Advertisement

ವಿವಿಯಲ್ಲಿ ಅಕ್ರಮ ಖಂಡಿಸಿ ಪ್ರತಿಭಟನೆ

10:39 AM Jul 11, 2019 | Team Udayavani |

ವಿಜಯಪುರ: ಕುಲಪತಿಗಳ ನೇಮಕಾತಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಹಾಗೂ ವಿವಿಗಳಲ್ಲಿ ನಡೆದ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಸಂಘಟನೆ ವಿಭಾಗ ಸಂಚಾಲಕ ಸಚಿನ ಕುಳಗೇರಿ, ಪ್ರಸಕ್ತ ಸಂಧರ್ಭದಲ್ಲಿ ಶಿಕ್ಷಣ ಮಾರಾಟದ ವಸ್ತುವಲ್ಲ, ಸರ್ವರಿಗೂ ಮುಕ್ತವಾಗಿ ಶಿಕ್ಷಣ ಸಿಗುವಂತಾಗಬೇಕು. ಶಿಕ್ಷಣ ಶ್ರೇಷ್ಠ ಸಂಸ್ಕೃತಿ ಹೊಂದಿರುವ ಭಾರತೀಯ ಶಿಕ್ಷಣದ ಮೂಲ ಉದ್ದೇಶ ಎತ್ತಿ ಹಿಡಿಯಲು ಅನೇಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಕಾರಣ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುವ ಅನೇಕ ಚಿಂತಕರು, ಅಧ್ಯಾಪಕರು, ಸಂಶೋಧಕರನ್ನು ಸೃಷ್ಟಿಸುವಲ್ಲಿ ವಿವಿಗಳ ಪಾತ್ರ ಬಹಳ ಮಹತ್ತರವಾದದ್ದು. ದೇಶದ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಒಂದು ಹೆಮ್ಮೆಯ ಗರಿ ಎಂಬಂತೆ ಶಿಕ್ಷಣದ ರಾಜಧಾನಿಯಾಗಿ ಬೆಳೆದು ನಿಂತಿದೆ ಎಂದರು.

ಆದರೆ ಇಷ್ಟೆಲ್ಲದರ ನಡುವೆ ಪ್ರಸಕ್ತ ಸಂದರ್ಭದಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ವಿವಿಗಳ ಪರಿಸ್ಥಿತಿಯನ್ನೊಮ್ಮೆ ನೋಡಿದರೆ ಶಿಕ್ಷಣದ ಮೂಲ ಉದ್ದೇಶ ಪೂರೈಸದೆ ಎಲ್ಲ ಇಲ್ಲಗಳ ನಡುವೆಯೂ ನಡೆಯುತ್ತಿದೆ ಎನಿಸುತ್ತಿದೆ. ಅನೇಕ ಸಮಸ್ಯೆಗಳಿಂದ ಕೂಡಿರುವ ವಿವಿಗಳಲ್ಲಿ ಇಂದು ಶೈಕ್ಷಣಿಕ ಗುಣಮಟ್ಟ ದಿನೇ ದಿನೇ ಕುಸಿಯುತ್ತಿರುವುದು ಆತಂಕದ ವಿಷಯ. ಸರ್ಕಾರ ತನ್ನದೇ ನಾಟಕದಲ್ಲಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದ್ದು ಖಂಡನಾರ್ಹ ಎಂದರು.

ಜಿಲ್ಲಾ ಸಂಚಾಲಕ ಬಸವರಾಜ ಪೂಜಾರಿ ಮಾತನಾಡಿ, ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಜ್ಞಾನ ಸರ್ವರಿಗೂ ಸಿಗುವಂತಾಗಲಿ ಎಂದು ಮಹಾನ್‌ ಉದ್ದೇಶದಿಂದ ರಾಜ್ಯದಲ್ಲಿ ಅನೇಕ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಾಯಿತು. ಆದರೆ ಬೋಧಕ, ಬೋಧಕೇತರ ಸಿಬ್ಬಂದಿ ನೇಮಿಕ ಆಗಿರಲಿಲ್ಲ. ಇಂದು ಹಲವಾರು ವಿಶ್ವವಿದ್ಯಾಲಯಗಳು ಶೈಕ್ಷಣಿಕ ವಾತಾವರಣ ಹಾಳು ಮಾಡುತ್ತಿರುವುದು ಶೋಚನೀಯ ಸಂಗತಿ. ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ನೇಮಕ ಆಗದಿರುವುದು, ಪ್ರಸ್ತುತ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ 6 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ನಡೆಯದಿರುವುದು ಅಂತ್ಯಂತ ಶೋಚನೀಯ ಎಂದರು.

