Advertisement

ಆಧಾರ್‌ ನೋಂದಣಿಯಲ್ಲಿ ವಿಜಯಪುರ ನಂ.1

06:05 AM Dec 22, 2017 | Team Udayavani |

ಚಿತ್ರದುರ್ಗ: ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್‌ ನೋಂದಣಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ತೋರಿದೆ. ವಿಜಯಪುರ ಸೇರಿ ಕೆಲವು ಜಿಲ್ಲೆಗಳಲ್ಲಿ ಗುರಿ ಮೀರಿದ ಸಾಧನೆಯಾಗಿದ್ದರೆ, ಬೆಂಗಳೂರು ಕೊನೆಯ ಸ್ಥಾನದಲ್ಲಿದೆ.

Advertisement

ರಾಜ್ಯದಲ್ಲಿ 6,46,60,412 ಜನಸಂಖ್ಯೆ ಇದ್ದು, ಅವರಲ್ಲಿ 6,19,87,010 ಮಂದಿ ಈಗಾಗಲೇ ಆಧಾರ್‌ ನೋಂದಣಿ ಮಾಡಿಸಿದ್ದು, ಈ ಮೂಲಕ ಶೇ.95.9 ಸಾಧನೆ ಮಾಡಲಾಗಿದೆ. ಇನ್ನು ಕೇವಲ ಶೇ.4.1 ಜನ ಬಾಕಿ ಉಳಿದಿದ್ದು, ಅವರೂ ಆಧಾರ್‌ ನೋಂದಣಿ ಮಾಡಿಸಿದರೆ ಶೇ.100 ಸಾಧನೆ ಮಾಡಿದ ಕೀರ್ತಿ ಕರ್ನಾಟಕಕ್ಕೆ ಸಲ್ಲಲಿದೆ.

ರಾಜ್ಯದಲ್ಲಿ 2009ರಿಂದ ಆಧಾರ್‌ ನೋಂದಣಿ ಕಾರ್ಯ ಆರಂಭವಾಗಿದೆ. ಮೊದಲಿಗೆ ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆಧಾರ್‌ ನೋಂದಣಿ ಕಾರ್ಯ ಅನುಷ್ಠಾನಕ್ಕೆ ತರಲಾಯಿತು. ಇಲ್ಲಿ ಯಶಸ್ವಿಯಾದ ನಂತರ ರಾಜ್ಯದೆಲ್ಲೆಡೆ ವಿಸ್ತರಣೆ ಮಾಡಲಾಯಿತು.

ಬೆಂಗಳೂರಿಗೆ ಕೊನೆಯ ಸ್ಥಾನ:
ರಾಜ್ಯದ 30 ಜಿಲ್ಲೆಗಳ ಪೈಕಿ ಬೆಳಗಾವಿ ಶೇ.100.1, ಧಾರವಾಡ ಶೇ.101.2, ಮೈಸೂರು ಶೇ.100.5, ತುಮಕೂರು ಶೇ.101.7, ಉಡುಪಿ ಶೇ.100.9 ಹಾಗೂ ವಿಜಯಪುರ ಶೇ.102.7 ಸಾಧನೆ ಮಾಡಿವೆ. ಆದರೆ ರಾಜಧಾನಿ ಬೆಂಗಳೂರಿನಲ್ಲಿ 1,01,83,001 ಜನಸಂಖ್ಯೆ ಇದ್ದು, ಆ ಪೈಕಿ 91,32,642 ನಾಗರಿಕರು ಆಧಾರ್‌ ನೋಂದಣಿ ಮಾಡಿಸಿದ್ದು, ಕೇವಲ ಶೇ. 89.7ರಷ್ಟು ಸಾಧನೆಯಾಗಿದೆ. ಆಧಾರ ನೋಂದಣಿಯಲ್ಲಿ ಬೆಂಗಳೂರು ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದೆ.

