ವಿಜಯಪುರ: ಜಿಲ್ಲೆಯ ಏತ ನೀರಾವರಿ ಯೋಜನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ತೆಲಂಗಾಣ ಮೂಲದ 20 ಜೀತದಾಳುಗಳನ್ನು ರಕ್ಷಿಸಿರುವ ಜಿಲ್ಲಾಡಳಿತ ಬಾಧಿ ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿದೆ. ಜಿಲ್ಲೆಯ ಚಡಚಣ ತಾಲೂಕಿನ ಚಡಚಣ ಗ್ರಾಮದ ಏತ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಬೆಳಗಾವಿಯ ಆದಿತ್ಯ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 20 ಜನ ಜೀತದಾಳುಗಳನ್ನು ಜೀತಮುಕ್ತ ಮಾಡಲಾಗಿದೆ.
ನ್ಯಾಷನಲ್ ಆದಿವಾಸಿ ಸೋಲಿಡರ್ಟಿ ಕೌನ್ಸಿಲ್ ನ ಕೋಆರ್ಡಿನೇಟರ್ ವಾಸುದೇವರಾವ್ ಅವರು ಚಡಚಣ ಗ್ರಾಮದಲ್ಲಿ ಜೀತದಾಳು ಇರುವ ಕುರಿತು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಇಂಡಿ ಉಪವಿಭಾಗಾಧಿ ಕಾರಿ ಸ್ನೇಹಲ್ ಲೋಖಂಡೆ ಅವರಿಗೆ ತುರ್ತಾಗಿ ಜೀತದಾಳುಗಳನ್ನು ರಕ್ಷಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಸ್ನೇಹಲ್, ಚಡಚಣ ತಹಶೀಲ್ದಾರ್, ಇಂಡಿ ಕಾರ್ಮಿಕ ನಿರೀಕ್ಷಕರು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಚಡಚಣ ಸಿಪಿಐ ಜೊತೆ ಸೇರಿ ಸಂಖ ಗ್ರಾಮದ ಸ.ನಂ. 112/1ರಲ್ಲಿ ಇರಿಸಿದ್ದ ಜೀತದಾಳು ಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೀತಮುಕ್ತರಾದ ಕಾರ್ಮಿಕರಲ್ಲಿ ಎಲ್ಲರೂ ತೆಲಂಗಾಣ ಮೂಲದವರಾಗಿದ್ದು, 13 ಗಂಡಸರು, 6 ಹೆಂಗಸರು ಹಾಗೂ ಓರ್ವ ಬಾಲಕ ಸೇರಿದಂತೆ ಒಟ್ಟು 20 ಜೀತದಾಳುಗಳನ್ನು ರಕ್ಷಿಸಿ, ಚಡಚಣ ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿದ್ದಾರೆ. ಅಲ್ಲದೇ ಜೀತಮುಕ್ತ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವಂತೆ ತೆಲಂಗಾಣ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ವಿಚಾರಣೆ ನಡೆಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಜೀತಮುಕ್ತರು, ಕಳೆದ 2 ತಿಂಗಳುಗಳಿಂದ ಬೆಳಗಾವಿಯ ಆದಿತ್ಯ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ 10 ಸಾವಿರ ಹಾಗೂ 50 ಸಾವಿರ ರೂ.ದಂತೆ ಮುಂಗಡ ಹಣ ನೀಡಿ ಜೀತದಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಪ್ರತಿ ತಿಂಗಳು 2 ಸಾವಿರ ರೂ. ಮುಂಗಡ ಹಣದಲ್ಲಿ ಕಡತ ಮಾಡುತ್ತಿದ್ದರು. ಕಾರ್ಮಿಕರಿಗೆ ಗುತ್ತಿಗೆದಾರರು ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ, ತಮಗೆ ಗುಡಿಸಲುಗಳಲ್ಲಿ ವಾಸಕ್ಕೆ ಇರಿಸಿದ್ದು, ಹೊರಗೆ ಎಲ್ಲೂ ಹೋಗದಂತೆ ನಿರ್ಬಂಧಿಸಿದ್ದರು ಎಂದು ದೂರಿದ್ದಾರೆ. ನಿತ್ಯ ಬೆಳಗ್ಗೆ 8 ಗಂಟೆಯಿಂದ ಸಂಜೆ 7ರವರೆಗೆ ಕೆಲಸ ಮಾಡಿಸುತ್ತಿದ್ದರು. ಒಂದು ದಿನ ಕೆಲಸ ಬಿಟ್ಟರೆ ಆ ದಿನದ ಸಂಬಳ ಕಡಿತ ಮಾಡುತ್ತಿದ್ದರು. ಅನಾರೋಗ್ಯ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗೂ ಬಿಡದೇ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಜೀತಮುಕ್ತ ಕಾರ್ಮಿಕರು ವಿಚಾರಣೆ ವೇಳೆ ಅಧಿ ಕಾರಿಗಳ ಎದುರು ಅಳಲು ತೋಡಿಕೊಂಡಿದ್ದಾರೆ.
ಬೆಳಗಾವಿಯ ಆದಿತ್ಯ ಕನ್‌ಸ್ಟ್ರಕ್ಷನ್ ಕಂಪನಿ ಕಾರ್ಮಿಕ ಕಾಯ್ದೆ ಉಲ್ಲಂಘಿಸಿದ್ದಾಗಿ ಕಾರ್ಮಿಕ ಇಲಾಖೆ ನಿರೀಕ್ಷಕರು ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಪಾಲನಾ ವರದಿ ಸಲ್ಲಿಸುವಂತೆ ಗುತ್ತಿಗೆದಾರ ಆದಿತ್ಯ ಕನ್ ಸ್ಟ್ರಕ್ಷನ್ ಕಂಪನಿಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.