Advertisement

ರಾಜಪರಂಪರೆಯ ಅಜಿಲ ಅರಮನೆಯಲ್ಲಿ ವಿಜಯದಶಮಿ

10:37 PM Oct 06, 2019 | Sriram |

ಬೆಳ್ತಂಗಡಿ: ಐತಿಹಾಸಿಕ ಹಿನ್ನೆಲೆ ಗಳಿಂದಲೇ ಪ್ರಸಿದ್ಧಿ ಪಡೆದ ಮೈಸೂರು ದಸರಾ ರೀತಿಯಂತೆ ತಾ|ನ ಅಳದಂಗಡಿ ಅಜಿಲ ಅರಮನೆಯಲ್ಲಿ ಅರಸು ಪರಂಪರೆ ಹಾಗೂ ತುಳುನಾಡಿನ ಸಂಸ್ಕೃತಿ – ಕಟ್ಟುಪಾಡುಗಳನ್ನು ಇಂದಿಗೂ ಅನುಸರಿಸುತ್ತಾ ಬರಲಾಗುತ್ತಿದೆ.

Advertisement

ಅಜಿಲ ಅರಮನೆಯ ಅರಸ ಪರಂ ಪರೆಯ 24ನೇ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರ ಸಮ್ಮುಖ ವಿಜಯ ದಶಮಿಗೆ 3 ದಿನಗಳ ಹಿಂದಿನ ಮೂಲ ನಕ್ಷತ್ರದಂದು ಅರಸರ ಪಲ್ಲಕ್ಕಿ-ಪಟ್ಟದ ಕತ್ತಿಗೆ ಪೂಜೆ, ಹೊಸ ಅಕ್ಕಿ ಊಟ ಸಹಿತ ಎಲ್ಲ ಕ್ರಮಗಳನ್ನು ಪಾಲಿಸುತ್ತಾ ಬರಲಾಗಿದೆ.

ದ.ಕ. ಜಿಲ್ಲೆ 8ನೇ ಶತಮಾನದಿಂದ 14ನೇ ಶತಮಾನದವರೆಗೆ ಅಳುಪರು, ತದನಂತರ ವಿಜಯನಗರ ಮತ್ತು ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಬಂಗಾಡಿಯ ಬಂಗ ರಾಜವಂಶವನ್ನು ಬಿಟ್ಟರೆ ತುಳುನಾಡಿನಲ್ಲಿ ಆಳಿದ ಜೈನ ರಾಜವಂಶಗಳ ಪೈಕಿ ಅಜಿಲ ಅರಸು ಮನೆತನವೇ ಅತ್ಯಂತ ಪ್ರಾಚೀನ ವಾದುದು. ಇವರ ಆಳ್ವಿಕೆ ಕ್ರಿ.ಶ. 1154 ರಲ್ಲಿ ಪ್ರಾರಂಭವಾಗಿತ್ತು. 1763ರಲ್ಲಿ ಹೈದರಾಲಿ ದ.ಕ. ಜಿಲ್ಲೆಯನ್ನು ತನ್ನ ಆಳ್ವಿಕೆಗೆ ಒಳಪಡಿಸುವವರೆಗೆ ಇವರು ಸ್ವತಂತ್ರವಾಗಿ ಆಳಿದ್ದರು ಎಂಬ ಉಲ್ಲೇಖವಿದೆ.

ತಾ|ನಲ್ಲಿ 32 ಗ್ರಾಮಗಳ 12 ಮಾಗಣೆ ವ್ಯಾಪ್ತಿಗೆ ಒಳಪಟ್ಟಂತೆ 4 (ಬರಾಯ, ಅಳದಂಗಡಿ, ವೇಣೂರು, ಕೇಳ) ಅರಮನೆ ಗಳಿವೆ. ಸಂಪ್ರದಾಯ ನೆಲೆಯಲ್ಲಿ ಸಾಂಸ್ಕೃತಿಕ ಉತ್ಸವವನ್ನು ಇಂದಿಗೂ ಕಾಣಬಹುದು.

ಪಟ್ಟದ ಉಯ್ಯಾಲೆ
ಅರಸು ಮನೆಯಲ್ಲಿರುವ ಅರಸರ ಪಟ್ಟದ ಉಯ್ನಾಲೆಯನ್ನು ವಿಜಯದಶಮಿಯಂದು ಇಳಿಸುವುದು ಇಲ್ಲಿನ ಪರಂಪರೆ. ಉಯ್ನಾಲೆಗೆ ಜೈನ ಪುರೋಹಿತರು ಬಸದಿಯ ಪ್ರಸಾದ ಪ್ರೋಕ್ಷಣೆ ಮಾಡುತ್ತಾರೆ. ಬಳಿಕ ಸತ್ತಿಗೆ, ವೀಳ್ಯದೆಲೆ ಪ್ರಸಾದ ನೀಡಿ ದರ್ಬಾರು ನಡೆಸಲಾಗುವುದು. ಇದು ಮೈಸೂರು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಿಗದ ವಿಶೇಷತೆಗಳಲ್ಲೊಂದು.

