ಸಾರಿದಾಗ ಸ್ವಾತಂತ್ರÂ ಪಡೆದರೂ ದೇಶ ಇಬ್ಭಾಗವಾಗಿ ಭಾರತ ಆರ್ಥಿಕ ಸಂಕಷ್ಟದಲ್ಲಿತ್ತು. ಈ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಚೀನಾ ಭಾರತದ ಮೇಲೆ 20-10-1962ರಲ್ಲಿ ದಾಳಿ ಮಾಡಿದಾಗ ಭಾರತೀಯ ಸೇನೆಯ 4 ಸಾವಿರಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿ, 10 ಸಾವಿರಕ್ಕೂ ಅಧಿಕ ಸೇನಾನಿಗಳು ಗಂಭೀರ ಗಾಯಗೊಂಡಿದ್ದರು. ಭಾರತದ ಈ ದುಸ್ಥಿತಿ ಕಂಡು ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಅಧೀರರಾಗಿದ್ದರು.

ಆರ್ಥಿಕ ಸಂಕಷ್ಟದ ಕಾರಣಕ್ಕೆ ಚೀನಾದ ಎದುರು ಭಾರತ ಸೋತು ತಲೆತಗ್ಗಿಸುವ ಸ್ಥಿತಿ ಕಂಡ ವಿಜಯಪುರ ಜನ ಕಣ್ಣೀರು ಹಾಕಿದರು. ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಕೊಟ್ಟೆ ಎಂದು ಪ್ರಶ್ನಿಸಿಕೊಂಡರು. ಭೀಕರ ಬರದಿಂದಾಗಿ ಹೊಟ್ಟೆಯಲ್ಲಿ ಹಸಿವು ಕೇಕೆ ಹಾಕುತ್ತಿದ್ದರೂ ಅದನ್ನೆಲ್ಲ ಮರೆತು ದೇಶಕ್ಕಾಗಿ ಮಿಡಿದರು. ಜಿಲ್ಲೆಯ ರಾಜಕೀಯ ಶಕ್ತಿ ಎನಿಸಿದ್ದ ಶಾಸಕ ಪಿ.ಎಂ.ನಾಡಗೌಡ ಹಾಗೂ ದಕ್ಷ ಅಧಿಕಾರಿ ಎನಿಸಿಕೊಂಡ ಅಸಿಸ್ಟಂಟ್‌ ಕಮೀಶ°ರ್‌ ಎಸ್‌.ಎಸ್‌. ಹೊಸಮನಿ ಅವರು ಮುಖ್ಯಮಂತ್ರಿಯನ್ನು ಚಿನ್ನದಲ್ಲಿ ತೂಗಿ ದೇಶಕ್ಕೆ ದೇಣಿಗೆ ಸಮರ್ಪಿಸಲು ನಿರ್ಧರಿಸಿದರು.

1967ರ ಮಾರ್ಚ್‌ 12ರಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ತುಲಾಭಾರ ನಡೆಯಿತು. ಇದಕ್ಕೆ ಸಾಕ್ಷಿಯಾಗಲು ಸ್ವಯಂ ಎಐಸಿಸಿ ಅಧ್ಯಕ್ಷೆಯಾಗಿದ್ದ ಇಂದಿರಾ ಗಾಂಧಿ ಅವರೇ ಬಂದಿದ್ದರು. ತುಲಾಭಾರಕ್ಕೆ ಬಂದಿದ್ದ ಅಖಂಡ ವಿಜಯಪುರ ಜಿಲ್ಲೆಯ ದೇಶಮುಖ, ದೇಸಾಯಿ, ನಾಡಗೌಡ, ಸರನಾಡಗೌಡ, ಪಾಟೀಲ, ಪಟೇಲ್‌ ಅವರಂಥ ಎಲ್ಲ ದೇಶಗತಿ ಮನೆತನಗಳು, ಈ ಮನೆತನಗಳ ಮಹಿಳೆಯರು ಚಿನ್ನದ ಡಾಬು, ವಂಕಿ, ಓಲೆಗಳು, ಕಾಸಿನಸರ, ಚಪಲ್ಹಾರ ಸೇರಿದಂತೆ ತಮ್ಮ ಚಿನ್ನಾಭರಣ ಬಿಚ್ಚಿ ತುಲಾಭಾರಕ್ಕೆ ನೀಡಿದರು. ಆಗ ಅಸ್ತಿತ್ವದಲ್ಲಿ ಸ್ಕೂಲ್‌ ಬೋರ್ಡ್‌ ಅಧೀನದಲ್ಲಿದ್ದ ನೂರಾರು ಶಾಲೆಗಳು ತಮ್ಮ ಬೋರ್ಡ್‌ ಅಧ್ಯಕ್ಷರಾಗಿದ್ದ ಪಿ . ಎಂ. ನಾಡಗೌಡ ಮಾಡುತ್ತಿರುವ ದೇಶಸೇವೆ ಕೆಲಸಕ್ಕೆ ತಾವೂ ಕೈ ಜೋಡಿಸಿ, 12 ಗ್ರಾಂ ತೂಕದಂತೆ ತಲಾ 1-2 ತೊಲೆ ಚಿನ್ನ ನೀಡಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಬಡ ಕಟುಂಬಗಳ ಹರುಕು ಸೀರೆಯಲ್ಲಿದ್ದ ನಿಂತಿದ್ದ ಅಸಂಖ್ಯಾತ ಮಹಿಳೆಯರು ತಮ್ಮಲ್ಲಿದ್ದ ಮೂಗುತಿ, ನತ್ತು, ಬೆಂಡೋಲೆ, ಬುಗುಡಿಯಂಥ ಚಿನ್ನದ ವಸ್ತುಗಳನ್ನು ಬಿಚ್ಚಿ ತುಲಾಭಾರದ ಪುಟ್ಟಿಗೆ ಸುರಿದರು. ಅನ್ನಕ್ಕೂ ಗತಿ ಇಲ್ಲದ ಕಡುಬಡವರು ಕೂಡ ಗುಂಜಿ-ಗುಂಜಿ ಬಂಗಾರವನ್ನು ಸ್ವಯಂ ಪ್ರೇರಣೆಯಿಂದ ದೇಶದ ದೇಣಿಗೆ ಪುಟ್ಟಿಗೆ ಸುರಿದರು.

