ವರದಿ: ಕೆ. ನಿಂಗಜ್ಜ
ಗಂಗಾವತಿ: ಪುರಾತನ ನೀರಾವರಿ ಪ್ರದೇಶಗಳಲ್ಲಿ ಒಂದಾಗಿರುವ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ. ಆನೆಗೊಂದಿ ಭಾಗದ ಬೆಟ್ಟ ಪ್ರದೇಶಗಳಲ್ಲಿ ಹೊಂದಿಕೊಂಡಿರುವ ಕಾಲುವೆ ನಿರ್ಮಾಣ ಕಾರ್ಯ ಹೊಸ ವಿನ್ಯಾಸ ಮಾದರಿಯಲ್ಲಿದ್ದು, ಇದರಿಂದ ಮಳೆಗಾಲದಲ್ಲಿ ಕಾಲುವೆ ಒಡೆಯುವ ಸಾಧ್ಯತೆಯಿದೆ. ತಳಮಟ್ಟದಲ್ಲಿ ವಿಸ್ತೀರ್ಣವಾಗಿ ವಿನ್ಯಾಸ ಮಾಡುವಂತೆ ಸ್ಥಳೀಯ ರೈತರು ಒತ್ತಾಯಿಸುತ್ತಿದ್ದಾರೆ.
ತಾಲೂಕಿನ ಕೊರಮ್ಮ ಕ್ಯಾಂಪ್ ಹತ್ತಿರ ಕಳೆದ ವರ್ಷ ನಿರ್ಮಿಸಿದ ವಿಜಯನಗರ ಕಾಲುವೆ ಮಳೆಗಾಲದಲ್ಲಿ ಬೆಟ್ಟದ ನೀರು ನುಗ್ಗಿದ್ದರಿಂದ ಎರಡು ಮೂರು ಕಡೆ ಒಡೆದು ರೈತರ ಭತ್ತದ ಗದ್ದೆಗೆ ನಷ್ಟವಾಗಿತ್ತು. ಸಾಣಾಪುರದಿಂದ ಸಂಗಾಪುರದವರೆಗೆ ಸುಮಾರು 20 ಕಿ.ಮೀ. ಉದ್ದದ ಹಳೆಯ ವಿಜಯನಗರ ಕಾಲುವೆಯನ್ನು ವಿಜಯನಗರ ಸಾಮ್ರಾಜ್ಯದ ಅರಸರು ನಿರ್ಮಿಸಿ ನದಿ ಪಾತ್ರದ ರೈತರಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅನುಕೂಲ ಮಾಡಿಕೊಟ್ಟಿದ್ದರು. ಸುಮಾರು 500ಕ್ಕೂ ಹೆಚ್ಚು ಹಳೆಯದಾದ ವಿಜಯನಗರ ಕಾಲುವೆಗಳ ದುರಸ್ತಿಗೆ 2008-09ರ ರಾಜ್ಯ ಬಜೆಟ್‌ನಲ್ಲಿ 450 ಕೋಟಿ ರೂ.ಗಳ ಯೋಜನೆ ರೂಪಿಸಿ ಏಷಿಯನ್ ಅಭಿವೃದ್ಧಿ ಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ ಕಾಮಗಾರಿ ಆರಂಭಿಸಲಾಗಿದೆ. ಈ ಭಾಗವೂ ವಿಶ್ವಪರಂಪರಾ ಪ್ರದೇಶದಲ್ಲಿ ಬರುವುದರಿಂದ ಸ್ಥಳೀಯರ ಸಹಭಾಗಿತ್ವದಲ್ಲಿ ಸ್ಮಾರಕ ಹಾಗೂ ಸ್ಥಳೀಯ ಉದ್ಯೋಗಗಳಿಗೆ ಧಕ್ಕೆಯಾಗದಂತೆ ಸರಕಾರೇತರ ಸಂಸ್ಥೆಯ ಸಲಹೆ ಸೂಚನೆಯಂತೆ ಕಾಮಗಾರಿ ನಿರ್ವಹಿಸಲಾಗುತ್ತಿದೆ.
ಆನೆಗೊಂದಿ ಸಾಣಾಪುರ ಮಲ್ಲಾಪುರ ಕೋರಮ್ಮ ಕ್ಯಾಂಪ್ ಕಡೆಬಾಗಿಲು ಗ್ರಾಮಗಳ ವ್ಯಾಪ್ತಿಯಲ್ಲಿರುವ ಬೆಟ್ಟ ಪ್ರದೇಶದಲ್ಲಿ ವಿಜಯನಗರ ಕಾಲುವೆ ಹಾಯ್ದು ಹೋಗುವುದರಿಂದ ಕಾಡು ಪ್ರಾಣಿಗಳು ದನಕರುಗಳು ಜೀವಜಂತುಗಳಿಗೆ ನೀರು ಕುಡಿಯಲು ಅನುಕೂಲವಾಗುವಂತೆ ಕಾಲುವೆಯ ಶಾಶ್ವತ ದುರಸ್ತಿ ಕಾಮಗಾರಿಯ ಸಂದರ್ಭದಲ್ಲಿ ವಿನ್ಯಾಸಗೊಳಿಸುವಂತೆ ಸ್ಥಳೀಯರು ಸಲಹೆ ನೀಡಿದ್ದರೂ ಇದನ್ನು ನಿರ್ಲಕ್ಷಿಸಿ ಬಯಲು ಸೀಮೆ ಪ್ರದೇಶದಲ್ಲಿ ವಿನ್ಯಾಸಗೊಳಿಸಿದ ಕಾಲುವೆಯಂತೆ ನಿರ್ಮಿಸಲಾಗುತ್ತಿದೆ. ಇದರಿಂದ ಕಾಲುವೆಗೆ ಗುಡ್ಡದ ನೀರಿನಿಂದ ಅಪಾಯವಿದ್ದು, ಪದೇ ಪದೇ ಒಡೆದುಹೋಗುವ ಸಂಭವ ಹೆಚ್ಚಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.