Advertisement

Vijayapura; ವಿಪಕ್ಷ ನಾಯಕನ ಸ್ಥಾನಕ್ಕೆ ಅಶೋಕ ರಾಜೀನಾಮೆ ನೀಡಲಿ: ಎಂ.ಬಿ.ಪಾಟೀಲ

04:44 PM Jul 20, 2024 | Team Udayavani |

ವಿಜಯಪುರ: ಹುಬ್ಬಳ್ಳಿ ಕೆಐಎಡಿಬಿ ಭೂ ಹಗರಣ ಪ್ರಕರಣದಲ್ಲಿ ಒಂದೇ ಭೂಮಿಗೆ ಎರಡು ಬಾರಿ ಪರಿಹಾರ ನೀಡಿರುವ ಅಕ್ರಮ ನಡೆದಿರುವುದು ಬಿಜೆಪಿ ಸರ್ಕಾರ ಇದ್ದಾಗ. ಆಗಿನ ಎಸ್‍ಎಲ್‍ಒ ಅಧಿಕಾರಿ ಮೇಲೆ ಪ್ರಕರಣ ದಾಖಲಾಗಿ, ಜೈಲಿಗೆ ಹೋಗಿದ್ದಾರೆ. ಹೀಗಾಗಿ ವಿಪಕ್ಷದ ನಾಯಕ ಸ್ಥಾನಕ್ಕೆ ಆರ್.ಅಶೋಕ ರಾಜೀನಾಮೆ ನೀಡಬೇಕು ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಆಗ್ರಹಿಸಿದರು.

Advertisement

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದುರುದ್ದೇಶದಿಂದ ನಡೆದಿರುವ ಈ ಅವ್ಯವಹಾರದ ಕುರಿತು ಈಗ ತನಿಖೆ ನಡೆಯುತ್ತಿದ್ದು, ಇದೇ ಪ್ರಕರಣದಲ್ಲಿ ಸಜ್ಜನ ಎಂಬ ಅಧಿಕಾರಿ ಈಗಲೂ ಜೈಲಿನಲ್ಲಿದ್ದಾರೆ ಎಂದರು

ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರುವುದು ಬಯಲಾಗಿದ್ದು, ಈಗಾಗಲೇ ತನಿಖೆ ನಡೆದಿದೆ. ಇದೇ ವಿಷಯವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸುಧೀರ್ಘವಾಗಿ ಮಾತನಾಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‍ಐಟಿ, ಇಡಿ ಈಗಾಗಲೇ ಹಣವನ್ನು ವಶಕ್ಕೆ ಪಡೆಯುವ ಕೆಲಸದಲ್ಲಿ ನಿರತವಾಗಿದೆ ಎಂದರು.

ಸಾಮಾನ್ಯರು ಸಾಲ ಕೇಳಿದರೆ ತ್ವರಿತವಾಗಿ ಸ್ಪಂದಿಸದ ಬ್ಯಾಂಕ್ ಅಧಿಕಾರಿಗಳು ವಾಲ್ಮೀಕಿ ಹಗರಣದ ಪ್ರಕರಣದಲ್ಲಿ ಭಾಗಿಯಾಗಿದ್ದು, ಬ್ಯಾಂಕ್‍ ನವರ ತಪ್ಪು ಇದೆ. ಇದರಲ್ಲಿ ಸರ್ಕಾರದ ತಪ್ಪೇನೂ ಇಲ್ಲ. ಹಗರಣ ಕೇಳಿ ಬಂದಾಗ ಸರ್ಕಾರ ಸುಮ್ಮನೇ ಕುಳಿತಿಲ್ಲ. ತಪ್ಪಿತಸ್ತರು ಯಾರೇ ಇದ್ದರೂ ತನಿಖೆಯಾಗಲಿ ಎಂದರು.

ಇಷ್ಟಕ್ಕೂ ಪ್ರಕರಣದಲ್ಲಿ ಅಂದಿನ ಸಚಿವ ನಾಗೇಂದ್ರ ಅವರ ಮೇಲೆ ನೇರ ಆರೋಪವಿಲ್ಲ, ಆದರೆ ಮೌಖಿಕ ನಿರ್ದೇಶನ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಆದರೂ ಈ ಬಗ್ಗೆ ನಡೆಯುತ್ತಿರುವ ತನಿಖೆಯ ಬಳಿಕ ಸತ್ಯ ಹೊರ ಬರಲಿದೆ ಎಂದರು.