ಇನ್ನುಳಿದಷ್ಟು ಜನ ಆಧಾರ ಕಾರ್ಡ್‌ ಪಡೆಯುವಂತೆ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ರಾಜ್ಯಾದ್ಯಂತ ಆಧಾರ್‌ ಅದಾಲತ್‌ ಸೇರಿ ವಿಶೇಷ ಶಿಬಿರಗಳನ್ನು ನಡೆಸಿದೆ. ರಾಜ್ಯದ ಎಲ್ಲ ನಾಗರಿಕರಿಗೂ ಆಧಾರ್‌ ಸಂಖ್ಯೆ ನೀಡುವ ಮೂಲಕ ಸಂಪೂರ್ಣ ಆಧಾರ್‌ ನೋಂದಣಿಯಾದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಕಾಲ ಸನ್ನಿಹಿತವಾಗಿದೆ.

Advertisement

ಆಧಾರ್‌ ಅದಾಲತ್‌ ಆರಂಭ:
ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಲು ಮತ್ತು ಈಗಾಗಲೇ ಆಧಾರ್‌ ನೋಂದಣಿಯಲ್ಲಿ ಹೆಸರು, ವಿಳಾಸ ತಪ್ಪು ಸೇರಿದಂತೆ ಆಗಿರುವ ಲೋಪ ದೋಷಗಳನ್ನು ಸರಿಪಡಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಧಾರ್‌ ಅದಾಲತ್‌ ಕಾರ್ಯಕ್ರಮ ಆಯೋಜಿಸಿದ್ದು, ಜನತೆ ಆಧಾರ್‌ ನೋಂದಣಿಗೆ ಮುಗಿಬಿದ್ದಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸೇವೆಗಳನ್ನು ಪಡೆಯಬೇಕಾದರೆ ಆಧಾರ್‌ ಕಾರ್ಡ್‌ ಕಡ್ಡಾಯ. ಆಧಾರ್‌ ಕಾರ್ಡ್‌ ಹೊಂದಿಲ್ಲದವರು ಮತ್ತು ಈಗಾಗಲೇ ಆಧಾರ್‌ ಕಾರ್ಡ್‌ ಹೊಂದಿ ಪಡಿತರ ಚೀಟಿ, ಬ್ಯಾಂಕ್‌ ಖಾತೆ, ಪ್ಯಾನ್‌ಕಾರ್ಡ್‌ ಸೇರಿ ವಿವಿಧ ಬಾಬ್ತುಗಳಿಗೆ ಲಿಂಕ್‌ ಮಾಡುವುದಕ್ಕೆ ವಿಧಿ ಸಲಾಗಿರುವ ಗಡುವನ್ನು 2018ರ ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ. ಹಾಗಾಗಿ ಜನ ಆಧಾರ್‌ ಕಾರ್ಡ್‌ ನೋಂದಣಿ ಮಾಡಿಸಿಕೊಳ್ಳಲು ಆಧಾರ್‌ ಅದಾಲತ್‌ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ವಯಸ್ಕರು, ವೃದ್ಧರ ಆಧಾರ್‌ ನೋಂದಣಿ ಆಗಿದೆ. ಆದರೆ ಚಿಕ್ಕಮಕ್ಕಳು (0 ಯಿಂದ 6 ವರ್ಷದೊಳಗಿನ) ನೋಂದಣಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಅದಕ್ಕಾಗಿ ಆಧಾರ್‌ ಶಾಶ್ವತ ನೋಂದಣಿ ಕೇಂದ್ರಗಳ ಜೊತೆಗೆ ಎಲ್ಲ ಅಂಗನವಾಡಿ, ಶಾಲಾ-ಕಾಲೇಜುಗಳಲ್ಲಿ ವಿಶೇಷ ಆಧಾರ್‌ ನೋಂದಣಿ ಅಭಿಯಾನ ನಡೆಸಲಾಗುತ್ತಿದೆ. ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಆಧಾರ್‌ ನೋಂದಣಿಗೆ ಅರಿವು ಮೂಡಿಸುವ ಕಾರ್ಯ ಭರದಿಂದ ಸಾಗಿದೆ.

