Advertisement

ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರ ಅಳವಡಿಸಿ

04:38 PM May 05, 2019 | Naveen |

ವಿಜಯಪುರ: ಸರಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಕೆ ಕುರಿತು ಸರ್ಕಾರದ ಅಧಿಕೃತ ಆದೇಶವಿದ್ದರೂ ಈವರೆಗೆ ಪಾಲನೆ ಆಗಿಲ್ಲ. ಹೀಗಾಗಿ ಜಿಲ್ಲೆಯ ಎಲ್ಲ ಸರಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಬಸವೇಶ್ವರರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸಲು ಆಗ್ರಹಿಸಿ ರಾಷ್ಟ್ರೀಯ ಬಸವ ಸೇನೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ರಾಷ್ಟ್ರೀಯ ಬಸವ ಸೇನೆ ಜಿಲ್ಲಾಧ್ಯಕ್ಷ ಸೋಮನಗೌಡ ಕಲ್ಲೂರ, ಮೇ 7ರಂದು ಬಸವ ಜಯಂತಿ ಒಳಗಾಗಿ ಎಲ್ಲ ಸರಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸಬೇಕು. ಸರಕಾರದ ಆದೇಶವನ್ನು ಗಾಳಿಗೆ ತೂರಿ ಬಸವಾದಿ ಶರಣರಿಗೆ ಅಪಮಾನ ಮಾಡಿದಲ್ಲಿ ರಾಷ್ಟ್ರೀಯ ಬಸವ ಸೇನೆ ಕಾರ್ಯಕರ್ತರು ಸರಕಾರಿ ಕಚೇರಿಗಳಿಗೆ ಬೀಗ ಹಾಕಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಸಂಘಟನೆ ಸದಸ್ಯೆ ಸ್ವಪ್ನಾ ಕಣಮುಚನಾಳ ಮಾತನಾಡಿ, ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ವಿಶ್ವಗುರು ಬಸವಣ್ಣನವರು ಕಲ್ಯಾಣ ರಾಜ್ಯ ಕನಸಿಗಾಗಿ ಅನುಭವ ಮಂಟಪದ ಮೂಲಕ ವಿಶ್ವದ ಮೊಟ್ಟ ಮೊದಲ ಪ್ರಜಾ ಪ್ರಭುತ್ವ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದರು. ಸಾಮಾಜಿಕ ಸಮಾನತೆ, ಮಹಿಳಾ ಸ್ವಾತಂತ್ರ್ಯದಂಥ ಹಲವು ಸಾಮಾಜಿಕ ಕ್ರಾಂತಿಗೆ ಕಾರಣವಾದ ವಿಶ್ವಗುರು ಬಸವಣ್ಣ ವಿಜಯಪುರ ಜಿಲ್ಲೆಯ ಮಹಾಪುರುಷ ಎಂಬುದು ನಾಡಿಗೆ ಹೆಮ್ಮೆಯ ಸಂಗತಿ. ಇದನ್ನರಿತು ರಾಜ್ಯ ಸರ್ಕಾರ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಅಳವಡಿಕೆಗೆ ಸೂಚಿಸಿದ್ದರೂ ಪಾಲನೆ ಆಗಿಲ್ಲ. ಬಸವ ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಿ, ರಜೆಯ ಮೋಜು ಮಸ್ತಿಯಲ್ಲಿ ಕಾಲ ಕಳೆಯದೆ ಎಲ್ಲರೂ ಸಂಭ್ರಮದಿಂದ ಆಚರಿಸಬೇಕು ಎಂದು ಗ್ರಹಿಸಿದರು.

ಸಂಘಟನೆ ಪ್ರಧಾನ ಕಾರ್ಯದರ್ಶಿ ದಾನೇಶ ಅವಟಿ, ನಗರ ಅಧ್ಯಕ್ಷ ಆನಂದ ಜಂಬಗಿ, ಬಸವರಾಜ ಅವಜಿ, ಭೀಮಾಶಂಕರ ಪತ್ತಾರ ಮಾತನಾಡಿದರು. ಶಿವು ಮಿಂಚಿನಾಳ, ಸಂತೋಷ ಪಾಟೀಲ, ತಾಹೀರ್‌ ಹುಸೇನ್‌, ಶಿವಾನಂದ ವಿಭೂತಿ, ರಾಮಣ್ಣ ವಜ್ರಮಟ್ಟಿ, ಶಿವು ಭೂತನಾಳ, ಅಮಿತ ತಂಗಾ, ಪಿಂಟು ಪಾಟೀಲ, ರಮೇಶ ಶಿರೂರ (ಕೋರವಾರ), ಪರಶುರಾಮ ಕೊಂಚಿಕೊರವರ, ಶ್ರೀಕಾಂತ ಬಿರಾದಾರ, ರವಿ ಹೂಗಾರ, ದುರಗೇಶ ಜುಮನಾಳ, ವಿಶಾಲ ಗೌಳಿ, ಶಿವು ಮನಗೂಳಿ, ಸಂತೋಷ ಕೊಂಚಿಕೊರವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next