ವಿಜಯಪುರ: ಭಾರತ ರತ್ನ ಡಾ| ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಸಮಿತಿ ಸ್ವತಂತ್ರ ಭಾರತ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ರೂಪಿಸಿಕೊಟ್ಟ ಲಿಖೀತ ಸಂವಿಧಾನ ವಿಶ್ವಕ್ಕೆ ಶ್ರೇಷ್ಠ ಹಾಗೂ ಮಾದರಿ ಎನಿಸಿದೆ. ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ 129ನೇ ಜಯಂತಿ ಅಂಗವಾಗಿ ಡಾ| ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಸಮರ್ಪಿಸಿ ಮಾತನಾಡಿದ ಅವರು, ಭಾರತೀಯರಾದ ನಾವುಗಳು ಸಂವಿಧಾನದಿಂದ ಪಡೆದಿರುವ ಹಕ್ಕುಗಳನ್ನು ಹಾಗೂ ಕರ್ತವ್ಯಗಳ ಪಾಲನೆಯನ್ನೂ ಮಾಡಬೇಕು ಎಂದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕರ್ತವ್ಯಗಳು, ನಡತೆ ಹಾಗೂ ಸಂವಿಧಾನ ಆಧಾರಿತ ಕಾನೂನುಗಳು ಭಾರತೀಯರಿಗೆ ನೆರವಾಗಿದೆ. ಸಂವಿಧಾನದ ವಿರುದ್ಧ ಯಾವುದೇ ಪರ್ಯಾಯ ಕಾನೂನು ರೂಪಿಸಿದರೂ ತನ್ನಷ್ಟಕ್ಕೆ ತಾನೇ ಬಿದ್ದು ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಡಾ| ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ದಿನವು ವಿಶ್ವಕ್ಕೆ ದಲಿತರ ದಿನವಾಗಿದೆ. ಸ್ವಾತಂತ್ರಾÂ
ನಂತರ ಈ ವರೆಗೆ 130 ಕೋಟಿ ಜನಸಂಖ್ಯೆಯಲ್ಲಿ ಸಾವಿರಾರು ಜಾತಿ, ಧರ್ಮ, ಬಡವ-ಶ್ರೀಮಂತ ಎಂಬ ಭೇದ ಭಾವ ಇಲ್ಲದೇ ಜೀವಿಸುತ್ತಿದ್ದಾರೆ. ಎಲ್ಲರೂ ಒಂದೇ ಎಂಬ ತಳಹದಿಯ ಮೇಲೆ ಒಗ್ಗಟ್ಟಾಗಿ ನಿಲ್ಲಿಸುವಲ್ಲಿ ಸಂವಿಧಾನ ಮಾರ್ಗದರ್ಶಿಯಾಗಿದೆ ಎಂದರು.
ದೇಶ ಪ್ರಸ್ತುತ ಸಂದರ್ಭದಲ್ಲಿ ಕೊರೊನಾದಂತಹ ಮಹಾಮಾರಿಯ ವಿರುದ್ಧ ಹೋರಾಡುವ ಶಕ್ತಿ ಲಭಿಸಿದೆ. ಇಂದಿನ ಕೊರೋನಾದಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಎಲ್ಲರೂ ಧೈರ್ಯದಿಂದ ಮಹಾಮಾರಿಯನ್ನು ಎದುರಿಸುವ ಶಕ್ತಿಯನ್ನೂ ಸಂವಿಧಾನ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಹಾಮಾರಿಯ ನಿಯಂತ್ರಣಕ್ಕೆ ನೆರವಾಗೋಣ ಎಂದರು.
ಇದಕ್ಕೂ ಮೊದಲು ನಗರದ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾ ಧಿಕಾರಿ ವೈ.ಎಸ್ .ಪಾಟೀಲ, ಎಸ್ಪಿ ಅನುಪಮ ಅಗರವಾಲ್, ಜಿಪಂ ಸಿಇಒ ಗೋವಿಂದರಡ್ಡಿ, ಎಎಸ್ಪಿ ರಾಮ ಅರಸಿದ್ಧಿ, ಡಿಎಸ್ಪಿ ಲಕ್ಷ್ಮೀನಾರಾಯಣ್, ಉಪವಿಭಾಗಾಧಿ ಕಾರಿ ಸೋಮಲಿಂಗ ಗೆಣ್ಣೂರ, ಸಮಾಜ ಕಲ್ಯಾಣ ಉಪ ನಿರ್ದೇಶಕ ಮಹೇಶ ಪೋದ್ದಾರ, ಕೈಗಾರಿಕಾ ಜಂಟಿ ನಿರ್ದೇಶಕ ಸಿದ್ದಣ್ಣ, ಪಶು ಸಂಗೋಪನೆ ಇಲಾಖೆ ಪ್ರಾಣೇಶ ಜಹಾಗೀರದಾರ, ದಲಿತ ಸಂಘಟನೆಗಳ ಪ್ರಮುಖರಾದ ಅಡಿವೆಪ್ಪ ಸಾಲಗಲ್, ಅಭಿಷೇಕ ಚಕ್ರವರ್ತಿ, ಜಿತೇಂದ್ರ ಕಾಂಬಳೆ, ಚಂದ್ರಶೇಖರ್ ಕೊಡಬಾಗಿ, ಸುರೇಶ ಗೊಣಸಗಿ, ಸಿದ್ದು ರಾಯಣ್ಣ, ಶಾಂತಪ್ಪ ಶಹಾಪುರ ಇದ್ದರು.