Advertisement

ಜಿಲ್ಲೆಯಲ್ಲಿ ಬಿರುಗಾಳಿ-ಸಿಡಿಲು, ಮಳೆಗೆ ಭಾರಿ ಪ್ರಮಾಣದ ನಷ್ಟ

10:40 AM Jun 05, 2019 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ-ಗುಡುಗು-ಸಿಡಿಲು ಸಹಿತದ ಮಳೆಗೆ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ. ಹಲವು ಕಡೆಗಳಲ್ಲಿ ಮರಗಳು, ವಿದ್ಯುತ್‌ ಕಂಬಗಳು, ರ್ಯೆತರು ಬೆಳೆ ತೋಟಗಾರಿಕೆ ಬೆಳೆಗಳು, 16 ಮನೆಗಳು ನೆಲಕಚ್ಚಿ ಲಕ್ಷಾಂತರ ರೂ. ನಷ್ಟವಾಗಿದೆ. 7 ಜಾನುವಾರುಗಳು ಜೀವ ಕಳೆದುಕೊಂಡಿವೆ.

Advertisement

ಸೋಮವಾರ ರಾತ್ರಿ ಸುರಿದ ಮಳೆಗೆ ವಿಜಯಪುರ ತಾಲೂಕಿನ ಶಿವಣಗಿ 4 ಕುರಿ, ಮಂಗಳವಾರದ ಮಳೆಗೆ ವಿಜಯಪುರ ತಾಲೂಕಿನ ಧನವಾಡಹಟ್ಟಿ ಗ್ರಾಮದಲ್ಲಿ ಸಿಡಿಲಿಗೆ 1 ಎತ್ತು, 1 ಎಮ್ಮೆ ಬಲಿಯಾಗಿದ್ದರೆ, ಮುದ್ದೇಬಿಹಾಳ ತಾಲೂಕಿನ ಕೋಳೂರು ಗ್ರಾಮದಲ್ಲಿ 1 ಎತ್ತು ಸೇರಿ 3 ಜಾನುವಾರು ಸೇರಿ ಎರಡು ದಿನದಲ್ಲಿ ಸುರಿದ ಮಳೆ, ಬಿರುಗಾಳಿ, ಸಿಡಿಲಿಗೆ ಒಟ್ಟು 7 ಜಾನುವಾರುಗಳು ಜೀವ ಕಳೆದುಕೊಂಡಿವೆ.

ವಿಜಯಪುರ ತಾಲೂಕಿನ ಶಿವಣಗಿ, ಹಡಗಲಿ, ಮದಭಾವಿ ತಾಂಡಾ ದಲ್ಲಿ 12 ಕಚ್ಚಾ ಮನೆಗಳು ಹಾನಿಗೀಡಾಗಿವೆ. ಮುದ್ದೇಬಿಹಾಳ, ತಾಳಿಕೋಟೆ ತಾಲೂಕಿನ ಮಸ್ಕನಾಳ, ಮೂಕಿಹಾಳ ತಲಾ ಒಂದೊಂದು ಮನೆ ಹಾನಿಗೀಡಾಗಿವೆ. ಬಬಲೇಶ್ವರ ತಾಲೂಕಿನ ದೂಡಿಹಾಳ ಗ್ರಾಮದಲ್ಲಿ ರೈತರೊಬ್ಬರ ತೋಟದಲ್ಲಿನ ಸುಮಾರು 200 ಬಾಳೆ ಬೆಳೆ ನೆಲಕಚ್ಚಿದ್ದು ಲಕ್ಷಾಂತರ ರೂ. ನಷ್ಟವಾಗಿದೆ.

ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ 4ರಿಂದ 5 ರೇಷ್ಮೆ ಶೆಡ್‌ಗಳು ಸಂಪೂರ್ಣ ಹಾಳಾಗಿದ್ದು ಜೈನಾಪುರ ಗ್ರಾಮದ ಹೊಲದಲ್ಲಿ ತೋಳಗಳ ದಾಳಿಯಿಂದ ಹತ್ತು ಕುರಿಗಳು ಸಾವಿಗಾಡ ಘಟನೆ ಕೂಡಾ ಜರುಗಿದೆ. ಕುರಿಗಳ ಮಾಲೀಕ ಶಿವಪ್ಪ ಸಂಕನಾಳ ರಾತ್ರಿ ಸುರಿದ ಮಳೆಯಿಂದಾಗಿ ಮನೆಯಲ್ಲಿ ಉಳಿದುಕೊಂಡಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದಲ್ಲದೇ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರಿ ಬಿರುಗಾಳಿಗೆ ಹಲವು ಕಡೆಗಳಲ್ಲಿ ಹತ್ತಾರು ಮರಗಳು ಧರೆಗುರುಳಿದ್ದರೆ, ಹತ್ತಾರು ವಿದ್ಯುತ್‌ ಕಂಬಗಳು ನೆಲಕಚ್ಚಿ, ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

Advertisement

•ಹೂವಿನಹಿಪ್ಪರಗಿ: ಹೂವಿನಹಿಪ್ಪರಗಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಯಿಂದ ಹಲವಡೆ ಗಿಡ ಮರಗಳು ನೆಲಕ್ಕೆ ಉರುಳಿ ವಿದ್ಯುತ್‌ ಕಂಬಗಳು ಮುರಿದು ತಂತಿ ಹರಿದು ನೆಲಕ್ಕೆ ಬಿದ್ದಿವೆ.

