ವಿಜಯಪುರ: ಬಸವನಬಾಗೇವಾಡಿಗೆ ರೈಲ್ವೆ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣನವರ ಹೆಸರು ನಾಮಕರಣ ಮಾಡಬೇಕು. ಶತಾಬ್ದಿ ಎಕ್ಸಪ್ರಸ್ ರೈಲನ್ನು ಹುಬ್ಬಳ್ಳಿ ಮೇಲೆ ಹಾದು ಹೋಗುವಂತೆ ಮಾಡುವುದು ಸೇರಿದಂತೆ ವಿಜಯಪುರ ಜಿಲ್ಲೆ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಸೇವೆ ಆರಂಭಿಸುವಂತೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿಯ ರೈಲ್ವೆ ಸೌಧದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ವಿಜಯಪುರಕ್ಕೆ ಸಂಬಂಧಿ ಸಿದ ರೈಲ್ವೆ ಬೇಡಿಕೆಗಳ ಕುರಿತು ತಮ್ಮ ವಾದ ಮಂಡಿಸಿರುವ ಯತ್ನಾಳ ಅವರು, ಅವಳಿ ಜಿಲ್ಲೆಗಳಿಗೆ ರೈಲ್ವೆ ಸೌಲಭ್ಯಗಳನ್ನು ಸಮರ್ಪಕವಾಗಿ ಪೂರೈಸುವಂತೆ ಹಾಗೂ ಸದ್ಯ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಕೋರಿದರು.
ವಿಜಯಪುರ ಜಿಲ್ಲೆಗೆ ಸಂಬಂ ಧಿಸಿದ ರೈಲ್ವೆ ಸಂಬಂಧಿ ಬೇಡಿಕೆಗಳನ್ನು ಲಿಖೀತ ರೂಪದಲ್ಲಿ ಕೇಂದ್ರ ಸಚಿವರಿಗೆ ಸಲ್ಲಿಸಿದರು. ಅದರಲ್ಲಿ ಪ್ರಮುಖವಾಗಿ ಬಸವನಬಾಗೇವಾಡಿ ರೈಲ್ವೆ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣನವರ ಹೆಸರಿಡುವುದು, ವಿಜಯಪುರ, ಹುಬ್ಬಳ್ಳಿ ಜನತೆ ಅನುಕೂಲತೆ ದೃಷ್ಟಿಯಿಂದ ಕರ್ನಾಟಕ, ಶತಾಬ್ದಿ ಎಕ್ಸ್‌ಪ್ರೆಸ್‌ಗಳನ್ನು ಬೆಳಗಾವಿ ಕೊಂಕಣ ಮೇಲೆ ಹಾಯ್ದು ಹೋಗುವ ಬದಲು ಹುಬ್ಬಳ್ಳಿ ಮೇಲೆ ಹಾಯ್ದು ಹೋಗುವ ಅವಕಾಶ ಕಲ್ಪಿಸಬೇಕು ಎಂದರು.
ವಿಜಯಪುರ ಜಿಪಂ ಬಳಿ ಈಗಾಗಲೇ ಲಭ್ಯವಿರುವ ಜಾಗೆಯಲ್ಲಿ ಪುಟಾಣಿ ರೈಲು ಸಂಚಾರ ಆರಂಭಿಸಿ ಪುಟಾಣಿ ರೈಲ್ವೆ ಪಾರ್ಕ್ ನಿರ್ಮಿಸಬೇಕು. ವಜ್ರ ಹನುಮಾನ ನಗರದ ರೈಲ್ವೆ ಮೆಲ್ಸೇತುವೆ ಕಾಮಗಾರಿ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿ ಈ ಬಗ್ಗೆ ತನಿಖೆ ನಡೆಸಬೇಕು. ಅ ಧಿಕಾರಿಗಳ ತಂಡವನ್ನು ಕಳುಹಿಸಿ ಈ ಬಗ್ಗೆ ಪರಿಶೀಲನೆ ನಡೆಸಲು ವಿನಂತಿಸಿದರು.
ನೀರಾವರಿ ಯೋಜನೆಗಳು ವಿಜಯಪುರ ಜಿಲ್ಲೆಯೊಳಗೆ ಎಲ್ಲ ಕೆನಾಲುಗಳು ಹರೆದಿದ್ದು ಆ ಕೆನಾಲುಗಳ ನೀರು ರೈಲ್ವೆ ಹಳಿ ಕೆಳಗಿನಿಂದ ಹಾಯ್ದು ಹೊಗಬೇಕು. ಆದ್ದರಿಂದಾಗಿ ಅನುಮತಿ ನೀಡಬೇಕಾಗಿದ್ದು, ಕೂಡಲೇ ರೈಲ್ವೆ ಇಲಾಖೆ ಈ ಬಗ್ಗೆ ಗಮನ ಹರಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.
ಯತ್ನಾಳರ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ವಿಜಯಪುರ, ಬಸವನಬಾಗೇವಾಡಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಅನುದಾನ ಮೀಸಲಿರಿಸುವಂತೆ ಕೋರಲಾಗುವುದು, ಅದೇ ತೆರನಾಗಿ ಫೆ. 15ರಂದು ವಿಜಯಪುರ-ಹುಬ್ಬಳ್ಳಿ ಇಂಟರ್ ಸಿಟಿ ರೈಲ್ವೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ನೈರುತ್ಯ ರೈಲ್ವೆ ಮಹಾಪ್ರಬಂಧಕ ಅಜಯ್‌ಕುಮಾರ ಸಿಂಗ್ ಪಾಲ್ಗೊಂಡಿದ್ದರು.