ವಿಜಯಪುರ: ನಗರದ ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಆಶ್ರಮ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಕಾಂಪೌಂಡ್ ನಲ್ಲಿ ಸುಮಾರು 7-8 ತಿಂಗಳ ಪ್ರಾಯದ ಹೆಣ್ಣು ಮಗು ಪತ್ತೆಯಾಗಿದೆ.
ಮಗುವಿನ ಪೋಷಕರು ಬಟ್ಟೆಯಲ್ಲಿ ಸುತ್ತಿರುವ ಹೆಣ್ಣು ಮಗುವನ್ನು ನಿರ್ಮಾಣ ಹಂತದ ಕಟ್ಟಡದಲ್ಲಿ ಬಿಟ್ಟು ಹೋಗಿದ್ದಾರೆ. ಶುಕ್ರವಾರ ನಸುಕಿನಲ್ಲಿ ಸಾರ್ವಜನಿಕರು ವಾಯು ವಿಹಾರಕ್ಕೆ ಬಂದಾಗ ಮಗು ಅಳುವ ಧ್ವನಿ ಕೇಳಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಮುನ್ನ ಸ್ಥಳೀಯರು ಮಗುವಿಗೆ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ.
108 ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಹೆಣ್ಣು ಮಗು ರವಾನೆ
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಅಧಿಕಾರಿಗಳು, ಮಗುವನ್ನು ತಮ್ಮ ಸ್ವಾದೀನಕ್ಕೆ ಪಡೆದಿದ್ದಾರೆ. ಅಲ್ಲದೇ ಅಂಬ್ಯುಲೆನ್ಸ್ ಮೂಲಕ ಮಗುವನ್ನು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ.
ಸ್ಥಳಕ್ಕೆ ಆಗಮಿಸಿರುವ ಆದರ್ಶನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆ ಎಂಬುದು ನಿಗೂಢವಾಗಿದ್ದು, ಪೊಲೀಸರು ಹೆಣ್ಣು ಮಗುವಿನ ಪಾಲಕರ ಪತ್ತೆಗೆ ಮುಂದಾಗಿದ್ದಾರೆ.