Advertisement
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಪ್ರತಿನಿಧಿಸುವ ಬಬಲೇಶ್ವರ ವಿಧಾನಸಭೆ ಕ್ಷೇತ್ರದ ದೂಡಿಹಾಳ ಗ್ರಾಮದ ಲಕ್ಷ್ಮಿಬಾಯಿ ಲಕ್ಷ್ಮಣ ಕುಮಟಗಿ ಎಂಬ ಮಹಿಳೆಯೇ ಕುಟುಂಬ ನಾಲ್ವರು ಸದಸ್ಯರಿಗೆ ದಯಾ ಮರಣಕ್ಕೆ ಅವಕಾಶ ಕೋರಿ ಮನವಿ ಮಾಡಿದ್ದಾರೆ.
Related Articles
Advertisement
ತಮ್ಮ ಪತಿ ಲಕ್ಷ್ಮಣ ಇವರ ಸಹೋದರರು ಹಾಗೂ ಅವರ ಕುಟುಂಬ ಸದಸ್ಯರಾದ ವಿಠ್ಠಲ ಕುಮಟಗಿ, ಭರಮಪ್ಪ, ಶಿವಪ್ಪ, ಭೌರವ್ವ, ಇಂದರವ್ವ, ಶ್ರೀಶೈಲ, ಅಯ್ಯಪ್ಪ, ಬೀರಪ್ಪ, ಶಾಂತವ್ವ ಅಸಂಗಿ, ಲಕ್ಷ್ಮೀ ಮರನೂರು, ಸದು ದಳವಾಯಿ, ಮಾಳಪ್ಪ ವಾಲೀಕಾರ, ಅಶೋಕ ವಾಲೀಕಾರ ಇವರ ಹೆಸರಿಂದ ತಮ್ಮ ಕುಟುಂಬದ ಮೇಲೆ ರ್ದರ್ಜನ್ಯ ನಡೆಯುತ್ತಿದೆ ಎಂದು ಲಕ್ಷ್ಮೀಬಾಯಿ ವಿವರಿಸಿದ್ದಾಳೆ.
ಕಳೆದ ವರ್ಷ ನನ್ನ ಹಾಗೂ ನನ್ನ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ದೋಚಿದ್ದರು. 2023 ಫೆಬ್ರವರಿ 17 ರಂದು ವಿಜಯಪುರ ಬಿಎಲ್‍ಡಿಇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೆವು ಎಂದು ಫೋಟೋ ಬಿಡುಗಡೆ ಮಾಡಿದ್ದಾಳೆ.
ಆಗ ಬಬಲೇಶ್ವರ ಠಾಣೆಗೆ ತೆರಳಿ ದೂರು ನೀಡಿದ್ದರೂ, ಪೊಲೀಸರು ಆರೋಪಿಗಳನ್ನು ಬಂಧಿಸಲಿಲ್ಲ. ಅಲ್ಲದೇ ಸದರಿ ಕೃತ್ಯಕ್ಕೆ ಸಾಕ್ಷಿಯಾಗಿದ್ದ ನನ್ನ ತಾಯಿ ನೀಲಮ್ಮ ಕಡ್ಲಿಮಟ್ಟಿ ಇವರ ಮೇಲೂ ಹಲ್ಲೆ ನಡೆಸಿದ್ದು, ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವಿವರಿಸಿದ್ದಾರೆ.