Advertisement

ಮೌಖಿಕ ಆದೇಶ ಎಂದು ಯಾರು ಬೇಕಾದರು ಆರೋಪ ಮಾಡಬಹುದು. ನಿಗಮಗಳಲ್ಲಿ ಮೌಖಿಕ ಆದೇಶ ಅಲ್ಲ, ರೈಟಿಂಗಲ್ಲಿ ಕೊಟ್ಟರು ಕಾನೂನು ಬಾಹಿರವಾಗಿದ್ದರೆ ವ್ಯವಸ್ಥಾಪಕ ನಿರ್ದೇಶಕರು ಕೆಲಸ ಮಾಡಬಾರದರು. ಹೀಗಾಗಿ ಸದರಿ ಪ್ರಕರಣದಲ್ಲಿ ವ್ಯವಸ್ಥಾಪಕ ನಿರ್ದೇಶಕರ ಪಾತ್ರವೂ ಇದೆ ಎಂದರು.

ಕೇಂದ್ರ ವಿತ್ತ ಸಚಿವರು ಎಚ್ಚರಿಕೆ ವಹಿಸಬೇಕಿತ್ತು, ಅವರು ಸಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ನಡೆದಿರುವ ಹಗರಣದ ಕುರಿತು ನಾವು ಪಟ್ಟಿ ಮಾಡುತ್ತಿದ್ದೇವೆ. ಎಲ್ಲ ಹಗರಣಗಳ ತನಿಖೆ ನಡೆಯುತ್ತವೆ. ಈ ಕುರಿತು ಸಿಬಿಐ ತನಿಖೆಯಾಗಲಿ ಎಂದರು.

ವಾಲ್ಮೀಕಿಯಲ್ಲಿ ಅವ್ಯವಹಾರ ಆಗಿದ್ದು ಸತ್ಯ, ಆದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಾವುದೇ ರೀತಿಯಲ್ಲಿ ಹಗರಣ ಆಗಿಲ್ಲ ಎಂದರು.

ಯತ್ನಾಳ್ ಅನಧಿಕೃತ ವಿಪಕ್ಷ ನಾಯಕ

ರಾಜ್ಯ ವಿಧಾನಸಭೆಯಲ್ಲಿ ಆರ್.ಅಶೋಕ ಅಧಿಕೃತ ವಿರೋಧ ಪಕ್ಷದ ನಾಯಕರಾದರೆ, ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಅನಧಿಕೃತ ವಿರೋಧ ಪಕ್ಷದ ನಾಯಕಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ಕುಟುಕಿದ್ದಾರೆ.

ಬಿಜೆಪಿ ಸರ್ಕಾರ ಇದ್ದಾಗ ಸಾವಿರಾರು ಕೋಟಿ ರೂ. ಕೋವಿಡ್ ಹಗರಣ ನಡೆದಿದೆ ಎಂದು ಬಿಜೆಪಿ ಶಾಸಕ ಯತ್ನಾಳ ಆರೋಪಿಸಿದ್ದಾರೆ. ಈ ಕುರಿತು ಯತ್ನಾಳ ಬಳಿ ದಾಖಲೆ ಇದ್ದರೆ ಸರ್ಕಾರಕ್ಕೆ ಕೊಟ್ಟಲ್ಲಿ ತನಿಖೆ ನಡೆಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 10 ಸಾವಿರ ಕೋಟಿ ಹಣವನ್ನು ಮಾರಿಷಸ್ ದೇಶದಲ್ಲಿ ಇರಿಸಿದ್ದಾರೆ ಎಂದು ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಹೇಳಿದ್ದರು. ಯತ್ನಾಳ ಸುಳ್ಳು ಹೇಳ್ತಾರಾ, ವಿಜಯಪುರ ಜಿಲ್ಲೆಯವರು ಸುಳ್ಳು ಹೇಳಲ್ಲ ಎಂದುಕೊಂಡಿದ್ದೇನೆ ಎಂದು ಕುಟುಕಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಗುಡ್ಡ ಕುಸಿತವಾಗಿರುವ ಶಿರೂರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಇಷ್ಟೊಂದು ಆತುರದಲ್ಲಿರುವುದು ಏಕೆ, ತಾವು ಮುಖ್ಯಮಂತ್ರಿ ಆಗಿದ್ದಾಗ ಸಂಭವಿಸಿದ್ದ ನೈಸರ್ಗಿಕ ವಿಕೋಪದ ಎಷ್ಟು ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಕುಟುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next