Advertisement

23ರಂದು ವಿಜಯಪುರದಲ್ಲಿ ರಾಜ್ಯಮಟ್ಟದ ಪಿಂಚಣಿ ಅದಾಲತ್‌

03:47 PM Aug 09, 2019 | Naveen |

ವಿಜಯಪುರ: ಸರ್ಕಾರಿ ನೌಕರರ ನಿವೃತ್ತಿ ಪಿಂಚಣಿ ಹಾಗೂ ಕುಟುಂಬ ಪಿಂಚಣಿ ಸೌಲಭ್ಯಗಳು ಸೇರಿದಂತೆ ಕುಂದು ಕೊರತೆಗಳಿಗೆ ನಿರಂತರ ಸ್ಪಂದಿಸುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಗುರುವಾರ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪಿಂಚಣಿ ಅದಾಲತ್‌ ಪೂರ್ವ ಸಿದ್ದತೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ನಿವೃತ್ತ ನೌಕರರ ಪಿಂಚಣಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆ. 23ರಂದು ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ರಾಜ್ಯಮಟ್ಟದ ಪಿಂಚಣಿ ಅದಾಲತ್‌ ನಡೆಸಲಾಗುತ್ತಿದೆ. ಜಿಲ್ಲೆಯ ನಿವೃತ್ತ ನೌಕರರು ತಮ್ಮ ಪಿಂಚಣಿ ಕುರಿತು ಸಮಸ್ಯೆಗಳಿದ್ದಲ್ಲಿ ಈ ಅದಾಲತ್‌ನಲ್ಲಿ ಭಾಗವಹಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಅದಾಲತ್‌ ಜೊತೆಗೆ ತಕ್ಷಣಕ್ಕೆ ವಿವಿಧ ಪಿಂಚಣಿ ಸೌಲಭ್ಯಗಳು ಮತ್ತು ಕುಂದು-ಕೊರತೆಗಳಿಗೆ ನಿರಂತರ ಸ್ಪಂದಿಸುವ ಕಾರ್ಯ ಮಾಡುವಂತೆ ಸೂಚನೆ ನೀಡಿದರು.

ನಿವೃತ್ತಿ ಹೊಂದಿದ ಸರ್ಕಾರಿ ನೌಕರರಿಗೆ ಸಂಬಂಧಪಟ್ಟಂತೆ ಕುಂದು-ಕೊರತೆ ನಿವಾರಣೆಗಾಗಿ ಸರ್ಕಾರದ ನಿರ್ದೇಶನದನ್ವಯ ಸಣ್ಣ ಉಳಿತಾಯ ಮತ್ತು ಆಸ್ತಿ ನಿರ್ವಹಣೆ ಇಲಾಖೆ ಅಧಿಕಾರಿಗಳು, ಜಿಲ್ಲಾ ಅಗ್ರಣೀಯ ಬ್ಯಾಂಕ್‌ ಆದ ಸಿಂಡಿಕೇಟ್ ಬ್ಯಾಂಕ್‌ನ ಎಲ್ಡಿಎಂ ವ್ಯವಸ್ಥಾಪಕರನ್ನು ಹಾಗೂ ಜಿಲ್ಲಾ ಖಜಾನೆ ಅಧಿಕಾರಿಗಳನ್ನೊಳಗೊಂಡ ತ್ರಿಸದಸ್ಯ ಸಮಿತಿ ರಚಿಸಿಕೊಂಡು ಸಮಿತಿ ನಿವೃತ್ತ ನೌಕರರ ಅರ್ಜಿಗಳನ್ನು ಪರಾಮರ್ಶಿಸುವ ಜೊತೆಗೆ ಅವರ ಕುಂದು-ಕೊರತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

80ಕ್ಕೂ ಹೆಚ್ಚಿನ ವಯೋಮಿತಿ ಮೀರಿದ ವೃದ್ಧ ನಿವೃತ್ತ ನೌಕರರಿಗೆ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ಸೌಲಭ್ಯ ಸಹ ಇದೆ. ಹಿಗಾಗಿ ನಿರ್ಲಕ್ಷ್ಯ ಇಲ್ಲದಂತೆ ನಿವೃತ್ತ ನೌಕರರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸಬೇಕು. ಅವಶ್ಯಕ ದಾಖಲಾತಿಗಳ ಅನ್ವಯ ಅವರ ಸಮಸ್ಯೆಗಳನ್ನು ಆದ್ಯತೆ ಮೇಲೆ ಗಮನಕ್ಕೆ ತೆಗೆದುಕೊಂಡು ಪರಿಹರಿಸಲು ಪ್ರಯತ್ನಿಸಬೇಕು. ಅದಾಲತ್‌ನಲ್ಲಿ ಪರಿಷ್ಕೃತ ಪಿಂಚಣಿ ಸೌಲಭ್ಯ, ಬ್ಯಾಂಕ್‌ನಲ್ಲಿ ಪ್ರತ್ಯೇಕ ಕೌಂಟರ್‌ ಮೂಲಕ ಪಿಂಚಣಿ ಪಡೆಯಲು ಅವಕಾಶ ಸೇರಿದಂತೆ ಇತರೆ ಕುಂದು-ಕೊರತೆಗಳ ಬಗ್ಗೆ ಗಮನಕ್ಕೆ ಬಂದಿವೆ. ತ್ರಿಸದಸ್ಯರ ಸಮಿತಿಯು ಸಕಾಲಕ್ಕೆ ಅವರಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.

