Advertisement
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭೆ ಕ್ಷೇತ್ರ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಸ್ಪರ್ಧಿಸಿರುವ ಕಾರಣ ರಾಜ್ಯ ಮಾತ್ರವಲ್ಲ ದೇಶದ ಗಮನ ಸೆಳೆದಿದೆ. ಲೋಕಸಭೆಯ ಕಳೆದ ನಾಲ್ಕು ಚುನಾವಣೆಯಲ್ಲಿ ಬಿಜೆಪಿ ನಿರಂತರ ಗೆದ್ದು, ಭದ್ರಕೋಟೆ ಎನಿಸಿರುವ ವಿಜಯಪುರ ಕ್ಷೇತ್ರದಲ್ಲಿ 2009ರಲ್ಲಿ ಕ್ಷೇತ್ರ ಮರುವಿಂಗಡಣೆಯ ಬಳಿಕ ಪರಿಶಿಷ್ಟ ಜಾತಿಮೆ ಮೀಸಲಾಗಿದೆ. ಅಲ್ಲಿಂದ ಈವರೆಗೆ ಸತತ ಎರಡು ಬಾರಿ ಗೆದ್ದು, ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರೂ ಆಗಿರುವ ರಮೇಶ ಜಿಗಜಿಣಗಿ ಹ್ಯಾಟ್ರಿಕ್ ಸಾಧನೆಗಾಗಿ ಮೂರನೇ ಬಾರಿಗೆ ಸ್ಪರ್ಧೆಗೆ ಇಳಿದಿದ್ದಾರೆ.
Related Articles
Advertisement
ಮತದಾನೋತ್ತರ ಸಮೀಕ್ಷೆ ಬಳಿಕ ಬಿಜೆಪಿ ಗೆಲುವು ನಿಶ್ಚಿತ ಎನ್ನುತ್ತಲೇ ರಮೇಶ ಜಿಗಜಿಣಗಿ ಗೆಲ್ಲುತ್ತಾರೆ ಎಂದು ಬಾಜಿ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ. ಮತ್ತೂಂದೆಡೆ ಬಂಜಾರಾ ತಾಂಡಾಗಳಲ್ಲಿ ಡಾ| ಸುನೀತಾ ಚವ್ಹಾಣ ಪರ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ. ಸುನೀತಾ ಚವ್ಹಾಣ ಅವರು ಬಂಜರಾ ಸಮುದಾಯಕ್ಕೆ ಸೇರಿರುವ ಕಾರಣ ಸಹಜವಾಗಿ ಸುನೀತಾ ಪರ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ.
ಬಸ್, ರೈಲು, ಆಟೋ ಪ್ರಯಾಣ, ಹೊಟೇಲ್, ತಂಪು ಪಾನೀಯ ಆಂಗಡಿ, ಕಬ್ಬಿನ ಹಾಲಿನ ಅಂಗಡಿ, ಬಟ್ಟೆ ಅಂಗಡಿ, ತರಕಾರಿ ಮಾರುಕಟ್ಟೆ ಹೀಗೆ ಎಲ್ಲೆಂದರಲ್ಲಿ ನಡೆಯುತ್ತಿದ್ದ ಚರ್ಚೆ ಈಗ ಹೆಚ್ಚಿನ ಸ್ವರೂಪದಲ್ಲಿ ಕಂಡು ಬರುತ್ತಿದೆ. ಚರ್ಚೆ ಹಂತದಲ್ಲಿ ಪರಸ್ಪರರು ತಮ್ಮದೇ ಅಂದಾಜಿನಲ್ಲಿ ವಿಶ್ಲೇಷಣೆ ಮಾಡುತ್ತ ಗೆಲ್ಲುವುದು ತಮ್ಮದೇ ಅಭ್ಯರ್ಥಿ ಎಂಬಂತೆ ಬಾಜಿ ಕಟ್ಟುತ್ತಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಹಣ ಮಾತ್ರವಲ್ಲ ಚಿನ್ನ, ಬೈಕ್, ಕಾರು ಸೇರಿದಂತೆ ಹಲವು ವಸ್ತುಗಳನ್ನು ಬಾಜಿ ಕಟ್ಟುತ್ತಿರುವುದು ಸಾಮಾನ್ಯವಾಗಿದೆ.
ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹಾಗೂ ಪಿಎಚ್‌ಡಿ ಪದವೀಧರೆ ಡಾ| ಸುನೀತಾ ಚವ್ಹಾಣ ಅವರ ಮಧ್ಯೆ ನೇರ ಸ್ಪರ್ಧೆ ಎದುರಾಗಿತ್ತು. ಇವರ ಹೊರತಾಗಿ ಬಿಎಸ್ಪಿ ಅಭ್ಯರ್ಥಿಯಾಗಿ ಯುವ ವಕೀಲ ಶ್ರೀನಾಥ ಪೂಜಾರಿ, ಉತ್ತಮ ಪ್ರಜಾಕೀಯ ಪಕ್ಷದ ಗುರುಬಸವ ರಬಕವಿ, ರಾಜಕೀಯ ಸುಧಾರಣೆಗಾಗಿ ಹಲವು ಚುನವಣೆ ಸ್ಪರ್ಧಿಸಿರುವ ದೀಪಕ ಕಟಕದೊಂಡ ಈ ಬಾರಿ ಹಿಂದೂಸ್ಥಾನ ಜನತಾ ಪಾರ್ಟಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ.