ನನ್ನ ಇಬ್ಬರು ಹೆಣ್ಣು ಮಕ್ಕಳು ಶೈಕ್ಷಣಿಕ ಭವಿಷ್ಯಕ್ಕಾಗಿ ವಿಜಯಪುರದ ಖಾಸಗಿ ಶಾಲೆಗಳಿಗೆ ಸೇರಿಸಿದ್ದು, ತೋಟದ ವಸ್ತಿಯಲ್ಲಿ ನಾನು ಹಾಗೂ ನನ್ನ ಪತಿ ಮಾತ್ರ ಇರುತ್ತೇವೆ. ಹೀಗಾಗಿ ನಿರ್ಜನ ಪ್ರದೇಶದಲ್ಲಿ ವಾಸ ಇರುವ ನಮ್ಮ ಮೇಲೆ ಹಗಲು ವೇಳೆಗಿಂತ ರಾತ್ರಿ ವೇಳೆ ಹೆಚ್ಚಾಗಿ ದೌರ್ಜನ್ಯಗಳು ನಡೆಯುತ್ತಿವೆ ಎಂದಿ ವಿವರಿಸಿದ್ದಾರೆ.
ಇದಾದ ಬಳಿಕ ನಾನು ಆಸ್ತಿ ವಿಷಯವಾಗಿ ಕಾನೂನು ಹೋರಾಟಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲ ಮುಂದಾಗುತ್ತಲೇ ಮತ್ತೆ ನಮ್ಮ ಕುಟುಂಬದ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ವಿದ್ಯಾರ್ಥಿನಿಯರಾಗಿರುವ ನನ್ನ ಇಬ್ಬರು ಮಕ್ಕಳಿಗೆ ಹಾಗೂ ನಮಗೆ ರಕ್ಷಣೆ ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮೇ 11 ರಂದು ಜಮೀನಿನಲ್ಲಿ ಕೆಲಸ ಮಾಡುವಾಗ ಟ್ರ್ಯಾಕ್ಟರ್‍ನಿಂದ ನಮ್ಮ ಭಾಗದ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ನಾಶ ಮಾಡಿ, ನನ್ನ ಮೆಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಬಾರಿ ಪೊಲೀಸರು ನಾನು ದೂರು ಸ್ವೀಕರಿಸಿದರೂ, ಪ್ರಕರಣ ದಾಖಲಿಸದೇ ಬೆದರಿಸಿ ಕಳಿಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಇಡೀ ಪ್ರಕರಣದಲ್ಲಿ ಪೊಲೀಸರು ಹಣ- ರಾಜಕೀಯ ಪ್ರಭಾವಕ್ಕೆ ಮಣಿದು ನಮಗೆ ರಕ್ಷಣೆ ನೀಡುತ್ತಿಲ್ಲ. ಆರ್ಥಿಕ ಶಕ್ತಿ, ರಾಜಕೀಯ ಪ್ರಭಾವ ಇಲ್ಲದ ನಮ್ಮ ಕುಟುಂಬಕ್ಕೆ ನಮ್ಮ ದಾಯಾದಿಗಳಿಂದ ಆಗುತ್ತಿರುವ ದೌರ್ಜನ್ಯ ಸಹಿಲು ಸಾಧ್ಯವಾಗುತ್ತಿಲ್ಲ. ಕಾರಣ ಪ್ರಾಥಮಿಕ-ಪೌಢ ಶಾಲೆಯಲ್ಲಿ ಓದುತ್ತಿರುವ ಇಬ್ಬರು ಮಕ್ಕಳೊಂದಿಗೆ ನನಗೆ ಹಾಗೂ ನನ್ನ ಪತಿ ಸೇರಿ ಕುಟುಂಬದ ನಾಲ್ವರಿಗೆ ದಯಾ ಮರಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ದಯಾ ಮರಣ ಕೋರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬರೆದಿರುವ ಮನವಿಯನ್ನು ರಾಜ್ಯದ ಗೃಹ ಸಚಿವರು, ಮಾನವ ಹಕ್ಕುಗಳ ಆಯೋಗ, ಪೊಲೀಸ್ ಇಲಾಖೆ ಡಿಜಿಪಿ, ಐಜಿಪಿ, ಎಸ್ಪಿ, ಡಿಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದಾಗಿ ಲಕ್ಷ್ಮಿಬಾಯಿ ಹೇಳಿದ್ದಾರೆ.