Advertisement

ನಿವೃತ್ತ ನೌಕರರು ತಮ್ಮ ಕುಂದು-ಕೊರತೆ ಅರ್ಜಿಗಳನ್ನು ಲಿಖೀತ ರೂಪದಲ್ಲಿ ಹಾಗೂ ಸೂಕ್ತ ದಾಖಲೆಗಳ ಸಮೇತ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ಸಮಿತಿ ಸದಸ್ಯರಿಗೆ ಸಲ್ಲಿಸಬೇಕು. ಅಧಿಕಾರಿಗಳು ಸೂಕ್ತ ಸಮಯಕ್ಕೆ ಸ್ಪಂದಿಸಬೇಕು. ಈ ಕುರಿತು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅರ್ಧ ದಿನದ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

ಪಿಂಚಣಿ-ಸಣ್ಣ ಉಳಿತಾಯ ಹಾಗೂ ಆಸ್ತಿ ಋಣ ನಿರ್ವಹಣೆ ಇಲಾಖೆ ಪಿಂಚಣಿ ಅಭಿವೃದ್ಧಿ ಅಧಿಕಾರಿಗಳಾದ ಶಿವರುದ್ರಪ್ಪ ಅವರು ಸರ್ಕಾರಿ ನೌಕರರ ನಿವೃತ್ತ ಪಿಂಚಣಿ, ಕುಟುಂಬ ಪಿಂಚಣಿ, ಸೌಲಭ್ಯ ಕಲ್ಪಿಸುವಲ್ಲಿ ಮಹಾಲೇಖ ಪಾಲಕರ ಕಚೇರಿಯ ಕರ್ತವ್ಯ, ಖಜಾನೆ ಇಲಾಖೆ ಪಾತ್ರ, ಬ್ಯಾಂಕ್‌ಗಳ ಕರ್ತವ್ಯ ಮತ್ತು ಇಲಾಖೆಯಲ್ಲಿ ಸ್ವೀಕೃತವಾಗಿರುವ ಪಿಂಚಣಿ ಕುಂದು-ಕೊರತೆ ದೂರುಗಳ ಮಾಹಿತಿ, ಗ್ರೂಪ್‌-ಎ,ಬಿ ಅಧಿಕಾರಿಗಳ ಪ್ರಕರಣಗಳಲ್ಲಿ ಪಿಂಚಣಿ ಪ್ರಸ್ತಾವನೆ ಮಹಾ ಲೇಖಪಾಲಕರಿಗೆ ಇಲಾಖಾ ಮುಖ್ಯಸ್ಥರು ಸಲ್ಲಿಸುವ ಕುರಿತಂತೆ, ಆಡಳಿತ ಇಲಾಖೆಗಳ ಮೂಲಕ ಮಹಾ ಲೇಖಪಾಲಕರಿಗೆ ಇಲಾಖಾ ಮುಖ್ಯಸ್ಥರ ಪ್ರಕರಣಗಳಲ್ಲಿ ಪಿಂಚಣಿ ಪ್ರಸ್ತಾವನೆ ಸಲ್ಲಿಕೆ ಹಾಗೂ ಗ್ರೂಪ್‌-ಸಿ ಮತ್ತು ಗ್ರೂಪ್‌-ಡಿ ಪ್ರಕರಣಗಳಲ್ಲಿ ಕಚೇರಿ ಮುಖ್ಯಸ್ಥರ ಮೂಲಕ ಪಿಂಚಣಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಅವಶ್ಯಕ ಮಾಹಿತಿ ನೀಡಿದರು.

ಅದರಂತೆ ಇಲಾಖೆ ಸಹಾಯಕ ನಿರ್ದೇಶಕರಾದ ಹೊನ್ನುರಪ್ಪ ಟಿ. ಅವರು, ಅಧಿಕಾರಿ, ನೌಕರರು ನಿವೃತ್ತ ಹೊಂದುವ 3 ತಿಂಗಳ ಮೊದಲು ಹಾಗೂ ನಂತರ ಪಿಂಚಣಿ ಪ್ರಸ್ತಾವನೆ ಮೂಲಕ ಕಲ್ಪಿಸಬೇಕಾದ ಸೌಲಭ್ಯಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ಜಿಲ್ಲಾ ಖಜಾನೆ ಇಲಾಖೆ ಉಪ ನಿರ್ದೇಶಕ ಸೋಮನಕಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ನಿವೃತ್ತ ಸರ್ಕಾರಿ ನೌಕರರು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಪಿಂಚಣಿ ಪಡೆಯುವ 2,46,408 ಪಿಂಚಣಿದಾರರು ಜಿಲ್ಲೆಯಲ್ಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕ ಸೋಮನಗೌಡ ಐನಾಪುರ ಮಾತನಾಡಿ, ವಯೋವೃದ್ಧ ನಿವೃತ್ತ ನೌಕರರಿಗೆ ಪ್ರತ್ಯೇಕ ಕೌಂಟರ್‌ ಸ್ಥಾಪನೆ, ಪಿಂಚಣಿದಾರ ಜೊತೆ ಬ್ಯಾಂಕ್‌ ಸಿಬ್ಬಂದಿಗಳ ಮೂಲಕ ಸೌಜನ್ಯಯುತ ವರ್ತನೆಗೆ ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ಹೇಳಿದರು.

ಅಪರ್‌ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next