ಸುಮಾರು 65 ಕೆಜಿ ಭಾರವಿದ್ದ ಸಿಎಂ ನಿಜಲಿಂಗಪ್ಪ ಅವರನ್ನು ತೂಗಿಯೂ ಚಿನ್ನದ ರಾಶಿ ಉಳಿದಿತ್ತು. ಆಗ ವೇದಿಕೆ ಮೇಲಿದ್ದ ಎಐಸಿಸಿ ಅಧ್ಯಕ್ಷೆ ಇಂದಿರಾಗಾಂ  ಅವರನ್ನೂ ತುಲಾಭಾರ ಮಾಡಲು ಮುಂದಾದರು. ಸುಮಾರು 55 ಕೆಜಿ ಇದ್ದ ಇಂದಿರಾ ಅವರನ್ನು ತಕ್ಕಡಿಯಲ್ಲಿಟ್ಟು ತೂಗಿದ ನಂತರವೂ ಹೆಚ್ಚುವರಿಯಾಗಿ ಕೆಜಿಗಟ್ಟಲೆ ಚಿನ್ನ ಉಳಿಕೆಯಾಗಿತ್ತು. ಅಂತಿಮವಾಗಿ ಬಸವನಾಡಿನ ಬಡವ-ಶ್ರೀಮಂತರೆಲ್ಲ ಸೇರಿ ನೀಡಿದ ಚಿನ್ನದ ದೇಣಿಗೆ 1,21,850 ಗ್ರಾಂ ಮೀರಿತ್ತು. ಈ ಚಿನ್ನವನ್ನು ಜಿಲ್ಲೆಯ ಟ್ರೇಜರಿಯಲ್ಲಿರಿಸಿ, ನಂತರ ಕೇಂದ್ರ ಸರ್ಕಾರಕ್ಕೆ ಕಳಿಸಲಾಗಿತ್ತು. ಇದನ್ನು ಕಂಡ ಇಂದಿರಾ ಗಾಂಧಿ ಕಣ್ಣಾಲಿ ತುಂಬಿಕೊಂಡು, ದೇಶಕ್ಕಾಗಿ ವಿಜಯಪುರ ಜಿಲ್ಲೆಯ ಜನ ತೋರಿದ ಅಪ್ರತಿಮ ಮಾದರಿ ಸೇವೆ ಎಂದು ಬಣ್ಣಿಸಿ, ಭವಿಷ್ಯದಲ್ಲಿ ನಿಮ್ಮ ಜಿಲ್ಲೆ ಸಮೃದ್ಧ ನಾಡಾಗಲಿದೆ ಎಂದು ಹರಸಿದ್ದರು.

