Advertisement

ವೈದ್ಯರ ಸಲಹೆ ಇಲದೇ ಎಂಟಿಪಿ ಔಷಧ ಮಾರಾಟ ನಿಷೇಧ: ಡಿಸಿ

05:36 PM Nov 28, 2019 | Naveen |

ವಿಜಯಪುರ: ತಜ್ಞ ವೈದ್ಯರ ಸಲಹೆ ಇಲ್ಲದೇ ಮೆಡಿಕಲ್‌ ಟರ್ಮಿನೇಶನ್‌ ಆಫ್‌ ಪ್ರಗನೆನ್ಸಿ (ಎಂಟಿಪಿ)ಗೆ ಸಂಬಂಧಿಸಿದ ಔಷಧಗಳನ್ನು ಮಾರಾಟ ಮಾಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪಿಸಿಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಸೆಕೆಂಡ್‌ ಟ್ರೈಮೆಸ್ಟರ್‌ನಲ್ಲಿ ಇಬ್ಬರು ತಜ್ಞ ವೈದ್ಯರ ಸಲಹೆ ಇಲ್ಲದೇ ಎಂಟಿಪಿ ಮಾಡದಂತೆ ಕಟ್ಟುನಿಟ್ಟಿನ ಕಾನೂನಿದೆ. 20 ವಾರಗಳ ನಂತರ ಅಬ್ನಾರ್ಮಲಿಟಿ ಕಂಡು ಬಂದಾಗ ಇಬ್ಬರು ಸ್ತ್ರೀರೋಗ ತಜ್ಞರು, ಇಬ್ಬರು ನಿಯೋನೆಟಾಲಾಜಿಸ್ಟ್‌, ಓರ್ವ ರೇಡಿಯಾಲಾಜಿಸ್ಟ್‌ ಸೇರಿದಂತೆ 5 ಜನರನ್ನೊಳಗೊಂಡ ಸಮಿತಿ ಒಪ್ಪಿಗೆ ಪಡೆದು ಎಂಟಿಪಿ ಮಾಡಬಹುದು ಎಂಬ ಅಭಿಪ್ರಾಯಕ್ಕೆ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.

ಆಯಾ ರೋಗಿಗಳ ಅಭಿಪ್ರಾಯ ಸೇರಿದಂತೆ ಎಂಟಿಪಿ ಕೈಗೊಳ್ಳುವ ಕುರಿತಂತೆ ಸೂಕ್ತ ನಿರ್ಣಯಗಳನ್ನು ಈ ಸಮಿತಿ ಕೈಗೊಳ್ಳಬೇಕು. ಮುಂದಿನ ಇತರೆ ವಿಷಯಗಳ ಕುರಿತಂತೆ ಸಲಹಾ ಸಮಿತಿ ಸಮ್ಮತಿಗೆ ವಿಷಯ ಮಂಡಿಸುವಂತೆ ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಅದರಂತೆ ಪಿಸಿ ಮತ್ತು ಪಿಎನ್‌ಡಿಟಿಗೆ ಸಂಬಂಧಪಟ್ಟಂತೆ ದೂರುಗಳನ್ನು ಜಿಲ್ಲಾ ಸಕ್ಷಮ ಪ್ರಾಧಿಕಾರದ ಗಮನಕ್ಕೆ ತರುವ ಜೊತೆಗೆ ಅವಶ್ಯಕ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಣಯ ಕೈಗೊಳ್ಳಬೇಕು. ಪಿಸಿ ಪಿಎನ್‌ಡಿಟಿ ಅಡಿ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ತುಳಸಿರಾಮ ಸೂರ್ಯವಂಶಿ ಅವರನ್ನು ನಿಯೋಜಿಸಲಾಯಿತು.

ಹೃದ್ರೋಗ, ಸ್ತ್ರೀರೋಗ ತಜ್ಞರು ತಮ್ಮ ತಜ್ಞತೆಗೆ ಸಂಬಂಧಿಸಿದಂತೆ ಇಕೋಕಾರ್ಡಿಯಾಗ್ರಾಫಿ ಹಾಗೂ ಸೋನೋಗ್ರಾಫಿ ಮಾಡಲು ಯಾವುದೇ ತೊಂದರೆಯಿಲ್ಲ. ಈ ರೀತಿ ಮಾಡುವಾಗ ಸ್ವಾಭಾವಿಕವಾಗಿಯೇ ಬೇರೆ ಅಂಗಾಂಗಗಳಲ್ಲಿ ತೊಂದರೆ ಇದ್ದದ್ದು ಕಂಡು ಬರುತ್ತವೆ. ಇದನ್ನು ರೋಗಿ ಹಿತದೃಷ್ಟಿಯಿಂದ, ಸಂಬಂಧಪಟ್ಟ ತಜ್ಞ ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡಬಹುದು. ಆದರೆ ತಮ್ಮ ವರದಿಗಳಲ್ಲಿ ಬೇರೆ ಅಂಗಾಂಗಳ ತೊಂದರೆಗಳನ್ನು ನಮೂದಿಸಬಾರದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ಧತಿ ನಿರ್ಮೂಲನೆಗೆ ಸೂಕ್ತ ಜಾಗೃತಿ ಮೂಡಿಸುವ ಜೊತೆಗೆ ಬಾಲ್ಯ ವಿವಾಹ ನಿಯಂತ್ರಣಕ್ಕೆ ಸೂಕ್ತ ನಿಗಾ ಇಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಪಿಸಿ ಪಿಎನ್‌ಡಿಟಿ ಕಾಯ್ದೆ ಅಡಿಯಲ್ಲಿ 121 ಸ್ಕ್ಯಾನಿಂಗ್‌ ಸೆಂಟರ್‌ಗಳನ್ನು ನೋಂದಾಯಿಸಿದ್ದು, 153 ಸ್ಕ್ಯಾನಿಂಗ್‌ ಮಶೀನ್‌ಗಳನ್ನು ವಿವಿಧ ಆಸ್ಪತ್ರೆ ಹಾಗೂ ಸಂಸ್ಥೆಗಳು ಹೊಂದಿವೆ. ಅದೇ ರೀತಿ ವಿವಿಧ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಬಗ್ಗೆ ಸಭೆಯಲ್ಲಿ ಸೂಚಿಸಲಾಯಿತು.

ಇದೇ ಸಭೆಯಲ್ಲಿ ಹೊಸದಾಗಿ ಸ್ಕ್ಯಾನಿಂಗ್‌ ಸೆಂಟರ್‌ ನೋಂದಣಿಗೆ ಬಂದಿರುವ ಅರ್ಜಿಗಳು ಹಾಗೂ ನವೀಕರಣ ಅರ್ಜಿಗಳ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಸಮಿತಿ ಸದಸ್ಯರಾದ ಮಕ್ಕಳ ತಜ್ಞ ಡಾ| ಎಲ್‌.ಎಚ್‌. ಬಿದರಿ, ಡಾ| ಎಸ್‌.ಬಿ. ಪಾಟೀಲ, ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಹೇಂದ್ರ ಕಾಪ್ಸೆ, ಡಾ| ರಾಜೇಶ್ವರಿ ಗೊಲಗೇರಿ, ಸ್ತ್ರೀ ರೋಗ ತಜ್ಞ ಡಾ| ವಿದ್ಯಾ ಥೊಬ್ಬಿ, ರೇಡಿಯಾಲಾಜಿಸ್ಟ್‌ ಡಾ| ಪರಶುರಾಮ ದೇವಮಾನೆ, ಉಜ್ವಲ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕಿ ಸುನಂದ ತೋಳಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next