Advertisement

ಚಿನ್ನದ ವ್ಯಾಪಾರದಲ್ಲಿ ಏರಿಕೆ ತರದ ಅಕ್ಷಯ ತೃತೀಯ

05:12 PM May 08, 2019 | Team Udayavani |

ವಿಜಯಪುರ: ಅಕ್ಷಯ ತೃತೀಯ ಬಂತೆಂದರೆ ಸಾಕು ಚಿನ್ನದ ವ್ಯಾಪಾರ ವ್ಯವಸ್ಥೆಯಲ್ಲಿ ಸಾಮಾನ್ಯ ವಹಿವಾಟಿಗಿಂತ ದುಪ್ಪಟ್ಟು, ಮೂರು ಪಟ್ಟು ಏರಿಕೆ ಕಾಣುತ್ತಿದ್ದ ವೇಗ ಈ ಬಾರಿ ಜಿಲ್ಲೆಯಲ್ಲಿ ನಿರೀಕ್ಷಿತ ವಹಿವಾಟು ಕಂಡಿಲ್ಲ. ನಿರಂತರ ಬರ, ಎರಡು ವರ್ಷಗಳ ಹಿಂದೆ ನಡೆದ ನೋಟು ಅಮಾನ್ಯೀಕರಣದಂಥ ಹಲವು ಕಾರಣಗಿಂದಾಗಿ ಈ ಬಾರಿಯ ಅಕ್ಷಯ ತೃತೀಯ ಹಳದಿ ಲೋಹದ ವ್ಯಾಪಾರದಲ್ಲಿ ಏರಿಕೆ ಕಾಣಲು ಸಾಧ್ಯವಾಗಿಲ್ಲ.

Advertisement

ವಿಜಯಪುರ ನಗರದಲ್ಲಿ ದೊಡ್ಡ ಮಟ್ಟದ ಚಿನ್ನದ ವಹಿವಾಟು ಮಾಡುವ ಸುಮಾರು 70 ಚಿನ್ನದ ವ್ಯಾಪಾರಿಗಳು ಸೇರಿದಂತೆ ಸಣ್ಣ-ಪುಟ್ಟ ವಹಿವಾಟುದಾರರು ಸೇರಿ 300 ಜನ ಚಿನ್ನದ ವ್ಯಾಪಾರಿಗಳಿದ್ದಾರೆ. ಕಳೆದ ಒಂದು ದಶಕದ ಹಿಂದಿನ ವ್ಯಾಪಾರಕ್ಕೆ ಹೋಲಿಸಿದರೆ ಒಂದಲ್ಲ ಒಂದು ಕಾರಣಕ್ಕೆ ಚಿನ್ನದ ವ್ಯಾಪಾರದಲ್ಲಿ ಏರಿಕೆ ಕಾಣಲು ಸಾಧ್ಯವಾಗಿಲ್ಲ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯನ್ನು ಸತತವಾಗಿ ಕಾಡುತ್ತಿರುವ ಭೀಕರ ಬರಗಾಲ, ನೋಟು ಅಮಾನ್ಯೀಕರಣ, ಜಿಎಸ್‌ಟಿ ಹೇರಿಕೆ, ಕೊಳ್ಳುವ ಪ್ರತಿ ಚಿನ್ನಕ್ಕೂ ದಾಖಲೀಕರಣ, ಜನರಲ್ಲಿ ಕೊಳ್ಳುವ ಶಕ್ತಿ ಕುಂದುವಿಕೆ ಸೇರಿದಂತೆ ಹಲವು ಕಾರಣಗಳಿಂದಾಗಿ ಚಿನ್ನದ ವ್ಯಾಪಾರ ಕುಗ್ಗುತ್ತಲೇ ಸಾಗಿದೆ.

ಸಾಮಾನ್ಯ ದಿನದ ವ್ಯಾಪಾರ ಏನೇ ಇದ್ದರೂ ಅಕ್ಷಯ ತೃತೀಯ ದಿನದಂದು ಚಿನ್ನದ ವ್ಯಾಪಾರದಲ್ಲಿ ಭಾರಿ ಪ್ರಮಾಣದ ಏರಿಕೆ ಇದ್ದೇ ಇರುತ್ತಿತ್ತು. ಮದುವೆ ಸೀಸನ್‌ ಇದ್ದರೂ ಚಿನ್ನ ಕೊಳ್ಳುವ ಶಕ್ತಿ ಇಲ್ಲದೇ ಜನರು ಪ್ರಮಾಣದಲ್ಲಿ ಕಡಿಮೆ ಮಾಡುತ್ತಿದ್ದಾರೆ. ವಿಶ್ವಾಸಾರ್ಹತೆ ಇರುವ ದೊಡ್ಡ ಮಟ್ಟದ ಚಿನ್ನದ ವ್ಯಾಪಾರಿ ಮಳಿಗೆಗಳಲ್ಲಂತೂ ನಿಲ್ಲಲೂ ಸ್ಥಳ ಇಲ್ಲದಂತೆ ಚಿನ್ನ ಕೊಳ್ಳುವವರ ಸಂಖ್ಯೆ ಕಂಡು ಬರುತ್ತಿತ್ತು. ಆದರೆ ಈ ಬಾರಿ ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನ ಕೊಳ್ಳುವ ಜನರ ಸಂಖ್ಯೆ ಹಾಗೂ ಕೊಳ್ಳುವ ಪ್ರಮಾಣದಲ್ಲೂ ಕುಸಿತ ಕಂಡು ಬಂದಿರುವ ಕಾರಣ ಚಿನ್ನದ ವ್ಯಾಪಾರಿಗಳ ಮೊಗದಲ್ಲಿ ನಿರೀಕ್ಷಿತ ಸಂಭ್ರಮ ಮೂಡಿಸುವಲ್ಲಿ ವಿಫ‌ಲವಾಗಿದೆ.

ಮಂಗಳವಾರ ಈ ಬಾರಿ ಅಕ್ಷಯ ತೃತೀಯ ಸಂದರ್ಭದಲ್ಲಿ ವಿಜಯಪುರ ನಗರದ ಚಿನ್ನದ ವ್ಯಾಪಾರಿ ಸಮುಚ್ಛಯದ ಸರಾಫ್ ಬಜಾರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವು ವ್ಯಾಪಾರಿಗಳಂತೂ ಅಯ್ಯೋ ಏನು ಅಕ್ಷಯ ತೃತೀಯ ಸರ್‌ ಎಂದು ರಾಗ ಎಳೆಯುವ ಮೂಲಕ ಬೇಸರ ವ್ಯಕ್ತಪಡಿಸಿದರೆ, ಮತ್ತೆ ಕೆಲವು ವ್ಯಾಪಾರಿಗಳು ಪಾಲಿಗೆ ಬಂದುದೇ ಪಂಚಾಮೃತ ಎಂದು ಸ್ವೀಕರಿಸಬೇಕು. ಕಾಲ ಬಂದಂತೆ ಬದುಕನ್ನು ಎಳೆದೊಯ್ಯಬೇಕು ಎಂದು ಪರಿಸ್ಥಿತಿಗೆ ಹೊಂದಿಕೊಳ್ಳುವ ಮಾತನ್ನೂ ಆಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next