Advertisement

ರೈತರ ತಾಳ್ಮೆ ಪರೀಕ್ಷೆ ಮಾಡದಂತೆ ವಿಜಯ ಕುಲಕರ್ಣಿ ಎಚ್ಚರಿಕೆ

03:18 PM May 10, 2022 | Team Udayavani |

ಲಕ್ಷ್ಮೇಶ್ವರ: ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ರೈತರೇ ದೇಶದ ಬೆನ್ನೆಲುಬು ಎಂಬ ಮಂತ್ರ ಹೇಳುವ ಸರಕಾರಗಳು ಗ್ರಾಮೀಣ ಪ್ರದೇಶಗಳ ಜನರು, ರೈತರು ತಮ್ಮ ಮೂಲ ಸೌಲಭ್ಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ತಂದಿಟ್ಟಿವೆ ಎಂದು ಕಳಸಾ ಬಂಡೂರಿ ನಾಲೆ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.

Advertisement

ಸಮೀಪದ ಪು. ಬಡ್ನಿ ಗ್ರಾಮದಲ್ಲಿ ಸೋಮವಾರ ರೈತರು ಸಾರ್ವಜನಿಕರು ಸೇರಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿ, ಪು. ಬಡ್ನಿ ಗ್ರಾಮದಲ್ಲಿ ರಸ್ತೆಗಳಿಲ್ಲ. ಸಾರ್ವಜನಿಕ ಶೌಚಾಲಯಗಳಿಲ್ಲ. ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡವಿಲ್ಲ. ಕಾಯಂ ಗ್ರಾಮ ಲೆಕ್ಕಾಧಿಕಾರಿಗಳಿಲ್ಲ. ಪಶುವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆಯಿಲ್ಲ. ಇದೀಗ ಬಿತ್ತನೆ ಕಾರ್ಯ ಪ್ರಾರಂಭವಾಗುವ ಸಮಯ. ಈ ಭಾಗದ ಸಾವಿರಾರು ಎಕರೆ ರೈತರ ಭೂಮಿಗಳಿಗೆ ತೆರಳಲು ರೈತ ಸಂಪರ್ಕ ರಸ್ತೆಗಳಿಲ್ಲದಿರುವುದು ದುರಾದೃಷ್ಟಕರ ಸಂಗತಿ. ತಾಲೂಕಿನ ಪು. ಬಡ್ನಿ ಗ್ರಾಮದಲ್ಲಿರುವ ಸಮಸ್ಯೆ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿಯವರೆಗೂ ಕಣ್ಣಿಗೆ ಕಾಣದಿರುವುದು ಮತ್ತು ರೈತರು ಹೋರಾಟ ಮಾಡಬೇಕಾಗಿರುವುದು ವಿಪರ್ಯಾಸ ಎಂದರು.

ಪು. ಬಡ್ನಿ ಗ್ರಾಮದಲ್ಲಿ ಇರುವ ಈ ಸಮಸ್ಯೆಗಳನ್ನು ಆದಷ್ಟು ಶೀಘ್ರ ಈಡೇರಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಇಲ್ಲದಿದ್ದಲ್ಲಿ ಕಳಸಾ ಬಂಡೂರಿ ಹೋರಾಟ ಸಮಿತಿಯವರು ಇಲ್ಲಿನ ರೈತರ ಹೋರಾಟಕ್ಕೆ ಸಾಥ್‌ ನೀಡುತ್ತೇವೆ ಎಂದು ಎಚ್ಚರಿಸಿದರು.

ಪು.ಬಡ್ನಿ ಗ್ರಾಮದಲ್ಲಿ ಇಂದಿನಿಂದ ಕೆಲವೆ ಜನರಿಂದ ಪ್ರಾರಂಭವಾಗಿರುವ ಹೋರಾಟವನ್ನು ಅಲಕ್ಷಿಸುವದು ಮುಂದಿನ ಬೃಹತ್‌ ಹೋರಾಟಕ್ಕೆ ನಾಂದಿ ಹಾಡುತ್ತದೆ. ರೈತ ತಾಳ್ಮೆ ಪರೀಕ್ಷಿಸುವಯದು ಬೇಡ ಎಂದು ಎಚ್ಚರಿಸಿದರು.

ರೈತ ಮುಖಂಡ ಶೇಖಣ್ಣ ಕರೆಣ್ಣವರ ಮಾತನಾಡಿ, ಪು. ಬಡ್ನಿ ಗ್ರಾಮವನ್ನು ಕ್ಷೇತ್ರದಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಯಾವುದೇ ಯೋಜನೆಗಳು ಸಹ ಈ ಗ್ರಾಮಕ್ಕೆ ಸರಿಯಾಗಿ ತಲುಪುತ್ತಿಲ್ಲ. ಬೆಳೆ ವಿಮೆ, ಬೆಳೆಹಾನಿ ಪರಿಹಾರ, ಇ-ಸ್ವತ್ತು, ನರೇಗಾ ಕಾಮಗಾರಿ ಸರಿಯಾಗಿ ನಡೆಯುವದಿಲ್ಲ. ಬೀಜ, ಗೊಬ್ಬರ ಸರಿಯಾಗಿ ದೊರೆಯುವುದಿಲ್ಲ. ನೂರಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಪು. ಬಡ್ನಿ ಗ್ರಾಮದಲ್ಲಿ ಯಾವುದೇ ಪರಿಹಾರ ದೊರಕದಿರುವುದರಿಂದ ರೈತರು ಅನಿವಾರ್ಯವಾಗಿ ಹೋರಾಟಕ್ಕಿಳಿದಿದ್ದಾರೆ. ಇದಕ್ಕೆ ಪಕ್ಷಾತೀತ, ಜಾತ್ಯತೀತವಾಗಿ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

Advertisement

ದೇವೇಂದ್ರಪ್ಪ ಕಟ್ಟೆಣ್ಣವರ, ಮಂಜುನಾಥ ಬಸನಕಟ್ಟಿ, ಕರಿಯಪ್ಪ ಚೋಟಗಲ್‌, ಮುತ್ತಣ್ಣ ಚೋಟಗಲ್‌, ಅಶೋಕ ಸೀತಾರಹಳ್ಳಿ, ಪರಮೇಶ ಮಾಸನಕಟ್ಟಿ, ಸಿದ್ರಾಮಗೌಡ ಸಾಲ್ಮನಿ, ಹಾಲಪ್ಪ ಅಗಸಿಬಾಗಿಲ, ನಾಗೇಶ ಹರದಗಟ್ಟಿ, ಹಜರೆಸಾಬ ಚಂಗಾಪುರಿ, ನಜೀರಸಾಬ ನಧಾಪ್‌, ಪ್ರಕಾಶ ತಿರ್ಲಾಪುರ, ಬಸವರಾಜ ಕೊರಕನವರ, ರಮೇಶ ಗಂಗನ್ವವರ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಮಂಗಳವಾರವೂ ಈ ಪ್ರತಿಭಟನೆ ಮುಂದುವರೆಯಲಿದೆ ಎಂದು ಮುಖಂಡರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next