ವಿಜಯಪುರ: 21 ವರ್ಷದ ಹಿಂದಿನ ಪ್ರಕರಣದಲ್ಲಿ ಶಿಕ್ಷೆಯಾದರೂ ಪರಾರಿಯಾಗಿ ಹೆಸರು ಬದಲಿಸಿಕೊಂಡಿದ್ದ ಅಪರಾಧಿಯೊಬ್ಬನನ್ನು ವಿಜಯಪುರ ಪೊಲೀಸರು ಧಾರವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2001 ರಲ್ಲಿ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಸವರಾಜ ನಾಯ್ಕ ಎಂಬಾತ ಮೂರನೇ ಆರೋಪಿಯಾಗಿದ್ದ. ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರು ಮೂಲದ ಬಸವರಾಜಗೆ ಸ್ಥಳೀಯ ನ್ಯಾಯಾಲಯ 2003 ರಲ್ಲಿ ಶಿಕ್ಷೆ ವಿಧಿಸಿತ್ತು.
ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದಾಗ ಕೆಳ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿತ್ತು. ಹೈಕೋರ್ಟ್ ಆದೇಶದ ವಿರುದ್ಧವೂ ಸುಪ್ರೀಂ ಕೋರ್ಟ್‌ನಲ್ಲಿ ಬಸವರಾಜ ಮೇಲ್ಮನವಿ ಸಲ್ಲಿಸಿದ್ದ. ಆದರೆ ಸುಪ್ರೀಂ ಕೋರ್ಟ್ ಕೂಡ ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು. ಈ ಹಂತದಲ್ಲಿ ತಲೆ ಮರೆಸಿಕೊಂಡು ಕುಟುಂಬ ಹಾಗೂ ಸಂಬಂಧಿಗಳೊಂದಿಗೆ ಸಂಪರ್ಕ ಕಡಿದುಕೊಂಡಿದ್ದ.
ನ್ಯಾಯಾಲಯ ಶಿಕ್ಷೆ ವಿಧಿಸಿದ ಆದೇಶದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಶಿಕ್ಷಿತ ಬಸವರಾಜ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತಂಡ ರಚಿಸಿತ್ತು.
ಅಂತಿಮವಾಗಿ ಪೊಲೀಸರು ಬಸವರಾಜ ಹೆಸರು ಬದಲಿಸಿಕೊಂಡು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದನು ಪತ್ತೆ ಮಾಡಿದ್ದಾರೆ.
21 ವರ್ಷದ ಹಿಂದೆ ನ್ಯಾಯಾಲಯದಿಂದ ಶಿಕ್ಷೆಯಾದರೂ ತಲೆಮರೆಸಿಕೊಂಡಿದ್ದ ಬಾಗಲಕೋಟ ಜಿಲ್ಲೆಯ ಬಸವರಾಜನನ್ನು ಧಾರವಾಡ ಜಿಲ್ಲೆಯಲ್ಲಿ ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.