ನಟ ವಿಜಯರಾಘವೇಂದ್ರ ಅವರು “ಮಾಲ್ಗುಡಿ ಡೇಸ್’ ಚಿತ್ರದ ನಂತರ ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅವರು ಇದೇ ಮೊದಲ ಬಾರಿಗೆ ಹಾರರ್ ಜಾನರ್‌ನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ವಿಜಯರಾಘವೇಂದ್ರ ಈಗ ಹೊಸ ಚಿತ್ರ ಒಪ್ಪಿಕೊಂಡಿದ್ದಷ್ಟೇ ಅಲ್ಲ, ಆ ಚಿತ್ರ ಸದ್ದಿಲ್ಲದೆಯೇ ಚಿತ್ರೀಕರಣ ಕೂಡ ಮುಗಿಯುವ ಹಂತ ತಲುಪಿದ್ದು, ಡಬ್ಬಿಂಗ್‌ಗೆ ರೆಡಿಯಾಗುತ್ತಿದೆ.
ಈ ಚಿತ್ರಕ್ಕೆ “3ಬಿಎಚ್‌ಕೆ’ ಎಂಬ ಶೀರ್ಷಿಕೆ ಇಡಲಾಗಿದೆ ಎನ್ನಲಾಗಿದ್ದು, ಅದಿನ್ನೂ ಪಕ್ಕಾ ಆಗುವುದೊಂದೇ ಬಾಕಿ. ಉಳಿದಂತೆ ಚಿತ್ರವನ್ನು ಚೇತನ್ ಹಾಗೂ ರವಿ ಇಬ್ಬರು ಜೊತೆಗೂಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಚೇತನ್ ಗುರುಪ್ರಸಾದ್ ಅಭಿನಯದ “ಕೋಮಾ’ ಸಿನಿಮಾ ನಿರ್ದೇಶಿಸಿದ್ದರು. ಇದು ಅವರ ಎರಡನೇ ನಿರ್ದೇಶನದ ಚಿತ್ರ. ಅಂದಹಾಗೆ, ಇದು ಹಾರರ್ ಕಮ್ ಥ್ರಿಲ್ಲರ್ ಕಥೆ ಹೊಂದಿದ್ದು, ಮೊದಲ ಸಲ ವಿಜಯರಾಘವೇಂದ್ರ ಅವರು ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈವರೆಗೆ ಎಲ್ಲಾ ರೀತಿಯ ಸಿನಿಮಾಗಳಲ್ಲೂ ನಟಿಸಿದ್ದ ವಿಜಯರಾಘವೇಂದ್ರ, ಈ ಜಾನರ್ ಟಚ್ ಮಾಡಿಲ್ಲ ಎಂಬ ಕಾರಣಕ್ಕೆ, ಕಥೆ ಒಪ್ಪಿ ನಟಿಸಿದ್ದಾರೆ. “ಮಾಲ್ಗುಡಿ ಡೇಸ್’ ಸಿನಿಮಾ ಮಾಡಿದ್ದ ವಿಜಯರಾಘವೇಂದ್ರ ಆಲ್ಲಿ ಕಥೆ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ್ದರು. ಆ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಆ ಬಳಿಕ ಸಾಕಷ್ಟು ಕಥೆಗಳು ಹುಡುಕಿ ಬಂದರೂ, ಯಾವ ಕಥೆಯನ್ನೂ ಒಪ್ಪಿರಲಿಲ್ಲ. “3ಬಿಎಚ್‌ಕೆ’ ಕಥೆ ಕೇಳಿದ ಮೇಲೆ, ಹೊಸ ರೀತಿಯಾಗಿರುವ ಕಥೆ ಅಂತ ಒಪ್ಪಿ ಮಾಡಿದ್ದಾರೆ.
ಇದು ಒಂದು ಮನೆಯಲ್ಲಿ ನಡೆಯೋ ಕಥೆಯಾಗಿದ್ದರೂ, ಹಾಲಿವುಡ್ ರೇಂಜ್ ಇರುವ ಹಾರರ್ ಸಿನಿಮಾಗಳಂತೆಯೇ ತಾಂತ್ರಿಕತೆಯ ಸ್ಪರ್ಶದೊಂದಿಗೆ ಸಿನಿಮಾ ಹೊರತರುವ ಯೋಚನೆ ಚಿತ್ರತಂಡದ್ದು. ಹಾರರ್ ಅಂದಾಕ್ಷಣ, ಮಹಿಳೆಯೊಬ್ಬಳು ಬಿಳಿ ಸೀರೆ ಧರಿಸಿ, ಉದ್ದ ಕೂದಲು ಚೆಲ್ಲಾಪಿಲ್ಲಿಯಾಗಿ ಬಿಟ್ಟು, ಗೆಜ್ಜೆ ಸದ್ದು ಮಾಡುತ್ತ ರಾತ್ರಿ ವೇಳೆ ದೆವ್ವ ರೀತಿ ನಡೆದಾಡುವ ದೃಶ್ಯಗಳು ಇಲ್ಲಿಲ್ಲ. ಹಾಗೆಯೇ, ಮಂತ್ರವಾದಿಯಾಗಲಿ, ದೇವರಾಗಲಿ ಇಲ್ಲಿರೋದಿಲ್ಲ.
ಹಾಲಿವುಡ್‌ನಲ್ಲಿ ಮೂಡಿಬರುವ ಹಾರರ್ ಚಿತ್ರಗಳಂತೆಯೇ ಇಲ್ಲೂ ಹೊಸ ತಾಂತ್ರಿಕತೆ ಬಳಸಿ ಮಾಡಲಾಗುತ್ತಿರುವುದರಿಂದ ಚಿತ್ರದ ಮೇಲೆ ಚಿತ್ರತಂಡಕ್ಕೆ ಸಾಕಷ್ಟು ನಂಬಿಕೆ ಇದೆ. ಇನ್ನು, ಚಿತ್ರದಲ್ಲಿ ದಿವ್ಯಾ ಉರುಡುಗ ನಾಯಕಿಯಾದರೆ, ರಂಗಾಯಣ ರಘು ಇತರರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಬೆಂಗಳೂರಿನಲ್ಲೇ ಒಂದು ಮನೆಯೊಳಗೆ ನಡೆಯೋ ಕಥೆ ಇದಾಗಿದ್ದು, ಬಹುತೇಕ ಹೊಸ ತಾಂತ್ರಿಕತೆಯಿಂದ ಸಿನಿಮಾ ಮೂಡಿಬರಲಿದೆ.