Advertisement

ಕೊರೊನಾ ಯುದ್ಧಕ್ಕೂ ದೇಣಿಗೆ: ಇದೀಗ ಅದೇ ಚಿನಾ ಸಂಜಾತ ಕೋವಿಡ್‌-19 ಮಹಾಮಾರಿ ಜಗತ್ತನ್ನೇ ಕಂಗೆಡಿಸಿದ್ದು, ಭಾರತವೂ ಬಸವಳಿದಿದೆ. ಇಂದಿನ ಪ್ರಧಾನಿ ಆರ್ಥಿಕ ದುಸ್ಥಿತಿಯನ್ನೂ ಲೆಕ್ಕಿಸದೇ ಕೊರೊನಾ ಮಾರಿಯನ್ನು ಕಟ್ಟಿಹಾಕಲು ಲಾಕ್‌ಡೌನ್‌ ಜಾರಿ ಮಾಡಿದ ಕಾರಣ ದೇಶಕ್ಕೆ ಆರ್ಥಿಕ ದುಸ್ಥಿತಿ ಎದುರಾಗಿದೆ. ಭಾರತವನ್ನು ಆರ್ಥಿಕ ದುಸ್ಥಿತಿಯಿಂದ ಪಾರು ಮಾಡಲು ಬಸವನಾಡಿನ ಜನರು ಬಡತನವನ್ನು ಮೀರಿ ಸರ್ಕಾರಗಳಿಗೆ ಶಕ್ತಿ ನೀಡಲು ಜಿಲ್ಲೆಯ ಜನರು ಸ್ವಯಂ ಪ್ರೇರಣೆಯಿಂದ ಕೊಡುಗೈ ಎತ್ತಿದ್ದಾರೆ.

ಮಾರ್ಚ್‌ 26ರಿಂದ ಮೇ 4ರವರೆಗೆ 128 ಜನರು ಮುಖ್ಯಮಂತ್ರಿ ಪರಿಹಾರ ನಿಧಿಗೆ 1,49,71,543 ರೂ. ಹಾಗೂ ಮಾರ್ಚ್‌ 30ರಿಂದ ಏಪ್ರಿಲ್‌ 27ರವರೆಗೆ 35 ಜನರಿಂದ ಪ್ರಧಾನಿ ಪರಿಹಾರ ನಿ ಗೆ 55,03,212 ರೂ. ಮತ್ತು 19 ದಾನಿಗಳು ಜಿಲ್ಲಾಧಿಕಾರಿಗೆ ಏಪ್ರಿಲ್‌ 4ರಿಂದ 27ರವರೆಗೆ 11,52,000 ರೂ. ದೇಣಿಗೆ ನೀಡಿದ್ದಾರೆ.

ಅಂದಿನ ತುಲಾಭಾರ ಕಾರ್ಯಕ್ರಮದಲ್ಲಿ ಯುವಕನಾಗಿದ್ದ ನಾನು ಸಾಕ್ಷಿಯಾಗಿದ್ದೆ. ಬಸವನಾಡಿನ ಬಡವರು ದೇಶಪ್ರೇಮದ ಎದುರು ಚಿನ್ನವನ್ನೂ ಲೆಕ್ಕಿಸಲಾರರು ಎಂಬುದನ್ನು ಸಾಬೀತುಪಡಿಸಿದ್ದನ್ನು ನೋಡಿ ಬೆರಗಾಗಿದ್ದೆ. ಅಂದಿನ ಘಟನೆ ಇಂದಿಗೂ ಕಣ್ಣು ಕಟ್ಟಿದೆ. ಮಹಾಂತ ಗುಲಗಂಜಿ
ಚಿನ್ನದ ತುಲಾಭಾರ ಪ್ರತ್ಯಕ್ಷದರ್ಶಿ

ಬರಗಾಲ, ಬಡತನ ಮೆಟ್ಟಿನಿಂತು ಸಿಎಂ ಮಾತ್ರವಲ್ಲ ತಮ್ಮನ್ನು ಚಿನ್ನದಲ್ಲಿ ತೂಗಿ ದೇಶಕ್ಕೆ ಸಮರ್ಪಿಸಿದ ಜಿಲ್ಲೆಯ ಜನರನ್ನು ಇಂದಿರಾ ಗಾಂಧಿ ಹೃದಯ ತುಂಬಿ ಸ್ಮರಿಸಿದ್ದನ್ನು ನಮ್ಮ ಹಿರಿಯರು ಹೇಳುತ್ತಾರೆ. ಇಂದಿರಾಜೀ ಅವರ ಹಾರೈಕೆಯಂತೆ ಇಂದು ನೀರಾವರಿಯಿಂದ ಜಿಲ್ಲೆ ಸಮೃದ್ಧವಾಗಿದೆ.
ಡಾ| ಮಹಾಂತೇಶ ಬಿರಾದಾರ
ಮಲಘಾಣ

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next