Advertisement

ವಿಜಯದಶಮಿಯಂದು ಪಟ್ಟದರಸರ ಮೆರವಣಿಗೆ
ವಿಜಯದಶಮಿಯಂದು ಜೈನ ಮಹಿಳೆಯರೆಲ್ಲ ಸೇರಿ ಪಾತ್ರೆಗೆ ಪೂಜೆ ಮಾಡಿ ಹೊಸ ಅಕ್ಕಿ ಅಡುಗೆಗೆ ಚಾಲನೆ ನೀಡುವರು. ಅರಸರ ಪಟ್ಟದ ಉಂಗುರವನ್ನು ನವರಾತ್ರಿಯ 9 ದಿನ ಪದ್ಮಾವತಿ ಅಮ್ಮನವರ ಕೈಯಲ್ಲಿಟ್ಟು ನಿತ್ಯ ಪಂಚಾಮೃತ ಅಭಿಷೇಕ ನೆರವೇರುತ್ತದೆ. ವಿಜಯದಶಮಿಯಂದು ಉಂಗುರವನ್ನು ಪುರೋಹಿತರು ಅರಸರಿಗೆ ತೊಡಿಸುವ ಕ್ರಮ ಇಂದಿಗೂ ಇದೆ. ಬಳಿಕ ಸಿಂಹಾಸನದಲ್ಲಿಟ್ಟ ಖಡ್ಗವನ್ನು ಚಾವಡಿ ನಾಯಕರಿಗೆ ನೀಡಿ, ಸಂಜೆ ಮಾಗಣೆಯ ಆಸ್ರಣ್ಣರು, ಬಲ್ಯಾಯರು, ಗುರಿಕಾರರ ಸಮ್ಮುಖ ಪಾವಂಜೆಗೋಳಿಗೆ ಮೆರವಣಿಗೆ ಯಲ್ಲಿ ತೆರಳಲಾಗುತ್ತದೆ. ಅಲ್ಲಿ ಗದ್ದೆಯಲ್ಲಿ ಮುಕ್ಕಾಲಿ ಪೀಠದಲ್ಲಿ ಇರಿಸಲಾದ ತೆಂಗಿನಕಾಯಿಗೆ ಗುರಿಕಾರರು ಕೋವಿಯಲ್ಲಿ ಗುರಿ ಇರಿಸಿ ನವರಾತ್ರಿಯನ್ನು ಆಚರಿ ಸುತ್ತಾ ಬರಲಾಗಿದೆ. ವಿಜಯದಶಮಿಯಂದು ಇಲ್ಲಿನ ಸೋಮನಾಥೇಶ್ವರಿ ಕ್ಷೇತ್ರದಲ್ಲಿ ರಂಗಪೂಜೆ, ಪಾರ್ಶ್ವನಾಥ ಬಸದಿಯಲ್ಲಿ ದೇವರಿಗೆ ಕ್ಷೀರಾಭಿಷೇಕ ಬಳಿಕ ಅರಮನೆಗೆ ಬಂದು ಅರಸರು ರಾಜ ದರ್ಬಾರನ್ನು ಇಂದಿಗೂ ನಡೆಸುತ್ತಾ ಬರಲಾಗಿದೆ. ಇದಕ್ಕೂ ಮುನ್ನ ಅರಸರ ಪಲ್ಲಕ್ಕಿಗೆ, ಪಟ್ಟದ ಕತ್ತಿ, ಆಯುಧಗಳಿಗೆ ಪೂಜೆ ನೆರವೇರಿಸಿ ರಾಜರಿಗೆ ಮಾಗಣೆಯ 12 ಗುರಿಕಾರರು ಕಾಣಿಕೆಯಾಗಿ ತೆಂಗಿನಕಾಯಿ ನೀಡುವರು. ಅವರಿಗೆ ಅರಸರು ವೀಳ್ಯದೆಲೆ ನೀಡುವ ಕ್ರಮ ಇಂದಿಗೂ ಹೆಸರುವಾಸಿ.

ಸಂಸ್ಕೃತಿ ತುಳುನಾಡಿನ ಶ್ರೀಮಂತ ಪರಂಪರೆಯನ್ನು ಉಳಿಸಿ- ಬೆಳೆಸುವ ನಿಟ್ಟಿನಲ್ಲಿ ಅಜಿಲ ಅರಮನೆಯಲ್ಲಿ ಆಚರಣೆಗಳನ್ನು ನಡೆಸುತ್ತಾ ಬರಲಾಗಿದೆ. ಹಿರಿಯರು ನೀಡಿದ ಸಂಸ್ಕೃತಿ ಭವಿಷ್ಯಕ್ಕೆ ಮಾರ್ಗದರ್ಶನ. ಇದನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.
 - ಡಾ| ಪದ್ಮಪ್ರಸಾದ ಅಜಿಲ
ತಿಮ್ಮಣ್ಣರಸರು

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next