ಉದ್ಯಮಿ ವಿಜಯ್ ಸಂಕೇಶ್ವರ ಜೀವನಾಧಾರಿತ “ವಿಜಯಾನಂದ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರದ ಕನ್ನಡ ಟ್ರೇಲರ್ ಬಿಡುಗಡೆ ಮಾಡಿದರೆ, ಆರೋಗ್ಯ ಸಚಿವ ಸುಧಾಕರ್ ಹಿಂದಿ ಟ್ರೇಲರ್ ಬಿಡುಗಡೆಗೊಳಿಸಿದರು.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ವಿಜಯ ಸಂಕೇಶ್ವರ ಅವರನ್ನು 1980ರಿಂದ ನೋಡಿದ್ದೇನೆ. ಸಂಕೇಶ್ವರ ಕೇವಲ ವೆಂಚರ್ ಅಲ್ಲ, ಅವರು ಅಡ್ವೆಂಚರ್ ವ್ಯಕ್ತಿ. ಯಾರು ಆಗಲ್ಲ ಆ ದಾರಿ ಸುಲಭ ಅಲ್ಲ ಅಂತ ಹೇಳುತ್ತಾರೋ ಅದೇ ದಾರಿ, ಅದೇ ಕಷ್ಟದ ಕೆಲಸವನ್ನು ಮಾಡಿ ಜಯಗಳಿಸುತ್ತಾರೆ. ಅವರಲ್ಲಿ ಗೆಲುವಿನ ಹಸಿವಿದೆ. ವಯಸ್ಸು ಅವರ ದೇಹಕ್ಕೆ ಹೊರತು ಅವರ ಜಯಕ್ಕಲ್ಲ. ಅಸಾಧ್ಯವನ್ನು ಸಾಧ್ಯ ಮಾಡುವ ವ್ಯಕ್ತಿ ಅವರು. ಅವರ ಹೆಸರಲ್ಲೇ ವಿಜಯವಿದೆ. ಈ ಚಿತ್ರ ಎಲ್ಲ ಯುವಕರಿಗೂ ಮಾದರಿಯಾಗಲಿ ಎಂದು ಶುಭಕೋರಿದರು. ಸಚಿವ ಸುಧಾಕರ ಮಾತನಾಡಿ ಕೂಡಾ ಶುಭ ಹಾರೈಸಿದರು.
ಚಿತ್ರದ ನಾಯಕ ನಿಹಾಲ್ ಮಾತನಾಡಿ, “ನಾನು ಮೂಲತಃ ಹುಬ್ಬಳ್ಳಿಯವನು. ನಮ್ಮ ತಂದೆಯ ಬಾಯಲ್ಲಿ ವಿಜಯ್ ಸಂಕೇಶ್ವರ ಅವರ ಬಗ್ಗೆ ಕೇಳಿದ್ದೆ. ಈಗ ಅವರ ಪಾತ್ರ ಮಾಡುತ್ತಿರುವುದು ಸಂತಸದ ವಿಷಯ. ಚಿತ್ರ ಆರಂಭ ಮಾಡುವ ಮುನ್ನ 6 ತಿಂಗಳುಗಳ ಕಾಲ ರಿಸರ್ಚ್ ಮಾಡಿದ್ದೇವೆ. ವಿಜಯಾನಂದ ಕನ್ನಡದ ಮೊದಲ ಬಯೋಪಿಕ್ ಆಗಲಿದೆ. ಇನ್ನು ಮುಂದಿನ ದಿನಗಳಲ್ಲಿ ನಾನು ಸಾಕಷ್ಟು ಚಿತ್ರ ಮಾಡಬಹುದು. ಆದರೆ ವಿಜಯಾನಂದ ಚಿತ್ರ ಮಾಡಿದಷ್ಟು ಸಂತೋಷ ಬೇರೊಂದಿಲ್ಲ. ನಿಮ್ಮ ಬದುಕಿನಲ್ಲಿ ಒಂದು ಬದಲಾವಣೆ, ಒಂದು ಬೆಳಕು ಮೂಡಲು ಈ ಚಿತ್ರ ನೋಡಬೇಕು. ವಿಜಯಾನಂದ ತಂದೆ -ಮಗ ಇಬ್ಬರ ಸೇರಿ ಆದಂತ ಹೆಸರು’ ಎಂದರು.
ನಿರ್ದೇಶಕಿ ರಿಷಿಕಾ ಶರ್ಮಾ ಮಾತನಾಡಿ, ಇದು ಕೇವಲ ಬಯೋಪಿಕ್ ಅಲ್ಲ. ಮೊದಲನೇದಾಗಿ ಇದು ಕನ್ನಡದ ಮೊದಲ ಬಯೋಪಿಕ್ ಅನ್ನುವುದು ಹೆಮ್ಮೆ. ಕೇವಲ ಬಯೋಪಿಕ್ ಆಗಿರದೆ ಒಂದು ಕಮರ್ಷಿಯಲ್ ಬಯೋಪಿಕ್ ಆಗಿದೆ. ಯಾರಾದರೂ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು. ಏನನ್ನಾದರೂ ಗಳಿಸಬೇಕು ಎನ್ನುವವರು ಈ ಚಿತ್ರವನ್ನು ನೋಡಲೇಬೇಕು. ಸಾಧಿಸುವ ಛಲ, ಹುಮ್ಮಸ್ಸು ಈ ಚಿತ್ರ ನೀಡಲಿದೆ. ಚಿತ್ರದ ಕೊನೆಯಲ್ಲಿ ನಾನು ಸಾಧಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ನಿಮಿಗೆ ಅನಿಸುತ್ತದೆ. ತಾಯಿ ಅಂದಾಗ ಎಲ್ಲರೂ ಎಮೋಷನಲ್ ಆಗ್ತಿವಿ, ಕ್ರೆಡಿಟ್ ನೀಡುತ್ತೇವೆ. ಆದರೆ ನಮ್ಮ ಜೀವನದ ನಿಜವಾದ ಹೀರೊ ಅಪ್ಪನಿಗೆ ಯಾವುದೇ ಕ್ರೆಡಿಟ್ ನೀಡಲ್ಲ. ಇದು ಒಂದು ಅಪ್ಪ ಮಗನ ಜರ್ನಿ ಕೂಡಾ ಆಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಹಂಚಿಕೆದಾರರಾಗಿ ಜಾಕ್ ಮಂಜು ಹಾಗೂ ಇತರ ಭಾಷೆಗಳ ಹಂಚಿಕೆದಾರರಾಗಿ ಯು ಎಫ್ಓ ಮುಂದೆ ಬಂದಿದ್ದಾರೆ. ಡಿಸೆಂಬರ್ 9 ರಂದು ದೇಶಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅನಂತ್ ನಾಗ್, ನಿಹಾಲ್, ಸಿರಿ, ಭರತ್ ಬೋಪಣ್ಣ, ರವಿಚಂದ್ರನ್,ಪ್ರಕಾಶ್ ಬೆಳವಾಡಿ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ, ರವಿ ವರ್ಮ ಸಾಹಸ, ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜನೆ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