ಕುಂಬಳೆ: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಿಳಾ ಮಂಡಲ ಸಹಯೋಗದಲ್ಲಿ ಅಖೀಲಭಾರತ ಮಟ್ಟದಲ್ಲಿ ಆಯೋಜಿಸಲಾಗುತ್ತಿರುವ 2017ನೇ ಸಾಲಿನ (ಈ ವೇದಿಕೆಗೆ ಇದೀಗ 22ನೇ ವರ್ಷ)ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿಜಯಲಕ್ಷ್ಮೀ ಕಟ್ಟದಮೂಲೆಯವರ “ದೇಶಭಕ್ತಿ’ ಕತೆಗೆ ಪ್ರಥಮ ಸ್ಥಾನ ದೊರಕಿದೆ. ಇವರಿಗೆ ಒಪ್ಪಣ್ಣನೆರೆಕರೆ ಪ್ರತಿಷ್ಠಾನ ನಡೆಸಿದ ಸ್ಪರ್ಧೆಗಳಲ್ಲೂ ಈ ಹಿಂದೆ ಪ್ರಬಂಧ ಹಾಗೂ ಕತೆಯಲ್ಲಿ ಬಹುಮಾನ ಬಂದಿರುತ್ತದೆ. ಕಥೆ, ಕವನ, ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುತ್ತಿದ್ದು, ಕೆಲವು ಸಾಹಿತ್ಯ ಗೋಷ್ಠಿಗಳಲ್ಲೂ ಆಕಾಶವಾಣಿಯಲ್ಲೂ ಭಾಗವಹಿಸಿರುತ್ತಾರೆ.
ಕಥಾ ಸ್ಪರ್ಧೆಯ ದ್ವಿತೀಯ ಬಹುಮಾನವು ಶಾರದಾ ಕಾಡಮನೆ ಯವರ “ಸೂರ್ಯಕಿರಣ’ ಕತೆ ಗೆದ್ದು ಕೊಂಡಿದೆ. ಇದೇ ವೇದಿಕೆಯಲ್ಲಿ ಈ ಹಿಂದೆ ಕತೆಬರೆದು ಮೆಚ್ಚುಗೆ ಗಳಿಸಿರುವ ಶಾರದಾ ಎರಡು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಕವನವನ್ನು ಸುಶ್ರಾವ್ಯವಾಗಿ ಹಾಡುವ ಇವರು ಮಡಿಕೇರಿ, ಮಂಗಳೂರು ಆಕಾಶವಾಣಿಗಳಲ್ಲೂ, ಬದಿಯಡ್ಕದಲ್ಲಿ ನಡೆದ ವಿಶ್ವತುಳುವರೆ ಆಯನೊದಲ್ಲೂ ಹಾಡಿದ್ದಾರೆ. ಹಾಗೆಯೇ ಯೋಗ ತರಬೇತಿ ಶಿಬಿರವನ್ನೂ ನಡೆಸುತ್ತಿದ್ದಾರೆ.
ತೃತೀಯ ಬಹುಮಾನವು ಅಂಜಲಿ ಹೆಗಡೆಯವರ “ಕಥೆಯಾದವಳು’ ಕತೆಗೆ ದೊರಕಿದೆ. ಮೂಲತಃ ಸಿದ್ದಾಪುರದ ಇವರು ಸಾಫ್ಟ್‌ವೇರ್ ಎಂಜಿನಿಯ ರಾಗಿ ಬೆಂಗಳೂರಲ್ಲಿ ನೆಲೆಸಿದ್ದು, ಇವರು ಛಾಯಾಗ್ರಹಣ ಆಸಕ್ತಿ ಬೆಳೆಸಿ ಕೊಂಡಿದ್ದಾರೆ. ಕಥೆ, ಕವನ, ಲಲಿತ ಪ್ರಬಂಧ ಬರೆಯುವುದಲ್ಲದೆ, ಧಾರಾ ವಾಹಿಗಳ ಚಿತ್ರಕತೆ ಮತ್ತು ಸಂಭಾ ಷಣೆ ಬರೆಯುವುದರಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದಾರೆ.
ಕಥಾ ಸ್ಪರ್ಧೆಗೆ ತೀರ್ಪುಗಾರರಾಗಿ ಪ್ರಾಧ್ಯಾಪಕ ಡಾ| ಮಹಾಲಿಂಗ ಭಟ್, ನಿವೃತ್ತ ಅಧ್ಯಾಪಕ, ಪ್ರಖ್ಯಾತ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಹಾಗೂ ನಿವೃತ್ತ ಕನ್ನಡ ಪ್ರೊಫೇಸರ್, ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನ ಕೇಂದ್ರದ ನಿರ್ದೇಶಕರೂ ಆದ ಡಾ| ಯು. ಮಹೇಶ್ವರಿ ಸಹಕರಿಸಿದ್ದಾರೆ.