ಪ್ರಖ್ಯಾತ ಸಾರಿಗೆ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಗಾಥೆಯನ್ನು ಆಧರಿಸಿದ “ವಿಜಯಾನಂದ’ ಸಿನಿಮಾ ಈ ವಾರ ತೆರೆಗೆ ಬಂದಿದೆ. ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡಿರುವಂತೆ, “ವಿಜಯಾನಂದ’ ಕನ್ನಡದ ಮೊದಲ ಅಧಿಕೃತ ಬಯೋಪಿಕ್ ಸಿನಿಮಾ.
1970ರ ದಶಕದಲ್ಲಿ ಒಂದು ಟ್ರಕ್ ಮೂಲಕ ಸಾರಿಗೆ ಉದ್ಯಮ ಆರಂಭಿಸಿ, ಇಡೀ ಸಾರಿಗೆ ಉದ್ಯಮವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ವಿಜಯ ಸಂಕೇಶ್ವರ ಅವರ ಜೀವನ ಏಳು-ಬೀಳುಗಳು, ಸಾಧನೆಯ ಚಿತ್ರಣವನ್ನು “ವಿಜಯಾನಂದ’ ಸಿನಿಮಾದಲ್ಲಿ ತೆರೆಮೇಲೆ ತರಲಾಗಿದೆ. ಮುಖ್ಯವಾಗಿ ಯುವಕನಾಗಿ, ಮಧ್ಯಮ ವಯಸ್ಕನಾಗಿ ಮತ್ತು ಸಾಧಕನಾಗಿ ಸಂಕೇಶ್ವರ ಅವರ ಜೀವನದ ಮೂರು ಕಾಲಘಟ್ಟದ ಅನಾವರಣ ಸಿನಿಮಾದಲ್ಲಾಗಿದೆ.
“ವಿಜಯಾನಂದ’ ಒಂದು ಬಯೋಪಿಕ್ ಆದರೂ ಅಲ್ಲಲ್ಲಿ ಮೆಲೋಡಿ ಹಾಡುಗಳು, ಆ್ಯಕ್ಷನ್, ಕಾಮಿಡಿ, ಎಮೋಶನ್ಸ್ ಹೀಗೆ ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಇರಬಹುದಾದ ಎಲ್ಲ ಮನರಂಜನೆಯ ಅಂಶಗಳನ್ನೂ ಸಿನಿಮಾದಲ್ಲಿ ಕಾಣಬಹುದು. ನಮ್ಮ ನಡುವಿನ ಸಾಧನಕನ ಕಥೆಯನ್ನು ಎಲ್ಲೂ ಬೋರ್ ಆಗದಂತೆ ವರ್ಣರಂಜಿತವಾಗಿ ತೆರೆಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಸಿನಿಮಾದ ಮೊದಲರ್ಧ ಚಿತ್ರಕಥೆಗೆ ವೇಗ ಸಿಕ್ಕಿದ್ದರೆ, “ವಿಜಯಾನಂದ’ದ ವೇಗ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದವು.
ಇನ್ನು ಕಲಾವಿದರ ಬಗ್ಗೆ ಹೇಳುವುದಾದರೆ, ನಟ ನಿಹಾಲ್ ಸಿನಿಮಾದಲ್ಲಿ ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವಕನಾಗಿ, ಮಧ್ಯಮ ವಯಸ್ಕನಾಗಿ ಮತ್ತು ಸಾಧಕನಾಗಿ ಮೂರು ವಿಭಿನ್ನ ಗೆಟಪ್‌ನಲ್ಲಿ ಸಂಕೇಶ್ವರ ಪಾತ್ರದಲ್ಲಿ ನಿಹಾಲ್ ಅವರದ್ದು ಗಮನ ಸೆಳೆಯುವ ಅಭಿನಯ.
ಉಳಿದಂತೆ ಅನಂತನಾಗ್, ಸಿರಿ ಪ್ರಹ್ಲಾದ್ ತಮ್ಮ ಪಾತ್ರಗಳಲ್ಲಿ ಇಷ್ಟವಾಗುತ್ತಾರೆ. ಪ್ರತಿ ಪಾತ್ರಗಳಲ್ಲೂ ಪರಿಚಿತ ಕಲಾವಿದರೇ ಕಾಣಿಸಿಕೊಂಡಿದ್ದು, ಬಹುತೇಕರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಗುಣಮಟ್ಟದಲ್ಲಿ ಗಮನ ಸೆಳೆಯುತ್ತದೆ. ಒಂದೆರಡು ಹಾಡುಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಂಕಲನ ಕಾರ್ಯ, ಕಲರಿಂಗ್, ಬೃಹತ್ ಸೆಟ್‌ಗಳು, ಕಾಸ್ಟೂಮ್ಸ್ “ವಿಜಯಾನಂದ’ ಸಿನಿಮಾವನ್ನು ತೆರೆಮೇಲೆ ಕಲರ್‌ಫುಲ್ ಆಗಿ ಕಾಣುವಂತೆ ಮಾಡಿವೆ.
ಜಿ.ಎಸ್.ಕಾರ್ತಿಕ ಸುಧನ್