ವಿಜಯಪುರ: ಆಯೋಧ್ಯೆಯ ರಾಮ ಮಂದಿರದ ಕರ ಸೇವೆಯಲ್ಲಿ ಪಾಲ್ಗೊಂಡಿದ್ದ 511 ಹಿಂದೂ ಕಾರ್ಯಕರ್ತರಿಗೆ ಸನ್ಮಾನ ಆಯೋಜಿಸಿದ್ದೇವೆ. ರಾಮ ಮಂದಿರ ಲೋಕಾರ್ಪಣೆ ದಿನವಾದ ಜ.22 ರಂದು ನಗರದಲ್ಲಿರುವ ರಾಮ ಮಂದಿರದಲ್ಲಿ ಸನ್ಮಾನ ನಡೆಯಲಿದೆ ಎಂದು ರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಹೇಳಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಜ.22 ರಂದು ರಾಮ ಮಂದಿರ ನಿರ್ಮಾಣ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಹೀಗಾಗಿ ಅದೇ ದಿನ ವಿಜಯಪುರ ನಗರದ ರಾಮ ಮಂದಿರದಲ್ಲಿ 108 ಜನರದಿಂದ ಹೋಮ ನಡೆಯಲಿದೆ ಎಂದರು.
ಬಳಿಕ ರಾಮ ಮಂದಿರ ರಸ್ತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ 511 ಕರ ಸೇವಕರಿಗೆ ಅಯೋಧ್ಯಾ ರಾಮ ಮಂದಿರ ಪ್ರತಿಕೃತಿಯ ಸ್ಮರಣಿಕೆ ನೀಡಿ ಸನ್ಮಾನ ಆಯೋಜಿಸಲು ಯೋಜಿಸಿದ್ದೇವೆ. ಭವ್ಯ ವೇದಿಕೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಗೀತ, ಗೀತಾ ನೃತ್ಯ, ಕೋಲಾಟ, ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ರಾಮ ನವಮಿ ಸಮಿತಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಕ್ಕೆ ಮುಂದಾದಾಗ ನಗರದ ಮುಸ್ಲಿಂ ಸಮುದಾಯದ ಜನರೇ ಸ್ವಯಂ ಪ್ರೇರಣೆಯಿಂದ ನಮ್ಮನ್ನು ಕರೆದು ದೇಣಿಗೆ ನೀಡಿದ್ದಾರೆ. ಹಲವರು 5 ಸಾವಿರಕ್ಕೂ ಹೆಚ್ಚಿನ ಹಣ ದೇಣಿಗೆ ನೀಡಿರುವ ನಿದರ್ಶನಗಳೂ ನಮ್ಮಲ್ಲಿವೆ ಎಂದರು.
ರಾಮ ಮಂದಿರ ಲೋರ್ಕಾಪಣೆ ದಿನ ನಗರದ ಬೀದಿಗಳನ್ನು ಶೃಂಗರಿಸುವುದು, ನಗರದ ಜನರು ತಮ್ಮ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ, ದೀಪಗಳನ್ನು ಹಚ್ಚುವ ಮೂಲಕ ರಾಮ ಮಂದಿರ ಲೋಕಾರ್ಪಣೆ ಕ್ಷಣಗಳನ್ನು ಐತಿಹಾಸಿಕ ಕ್ಷಣಗಳಾಗಿ ರೂಪಿಸುವಂತೆ ಮನವಿ ಮನವಿ ಮಾಡಿದರು.
ರಾಮ ನವಮಿ ಸಮಿತಿ ಕೇವಲ ರಾಮ ಮಂದಿರ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ. ಕೋವಿಡ್ ಕಾಲಘಟ್ಟದಲ್ಲಿ ಜನಸೇವೆ ಮಾಡಿದ್ದೇವೆ, ಶವ ಸಂಸ್ಕಾರ ಮಾಡುವ ಕೆಲಸ ಮಾಡಿದ್ದೇವೆ. ಭವಿಷ್ಯದಲ್ಲಿ ಇನ್ನು ಹೆಚ್ಚಿನ ಜನ ಸೇವೆ ಮಾಡುವುದು ನಮ್ಮ ಉದ್ದೇಶ ಎಂದರು.