ಸಮೀಪದ ಕುದರಿ ಸಾಲವಾಡಗಿ, ಬೂದಿಹಾಳ, ಕಾಮನಕೇರಿ, ದಿಂಡವಾರ, ಗುಳಬಾಳ, ಯಾಳವಾರ, ಹುಣಿಶ್ಯಾಳ ಪಿ.ಬಿ. ಕರಿಭಂಟನಾಳ, ಅಗಸಬಾಳ, ರಾಮನಹಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಈ ವರ್ಷದ ಮುಂಗಾರಿನ ರೋಹಿಣಿ ಮಳೆರಾಯ ಉತ್ತಮವಾಗಿ ಸುರಿದು ರೈತರ ಮುಖ ಅರಳುವಂತೆ ಮಾಡಿದ್ದಾನೆ.

ಸುಮಾರು ಮೂರು ತಿಂಗಳಿನಿಂದ ಬೇಸಿಗೆ ಬೀರು ಬಿಸಿಲಿಗೆ ರೋಷಿ ಹೋಗಿದ್ದ ಜನತೆಗೆ ಸ್ವಲ್ಪ ಮಟ್ಟಿನ ನೆಮ್ಮದಿ ಸಿಕ್ಕಿದೆ. ಮಳೆಯಿಂದ ಅಲ್ಲಲ್ಲಿ ದನ ಕರುಗಳಿಗೆ ಮೇಯಲು ಮೇವು ಜತೆಗೆ ಕುಡಿಯಲಿ ನೀರು ಸಿಗುವಂತಾಗಿದೆ. ಇನ್ನೂ ಕೃಷಿ ಚಟುವಟಿಕೆಗಳಾದ ಕುಂಟಿ, ಮಡಿಕೆ, ಹರಗುವದು, ಕಟ್ಟಿಗೆ ಆರಿಸಿ ಭೂಮಿ ಸ್ವಚ್ಛಗೊಳಿಸುವುದು ಸೇರಿದಂತೆ ಇತರೇ ಕಾರ್ಯ ನಡೆಯಲಿವೆ. ಮಳೆಯಿಂದ ಬೂದಿಹಾಳ ಹಾಗೂ ಕುದರಿ ಸಾಲವಾಡಗಿ ನಡುವಿನ ಜೀನ ಹಳ್ಳ ಮೈದುಂಬಿ ಹರಿಯುವಂತಾಯಿತು.

ಇಂಚಗೇರಿ: ಗುಡುಗು ಬಿರುಗಾಳಿ ಸಹಿತ ಸುರಿದ ರೋಹಿಣಿ ಮಳೆ ಭೂಮಿಗೆ ತಂಪೆರೆದಿದೆ. ಕಳೆದ ಎರಡು ತಿಂಗಳಿನಿಂದ ಕಾಯ್ದ ತವೆಯಂತಾಗಿದ್ದ ಇಳೆ ತಂಪನ್ನು ಹೊರಸೂಸುತ್ತಿದೆ. ಸುಮಾರು 3 ಗಂಟೆಗಳ ಕಾಲ ಮುಗಿಲು ಕಡಿದು ಬೀಳುವಂತೆ ಸುರಿದ ಮಳೆಯಿಂದ ಹೊಲ ಗದ್ದೆಗಳಲ್ಲಿ ನೀರು ನಿಂತಿವೆ. ಕೆರೆ ಕಟ್ಟೆಗಳಿಗೆ ನೀರು ಹರಿದು ಬಂದಿದೆ. ಬಿರುಗಾಳಿಗೆ ಹಲವಾರು ಪತ್ರಾಸ್‌ ಮನೆಗಳ ಪತ್ರಾಸ್‌ಗಳು ಹಾರಿ ಹೋಗಿದ್ದರೆ ಕೆಲವೆಡೆ ಗಿಡ ಮರಗಳು ಧರೆಗುರುಳಿವೆ. ದೇವರನಿಂಬರಗಿ, ತದ್ದೇವಾಡಿ, ಹೊರ್ತಿ ಗ್ರಾಮದ ಸುತ್ತಮುತ್ತಲು ಸುಮಾರು 6 ಸೆಂ.ಮೀ. ಮಳೆಯಾಗಿದೆ. ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next