ವಿಜಯಪುರ: ಮನುಷ್ಯನಾಗಿ ಈ ಭೂಮಿ ಮೇಲೆ ಜನ್ಮತಾಳಿದ ಪ್ರತಿಯೊಬ್ಬರೂ, ಪ್ರೀತಿ, ತ್ಯಾಗ, ಸಹಾಯ ಮನೋಭಾವ ಮೂಲಕ ಮಾನವೀಯತೆ ತೋರಿ ಬಡಜನರ ಬದುಕನ್ನು ಹಸನಾಗಿಸಬೇಕು ಎಂದು ಜಪಾನ್ ದೇಶದ ಫ್ರೆಂಡ್‌ಶಿಫ್ ಸೊಸೈಟಿ ಸಂಸ್ಥಾಪಕ ಕೆಮಿಹಿಕೋ ಮುರಾಕಮಿ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಜರುಗಿದ ಏಷಿಯನ್ ಫ್ರೆಂಡ್‌ಶಿಫ್ ಸೊಸೈಟಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾನವನಾಗಿ ಜನಿಸಿದ ಪ್ರತಿಯೊಬ್ಬರೂ ತಮ್ಮ ಜೀವಿತದ ಅವಧಿಯಲ್ಲಿ ಸತ್ಕಾರ್ಯಗಳನ್ನು ಮಾಡಬೇಕು. ಬಡಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಜಪಾನ್ ದೇಶದಲ್ಲಿ ತಾನೂ ಬದುಕುವುದು ಮತ್ತು ಇನ್ನೊಬ್ಬ ನೊಂದ ಮನುಷ್ಯನಿಗೆ ಸಹಾಯ ಮಾಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಂಡಿದ್ದರಿಂದ ಚಿಕ್ಕ ದೇಶವಾಗಿದ್ದರೂ ಜಗತ್ತಿನಲ್ಲಿಯೇ ಮಾದರಿ ದೇಶವಾಗಿದೆ ಎಂದರು.
19 ರಾಷ್ಟ್ರಗಳಲ್ಲಿ ಏಷಿಯನ್ ಫ್ರೆಂಡ್‌ಶಿಫ್ ಸೊಸೈಟಿ 164 ಶಾಖೆಗಳನ್ನು ಹೊಂದಿದೆ. ಶುದ್ದ ಕುಡಿಯುವ ನೀರು, ಶಾಲೆಗಳ ಅಭಿವೃದ್ಧಿ, ಅರಣ್ಯೀಕರಣ, ಪರಿಸರ ಸಂರಕ್ಷಣೆಯಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜಯಪುರದ ಜೊತೆ ಕಳೆದ 25 ವರ್ಷಗಳಿಂದ ಸಂಪರ್ಕ ಹೊಂದಿದ್ದು, ಕುಡಿಯುವ ನೀರಿಗಾಗಿ ಹಲವಾರು ಬೋರ್‌ವೆಲ್ ಮತ್ತು ಸಸಿ ನೆಡುವ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಇಂದು ನೂತನ ಶಾಲೆಯನ್ನು ಜಿಲ್ಲೆಯಲ್ಲಿ ಉದ್ಘಾಟಿಸಿದ್ದಕ್ಕೆ ನನಗೆ ಹೆಮ್ಮೆಯೆನಿಸುತ್ತಿದೆ ಅದಕ್ಕಾಗಿ ಮುಂಬರುವ ದಿನಗಳಲ್ಲಿ ಜಿಲ್ಲೆಯ ವಿಕಾಸಕ್ಕಾಗಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದರು.
ಹಿರಿಯ ಪತ್ರಕರ್ತ ಗೋಪಾಲ ನಾಯಕ ಮಾತನಾಡಿ, ಜಪಾನ್ ಏಶಿಯನ್ ಸೊಸೈಟಿ ಜೊತೆ ತಮಗಿರುವ ನಿಕಟ ಸಂಪರ್ಕದ ಬಗ್ಗೆ ಸ್ಮರಿಸುತ್ತ, ಇದೊಂದು ಒಳ್ಳೆಯ ಸಮಾಜಮುಖೀ ಸಂಸ್ಥೆಯಾಗಿದ್ದು, ಜಿಲ್ಲೆಯ ಬಡಜನರ ಏಳಿಗೆ, ರೈತರ ಅಭಿವೃದ್ಧಿಗೆ ನೂತನ ಸಂಸ್ಥೆಯಿಂದ ಅನುಕೂಲವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿದ್ದ ಜಪಾನ್‌ನ ಅಖೀರೋ ತಕಡಾ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಬಾಪುಗೌಡ ಪಾಟೀಲ (ಶೇಗುಣಸಿ), ಏಷಿಯನ್ ಪ್ರಂಡ್‌ಶಿಪ್ ಸಂಸ್ಥೆ ವಿಭಾಗೀಯ ಸಂಯೋಜಕ ಪ್ರಮೋದ ಥೊರಾತ್, ಸಾಂಗ್ಲಿ ವಿಭಾಗದ ಕುಮದಿನಿ ನಾಸ್ತಿ, ನಂದಿನಿ ಕುಂಬಾರ, ಚನ್ನಮ್ಮ ಕುಂಬಾರ ತಮ್ಮ ಅನುಭವ ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಉಕ್ಕಲಿಯ ಪಿಕೆಪಿಎಸ್ ಅಧ್ಯಕ್ಷ ಎ.ಎಂ. ಪಾಟೀಲ ತಮ್ಮ ಗ್ರಾಮಕ್ಕೆ ಏಷಿಯನ್ ಪ್ರಂಡ್‌ಶಿಪ್ ಸೊಸೈಟಿಯಿಂದ 25 ವರ್ಷಗಳ ಹಿಂದೆ 7 ಬೋರ್‌ವೆಲ್ ಕೊರೆಸಿದ್ದು ಇಂದೂ ಕೂಡಾ ಅದು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದಕ್ಕೆ ಗ್ರಾಮೀಣ ಭಾಗದ ಜನರೆಲ್ಲ ಜಪಾನ್ ಬೋರ್ ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ ಹಾಗೂ ಉಕ್ಕಲಿಯ 8 ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟಿದ್ದು ಅವುಗಳಿಂದು ಹೆಮ್ಮರವಾಗಿವೆ ಎಂದು ಹೇಳಿದರು.
ಸಂಸ್ಥೆಯ ನಿಯೋಜಿತ ಅಧ್ಯಕ್ಷ, ಪ್ರಗತಿಪರ ರೈತ ಕಲ್ಲನಗೌಡ ಪಾಟೀಲ, ಕೋಶಾಧ್ಯಕ್ಷರಾಗಿ ಪರಮಾನಂದ ಬಡಿಗೇರ ಅವರು ಅಧಿಕಾರ ಸ್ವೀಕರಿಸಿದರು. ಚೇತನಾ ಹಾಗೂ ಆದಿತ್ಯ ಬಡಿಗೇರ ಪ್ರಾರ್ಥಿಸಿದರು. ಡಾ| ಆರ್.ಬಿ. ಬೆಳ್ಳಿ ನಿರೂಪಿಸಿದರು. ಬಿ.ಬಿ. ಬಿರಾದಾರ ವಂದಿಸಿದರು.