ಕಣದಲ್ಲಿರುವ ಸ್ಪರ್ಧಿಗಳುರಮೇಶ ಜಿಗಜಿಣಗಿ (ಬಿಜೆಪಿ), ಶ್ರೀನಾಥ ಪೂಜಾರಿ (ಬಿಎಸ್ಪಿ), ಡಾ| ಸುನೀತಾ ದೇವಾನಂದ ಚವ್ಹಾಣ (ಜೆಡಿಎಸ್), ಗುರುಬಸವ ಪರಮೇಶ್ವರ ರಬಕವಿ (ಉತ್ತಮ ಪ್ರಜಾಕೀಯ ಪಕ್ಷ), ದೀಪಕ ಗಂಗಾರಾಮ ಕಟಕದೊಂಡ ಉರ್ಫ್ ವೆಂಕಟೇಶ್ವರ ಮಹಾಸ್ವಾಮೀಜಿ (ಹಿಂದೂಸ್ಥಾನ ಜನತಾ ಪಾರ್ಟಿ), ಯಮನಪ್ಪ ವಿಠuಲ ಗುಣದಾಳ (ಆರ್‌ಪಿಐ), ರುದ್ರಪ್ಪ ದಯಪ್ಪ ಚಲವಾದಿ (ಭಾರಿಪ ಬಹುಜನ ಮಹಾಸಂಘ), ದಾದಾಸಾಹೇಬ ಸಿದ್ದಪ್ಪ ಬಾಗಾಯತ್ (ಪಕ್ಷೇತರ), ದೋಂಡಿಬಾ ರಾಮು ರಾಠೊಡ (ಪಕ್ಷೇತರ), ಧರೆಪ್ಪ ಮಹಾದೇವ ಅರ್ಧವರ (ಪಕ್ಷೇತರ), ಬಾಲಾಜಿ ದ್ಯಾಮಣ್ಣ ವಡ್ಡರ (ಪಕ್ಷೇತರ), ರಾಮಪ್ಪ ಹರಿಜನ ಉರ್ಫ್ ಹೊಲೇರ (ಪಕ್ಷೇತರ). ಸೈನಿಕ ಶಾಲೆಯಲ್ಲಿ ಮತಎಣಿಕೆ
ಮೇ 23ರಂದು ನಗರದಲ್ಲಿರುವ ವಿಜಯಪುರ ಸೈನಿಕ ಶಾಲೆ ಕಟ್ಟಡಗಳಲ್ಲಿ ಮತ ಎಣಿಕೆ ನಡೆಯಲಿದೆ. ಆಂದು ಬೆಳಗ್ಗೆ 7ಕ್ಕೆ ಭದ್ರತಾ ಕೋಣೆಗಳಲ್ಲಿ ಇರಿಸಿರುವ ಮತಯಂತ್ರಗಳನ್ನು ಹೊರ ತೆಗೆಯಲಾಗುತ್ತದೆ. ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭಗೊಳ್ಳಲಿದೆ. ಚುನಾವಣೆ ಮತ ಎಣಿಕೆ ವೀಕ್ಷಕರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಈ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಸಹಾಯಕ ಚುನಾವಣಾ ಅಧಿಕಾರಿಗಳ ನೇತೃತ್ವದ ತಂಡ ಮತ ಎಣಿಕೆ ಮಾಡಲಿದೆ. ಮತ ಎಣಿಕೆಗೆ ನಗರದಲ್ಲಿರುವ ವಿಜಯಪುರ ಸ್ಯೆನಿಕ ಶಾಲೆಯ 3 ಕಟ್ಟಡಗಳಲ್ಲಿ ವಿಜಯಪುರ ಕ್ಷೇತ್ರದ 8 ವಿಧಾನಸಭೆಗಳ ಮತ ಎಣಿಕೆ ನಡೆಯಲಿದೆ. ರಾಷ್ಟ್ರಕೂಟ ಕಟ್ಟಡದಲ್ಲಿ ಮುದ್ದೇಬಿಹಾಳ, ದೇವರಹಿಪ್ಪರಗಿ ಹಾಗೂ ಸಿಂದಗಿ ವಿಧಾನಸಭೆ ವ್ಯಾಪ್ತಿಯ ಮತ ಎಣಿಕೆ ನಡೆಯಲಿದೆ. ಹೊಯ್ಸಳ ಕಟ್ಟಡದಲ್ಲಿ ಬಸವನಬಾಗೇವಾಡಿ, ಬಬಲೇಶ್ವರ ಹಾಗೂ ವಿಜಯಪುರ ನಗರ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ನಡೆಯಲಿದೆ. ವಿಜಯನಗರ ಕಟ್ಟಡದಲ್ಲಿ ನಾಗಠಾಣ ಹಾಗೂ ಇಂಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ನಡೆಯಲಿದೆ. •ಜಿ.ಎಸ್. ಕಮತರ