ಆಧಾರ್‌ ನೋಂದಣಿಯ ಜಿಲ್ಲಾವಾರು ಸಾಧನೆ
ಜಿಲ್ಲೆ                       ಸಾಧನೆ                  ಬಾಕಿ ನೋಂದಣಿ
ಬಾಗಲಕೋಟೆ               ಶೇ.98.1                   ಶೇ. 1.9
ಬಳ್ಳಾರಿ                    ಶೇ.94.7                  5.3
ಬೆಂಗಳೂರು ಗ್ರಾಮಾಂತರ      ಶೇ.93.1                  ಶೇ.6.9
ಬೆಳಗಾವಿ                  ಶೇ.100.1             ಶೇ.-0.1
ಬೆಂಗಳೂರು ನಗರ          ಶೇ.89.7                  ಶೇ.10.3
ಬೀದರ್‌                    ಶೇ.92.9                  ಶೇ.7.1
ಚಾಮರಾಜನಗರ              ಶೇ.92.6                  ಶೇ.7.4
ಚಿಕ್ಕಮಗಳೂರು               ಶೇ.95.4                  ಶೇ.4.6
ಚಿಕ್ಕಬಳ್ಳಾಪುರ                ಶೇ.90.4                  ಶೇ.9.6
ಚಿತ್ರದುರ್ಗ                  ಶೇ.95.4                  ಶೇ.4.2
ದಕ್ಷಿಣ ಕನ್ನಡ                ಶೇ.96.4              ಶೇ.3.6
ದಾವಣಗೆರೆ                 ಶೇ.97.8                 ಶೇ.2.2
ಧಾರವಾಡ                 ಶೇ.101.2                 ಶೇ.-1.2
ಗದಗ                       ಶೇ.97.5               ಶೇ.2.5
ಹಾಸನ                   ಶೇ.94.5               ಶೇ.5.5
ಹಾವೇರಿ                   ಶೇ.99.1                  ಶೇ.0.9
ಕಲಬುರುಗಿ                 ಶೇ.97.2                 ಶೇ.2.8
ಕೊಡಗು                   ಶೇ.91.9                     ಶೇ.8.1
ಕೋಲಾರ                 ಶೇ.90.6                     ಶೇ.9.4
ಕೊಪ್ಪಳ                   ಶೇ.97                       ಶೇ.3
ಮಂಡ್ಯ                   ಶೇ.93                       ಶೇ.7
ಮೈಸೂರು                ಶೇ.100.5                   ಶೇ.-0.5
ರಾಯಚೂರು              ಶೇ.94.5                     ಶೇ.5.5
ರಾಮನಗರ                ಶೇ.91                       ಶೇ.9
ಶಿವಮೊಗ್ಗ                ಶೇ.95.7                     ಶೇ.4.3
ತುಮಕೂರು              ಶೇ.101.7                ಶೇ.-1.7
ಉಡುಪಿ                    ಶೇ.100.9                ಶೇ.-0.9
ಉತ್ತರಕನ್ನಡ            ಶೇ.98.5                  ಶೇ.1.5
ವಿಜಯಪುರ             ಶೇ.102.7                ಶೇ.-2.7
ಯಾದಗಿರಿ              ಶೇ.97.6                  ಶೇ.2.4
ಒಟ್ಟು                     ಶೇ.95.9                  ಶೇ.4.1

ಆಧಾರ್‌ ಅದಾಲತ್‌, ವಿಶೇಷ ಶಿಬಿರಗಳ ಮೂಲಕ ಶಾಲಾ, ಕಾಲೇಜು, ಅಂಗನವಾಡಿ ಕೇಂದ್ರಗಳಲ್ಲಿ ಆಧಾರ್‌ ನೋಂದಣಿ ಮತ್ತು ತಿದ್ದುಪಡಿ ಮಾಡಲಾಗುತ್ತಿದೆ. ಶೀಘ್ರದಲ್ಲೇ ಶೇ.100ರಷ್ಟು ಸಾಧನೆ ಮಾಡಿದ ರಾಜ್ಯ ಎನ್ನುವ ಕೀರ್ತಿಗೆ ಕರ್ನಾಟಕ ಪಾತ್ರವಾಗಲಿದೆ.
– ರಂಗನಾಥ್‌, ಜಿಲ್ಲಾ ಆಧಾರ್‌ ಸಮನ್ವಯಾ ಧಿಕಾರಿ, ಚಿತ್ರದುರ್ಗ

– ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next