ವಿಜಯಪುರ: ಕಲಬುರಗಿ ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಿಗಾದಲ್ಲಿದ್ದ ವ್ಯಕ್ತಿ ಸೋಂಕು ದೃಢಪಡುವ ಮುನ್ನ ಬಿಡುಗಡೆಗೊಂಡು ವಿಜಯಪುರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೈಕ್ ಮೇಲೆ ಓಡಾಡಿ ಆತಂಕ ಸೃಷ್ಟಿಸಿದ್ದಾನೆ.
ಮಹಾರಾಷ್ಟ್ರ ರಾಜ್ಯದಿಂದ ಮೇ16 ರಂದು ಕಲಬುರಗಿ ಜಿಲ್ಲೆಗೆ ಆಗಮಿಸಿದ್ದ. ಪತ್ನಿಯ ತವರೂರು ಕಲಬುರಗಿ ಜಿಲ್ಲೆಯ ಜೀವರ್ಗಿ ತಾಲೂಕ ಜೀರಟಗಿ ಗ್ರಾಮಕ್ಕೆ ತೆರಳಿದ್ದ 38 ವರ್ಷದ ವ್ಯಕ್ತಿ, 14 ದಿನ ಅಲ್ಲಿನ ಸಾಂಸ್ಥಿಕ ಕ್ವಾರಂಟೈನ್ ನಿಗಾದಲ್ಲಿದ್ದ.
ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ಸದರಿ ವ್ಯಕ್ತಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.ಪ್ರಯೋಗಾಯ ದಿಂದ ವರದಿ ಬರುವ ಮುನ್ನವೇ ವ್ಯಕ್ತಿಯ ಕ್ವಾರಂಟೈನ್ ಅವಧಿ ಮುಗಿದಿತ್ತು. ಕಾರಣ ಬಿಡುಗಡೆ ಗೊಂಡು ತನ್ನ ಮೂಲ ಗ್ರಾಮ ಇರುವ ವಿಜಯಪುರ ಜಿಲ್ಲೆಗೆ ಬಂದಿದ್ದ.
ತನ್ನ ಸಹೋದರನೊಂದಿಗೆ ಬೈಕ್ ಮೇಲೆ ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ ತಾಲೂಕಗಳ ವಿವಿಧ ಹಳ್ಳಿಗೆ ಭೇಟಿ ನೀಡಿದ್ದು, ಲಚ್ಯಾಣ ಗ್ರಾಮಕ್ಕೂ ಹೋಗಿದ್ದ.
ಈ ಮಧ್ಯೆ ಸದರಿ ವ್ಯಕ್ತಿಗೆ ಮಂಗಳವಾರ ಸೋಂಕು ದೃಢಪಟ್ಟ ವಿಷಯ ಕಲಬುರಗಿ ಜಿಲ್ಲಾಡಳಿತಕ್ಕೆ ಬರುತ್ತಲೇ ಸೋಂಕಿತ ಹುಡುಕಾಟಕ್ಕೆ ಮುಂದಾಗಿ ವಿಜಯಪುರ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಿತ್ತು.
ಈ ಹಂತದಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದ ಸೋಂಕಿತ ವ್ಯಕ್ತಿ ಬುಧವಾರ ಇಂಡಿ ಸರಕಾರಿ ಆಸ್ಪತ್ರೆಗೆ ಆಗಮಿಸಿದ್ದಾನೆ. ಸೋಂಕಿತ ಟ್ರಾವೆಲ್ ಹಿಸ್ಟರಿ ಕೆದಕಿದ ಇಂಡಿ ಆಸ್ಪತ್ರೆ ವೈದ್ಯರು, ಕೂಡಲೇ ಸೋಂಕಿತನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಸೋಂಕಿತ ಓಡಾಡಿದ ಸ್ಥಳಗಳಲ್ಲಿ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆಹಚ್ಚಿ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಮುಂದಾಗಿದೆ.