ವಿಜಯಪುರ: ಉತ್ತರ ಹಾಗೂ ಮಧ್ಯ ಕರ್ನಾಟಕ ಪ್ರದೇಶಗಳನ್ನು ಕರಾವಳಿ ಪ್ರದೇಶಗಳೊಂದಿಗೆ ಸಂಪರ್ಕ ಕಲ್ಪಿಸುವ ವಿಜಯಪುರ-ಮಂಗಳೂರು ನೂತನ ರೈಲು ಸೇವೆಗೆ ಸೋಮವಾರ ಸಂಜೆ ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದರು. ವಿಜಯಪುರ ರೈಲು ನಿಲ್ದಾಣದಿಂದ ಪ್ರತಿನಿತ್ಯ ಸಂಜೆ 6 ಗಂಟೆಗೆ ಹೊರಡುವ ಈ ರೈಲು ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ತಲುಪಲಿದೆ. ಪ್ರತಿನಿತ್ಯ ಸಂಜೆ 4:30ಕ್ಕೆ ಮಂಗಳೂರಿನಿಂದ ಹೊರಟು ಮರು ದಿನ ಬೆಳಗ್ಗೆ 11:45ಕ್ಕೆ ವಿಜಯಪುರ ತಲುಪಲಿದೆ.
ವಿಜಯಪುರದಿಂದ ಹೊರಡುವ ಈ ರೈಲು ಬಸವನಬಾಗೇವಾಡಿ, ಆಲಮಟ್ಟಿ, ಬಾಗಲಕೋಟೆ, ಗುಳೇದಗುಡ್ಡ, ಬಾದಾಮಿ, ಹೊಳೆಆಲೂರ, ಗದಗ, ಹುಬ್ಬಳ್ಳಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರ, ಹರಿಹರ, ದಾವಣಗೆರೆ, ಕಡೂರ, ಅರಸಿಕೇರೆ, ಹಾಸನ, ಸಕಲೇಶಪುರ, ಸುಬ್ರಮಣ್ಯ ಮೂಲಕ ಮಂಗಳೂರು ತಲುಪಲಿದೆ. 838 ಕಿ.ಮೀ. ದೂರ ಕ್ರಮಿಸುವ ಈ ರೈಲು ಮೀಟರ್‌ಗೆಜ್ ಇದ್ದಾಗ ಮೀರಜ್‌ನಿಂದ ಮಂಗಳೂರುವರೆಗೆ ಸಂಚರಿಸುತ್ತಿತ್ತು. ನೂತನ ಸೇವೆಯಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರಾವಳಿ ಭಾಗಕ್ಕೆ ತೆರಳುವ ಉತ್ತರ, ಮಧ್ಯ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ರೈಲು ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನನ್ನ ಮನವಿಗೆ ಸ್ಪಂದಿಸುವ ಮೂಲಕ ಈ ಭಾಗದ ಜನರ ಬಹು ವಷìಗಳ ಕನಸು ನನಸಾಗಿಸಿದ್ದಾರೆ. ವಿಜಯಪುರ ನಗರದಿಂದ ದೇಶದ ರಾಜಧಾನಿ ನವದೆಹಲಿ, ತಿರುಪತಿ ಕ್ಷೇತ್ರಕ್ಕೆ ನೂತನವಾಗಿ ರೈಲು ಓಡಿಸುವ ಕುರಿತು ಮನವಿ ಮಾಡಿದ್ದು ಸೂಕ್ತ ಸ್ಪಂದನೆ ದೊರೆತಿದೆ ಎಂದರು.
ಉತ್ತಮ ಸ್ಪಂದನೆ: ಕರಾವಳಿ ಭಾಗಕ್ಕೆ ಸಂಪರ್ಕ ಸಾಧಿಸುವ ವಿಜಯಪುರ-ಮಂಗಳೂರು ರೈಲು ಸೇವೆ ಆರಂಭಿಸಿದ ಮೊದಲ ದಿನವೇ ಪ್ರಯಾಣಿಕರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಮಂಗಳೂರಿಗೆ ಹೊರಟ ಮೊದಲ ದಿನದ ರೈಲಿನಲ್ಲಿ ಪ್ರಯಾಣಿ ಸಲು ವಿಜಯಪುರ ನಗರದಿಂದ 2 ಟೈರ್ ವಾತಾನುಕೂಲ (ಎಸಿ) ವಿಭಾಗದಲ್ಲಿ 24, 3 ಟೈರ್ ಹವಾನಿಯಂತ್ರಿತ ವಿಭಾಗದಲ್ಲಿ 35, ಸ್ಲಿàಪರ್ ವಿಭಾಗದಲ್ಲಿ 224 ಹಾಗೂ ವಿಜಯ ಪುರದಿಂದ 20 ಜನರಲ್ ವಿಭಾಗದಲ್ಲಿ ಟಿಕೆಟ್ ಪಡೆಯುವ ಮೂಲಕ ಉತ್ತಮ ಸ್ಪಂದನೆ ವ್ಯಕ್ತವಾ ಗಿದೆ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ- ಮೈಸೂರು ರೈಲು: ಶಿವಮೊಗ್ಗ- ಮೈಸೂರು ನಡುವೆ ಪ್ರತಿ ಸೋಮವಾರ ಮಾತ್ರ ಸಂಚರಿಸುವ ಜನಸಾಧಾರಣ ಎಕ್ಸ್‌ಪ್ರೆಸ್ ರೈಲು ಶಿವಮೊಗ್ಗದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಸಂಜೆ 7.05 ಗಂಟೆಗೆ ಮೈಸೂರು ನಿಲ್ದಾಣ ತಲಪಲಿದೆ. ಮೈಸೂರಿನಿಂದ ಪ್ರತಿ ಸೋಮವಾರ ಮಧ್ಯಾಹ್ನ 4.40 ಕ್ಕೆ ಹೊರಡುವ ರೈಲು ರಾತ್ರಿ 10.30 ಗಂಟೆಗೆ ಶಿವಮೊಗ್ಗ ರೈಲು ನಿಲ್ದಾಣವನ್ನು ಸೇರಲಿದೆ.
ದರ ಎಷ್ಟು?
2045 ರೂ. 2 ಟೈರ್ ಎಸಿ
1450 ರೂ. 3 ಟೈರ್ ಎಸಿ
530 ರೂ. ಸ್ಲಿಪರ್ ಕ್ಲಾಸ್
240 ರೂ. ಸಾಮಾನ್ಯ ದರ್ಜೆ