ರಾಜ್ಯದಲ್ಲಿ 412 ಪ್ರಥಮ ದರ್ಜೆ ಕಾಲೇಜುಗಳಿದ್ದು ಬಹುತೇಕ ಕಾಲೇಜುಗಳಲ್ಲಿ ಗ್ರೇಡ್‌-1 ಪ್ರಾಂಶುಪಾಲರ ಹುದ್ದೆಗಳು ಮಂಜೂರಾಗಿದ್ದರೂ ಪೂರ್ಣಾವಧಿ ಪ್ರಾಚಾರ್ಯರೇ ಇಲ್ಲ. ಅನೇಕ ಹುದ್ದೆಗಳು ಖಾಲಿ ಉಳಿದಿದ್ದು ತಕ್ಷಣ ಈ ಹುದ್ದೆಗಳನ್ನು ಭರ್ತಿ ಮಾಡಬೇಕು ಆಗ್ರಹಿಸಿದರು.

Advertisement

ರಾಜ್ಯ ಕಾರ್ಯಕಾರಿಣಿ ಸದಸ್ಯ ಪಾಂಡು ಮೋರೆ ಮಾತನಾಡಿ, ಉನ್ನತ ಶಿಕ್ಷಣದ ಕೇಂದ್ರಗಳಾಗಬೇಕಾದ ವಿವಿಗಳು ಇಂದು ಭ್ರಷ್ಟಚಾರದ ಕೇಂದ್ರಗಳಾಗುತ್ತಿವೆ. ಕಟ್ಟಡ ಕಾಮಗಾರಿ ಹೆಸರಿನಲ್ಲಿ, ಪ್ರಯೋಗಾಲಯಗಳ ಅಭಿವೃದ್ಧಿ ಹೆಸರಿನಲ್ಲಿ, ಉಪಕರಣಗಳ ಖರೀದಿಯಲ್ಲಿ, ಅಂಕಪಟ್ಟಿ ಅವ್ಯವಹಾರ, ಸಿಬ್ಬಂದಿಗಳ ನೇಮಕಾತಿ ಸೇರಿದಂತೆ ಇಂತಹ ನೆಪದಲ್ಲಿ ರಾಜ್ಯದ ಬಹುತೇಕ ವಿವಿಗಳು ಅವ್ಯವಹಾರದಲ್ಲಿ ತೊಡಗಿವೆ. ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರೇ ಸದನದಲ್ಲಿ ಉಲ್ಲೇಖೀಸಿದಂತೆ ರಾಜ್ಯದ 17 ವಿಶ್ವವಿದ್ಯಾಲಯಗಳಲ್ಲಿ 500 ಕೋಟಿಗೂ ಹೆಚ್ಚಿನ ಮೊತ್ತದ ಅವ್ಯವಹಾರ ನಡೆದಿದೆ ಎಂಬ ಹೇಳಿಕೆ ಪ್ರಸಕ್ತ ಶಿಕ್ಷಣದ ಕೈಗನ್ನಡಿಯಾಗಿದೆ ಎಂದು ಹರಿಹಾಯ್ದರು.

ಇದಕ್ಕೆ ಪೂರಕ ಎಂಬಂತೆ ಮಂಗಳೂರು ವಿಶ್ವವಿದ್ಯಾಲಯ, ಮೈಸೂರ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಹೀಗೆ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಒಂದಲ್ಲ ಒಂದು ಹಗರಣ ನಡೆದೇ ಇದೆ. ಇದರಿಂದ ಬಡ, ಪ್ರತಿಭಾವಂತ, ಪ್ರಾಮಾಣಿಕ ವಿದ್ಯಾರ್ಥಿಗಳಿಂದ ಸಂಗ್ರಹವಾದ ಹಣವನ್ನು ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳು ದರೋಡೆಗೆ ಇಳಿದಿರುವುದು ಖಂಡನೀಯ ಎಂದರು.

ಪ್ರಶ್ನೆಪತ್ರಿಕೆ ಸೋರಿಕೆ ಹಗರಣ, ಅಕ್ರಮ ನೇಮಕಾತಿ, ವಿವಿಧ ಬಗೆಯ ಭ್ರಷ್ಟಾಚಾರ ಪ್ರಕರಣಗಳಿಂದ ಮುಕ್ತವಾಗಿಲ್ಲ. ಮತ್ತೂಂದೆಡೆ ಬಡ ವಿದ್ಯಾಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ಮಾತು ತಪ್ಪಿದ್ದರಿಂದ ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ಶಿಕ್ಷಣ ಮರೀಚಿಕೆ ಆಗುತ್ತಿದೆ ಎಂದು ದೂರಿದರು.

ಸಂಘಟನೆ ನಗರ ಸಂಘಟನಾ ಕಾರ್ಯದರ್ಶಿ ಬ್ರಹ್ನಾನಂದ, ನಗರ ಕಾರ್ಯದರ್ಶಿ ಸಚಿನ ಬಾಗೇವಾಡಿ, ವಿನೋದ ಮಣ್ಣೋಡ್ಡರ, ಶ್ರೀಧರ ,ಸೋಮನಾಥ ಕುಂಬಾರ, ಮಹಾಂತೇಶ, ಬಸವರಾಜ ಲಗಳಿ, ನಿಂಗಣ್ಣ ಮನಗೂಳಿ, ಶಿಲ್ಪಾ, ಬಸಮ್ಮ, ಸಂಧ್ಯಾ, ಸಾನಿಯಾ, ಪ್ರಮೋದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next