ವಿಜಯಪುರ: ವಿಕಲಚೇತನ ಪತ್ನಿಯನ್ನು ಪೊಲೀಸ್ ಪೇದೆ ಪತಿಯೇ ಹತ್ಯೆ ಮಾಡಿರುವ ದುರಂತ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಪತಿ ಪೇದೆ ಸೇರಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ನಗರದ ಆದರ್ಶ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಸಾಕ್ಷಿ ನಾಶಕ್ಕಾಗಿ ಶವವನ್ನು ನದಿಗೆ ಎಸೆದಿದ್ದರೂ ಪೊಲೀಸರು ಶವವನ್ನು ಪತ್ತೆ ಮಾಡಿ, ಆರೋಪಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಶ್ವಾನದಳ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ನಿಂಗರಾಜ ವಾಲಿಕಾರ ಹಾಗೂ ವಿಕಲಚೇತನೆಯಾಗಿದ್ದ ಸುಮಂಗಲಾ ವಾಲಿಕಾರ ಮಧ್ಯೆ ಫೇಸ್ ಬುಕ್ ನಲ್ಲಿ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ, ವಿವಾಹವಾಗಿತ್ತು.
ಆದರೆ ಪತಿ-ಪತ್ನಿಯ ಮಧ್ಯೆ ಕಳೆದ ಕೆಲ ದಿನಗಳಿಂದ ವೈಮನಸ್ಯ ಉಂಟಾಗಿ, ಜಗಳ ಆಡುತ್ತಿದ್ದರು. ಪತ್ನಿಯ ವರ್ತನೆಗೆ ಬೇಸತ್ತುಹೋಗಿದ್ದ ನಿಂಗರಾಜ ಕೊನೆಗೆ ನಾಲ್ವರು ಸ್ನೇಹಿತರ ನೆರವಿನೊಂದಿಗೆ ಮಾರಕಾಸ್ತ್ರದಿಂದ ಎ. 2ರಂದು ಹತ್ಯೆ ಮಾಡಿದ್ದಾನೆ. ನಂತರ ಇನ್ನಿಬ್ಬರು ಸ್ನೇಹಿತರ ಸಹಾಯದಿಂದ ಶವವನ್ನು ಕೊಲ್ಹಾರ ಬಳಿಯ ಕೃಷ್ಣಾ ನದಿಯ ಸೇತುವೆ ಕೆಳಗೆ ಎಸೆದು ಪರಾರಿಯಾಗಿದ್ದ.
ಮಾ.3 ರಂದು ಕೊಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ಶವಪತ್ತೆಯಾಗಿದೆ. ಘಟನೆಯ ಬಳಿಕ ಆರೋಪಿ ಪತಿಯ ವರ್ತನೆ ಬಗ್ಗೆ ಅನುಮಾನ ಮೂಡಿ, ಎಸ್ಪಿ ಅನುಪಮ್ ಅಗರವಾಲ ತೀವ್ರ ವಿಚಾರಣೆ ನಡೆಸಿದಾಗ, ಪೇದೆ ಪತಿ ನಿಂಗರಾಜನೇ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಶನಿವಾರ ಘಟನೆಯ ವಿವರ ನೀಡಿದ ಎಸ್ಪಿ ಅನುಪಮ್ ಅಗರವಾಲ, ಮುಖ್ಯ ಆರೋಪಿ ಪೇದೆ ಪತಿ ನಿಂಗರಾಜ, ಹತ್ಯೆಗೆ ಸಹಕರಿಸಿದ ಬಾಬು, ತೀರ್ಥಪ್ಪ, ಪರಶುರಾಮ, ತಾನಾಜಿ ಹಾಗೂ ಶವವನ್ನು ಸಾಗಿಸುವಾಗ ನೆರವು ನೀಡಿದ ರಮೇಶ ಹಾಗೂ ಪ್ರವೀಣ ಇವರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.