Advertisement

ವಿಜಯಾ ಬ್ಯಾಂಕ್‌ 2ನೇ ತ್ತೈಮಾಸಿಕದಲ್ಲಿ 185 ಕೋಟಿ ರೂಪಾಯಿ ನಿವ್ವಳ ಲಾಭ

07:20 AM Oct 27, 2017 | Team Udayavani |

ಬೆಂಗಳೂರು: ವಿಜಯಾ ಬ್ಯಾಂಕ್‌ ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ತೈಮಾಸಿಕ ಅವಧಿಯಲ್ಲಿ 185.46 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಳ ಕಂಡಿದೆ.

Advertisement

ನಗರದ ಎಂ.ಜಿ.ರಸ್ತೆಯಲ್ಲಿರುವ ವಿಜಯಾ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರೂ ಆದ ಸಿಇಒ ಆರ್‌.ಎ.ಶಂಕರನಾರಾಯಣ, “ಬ್ಯಾಂಕ್‌ ನಿರಂತರವಾಗಿ ಲಾಭದ ವ್ಯವಹಾರವನ್ನು ಮುಂದುವರಿಸಿದ್ದು,2017-18ನೇ ಸಾಲಿನ ಎರಡನೇ ತ್ತೈಮಾಸಿಕದಲ್ಲಿ 185 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಜತೆಗೆ ಚಾಲ್ತಿ ಖಾತೆ- ಉಳಿತಾಯ ಖಾತೆ ಠೇವಣಿ ಮೊತ್ತವು ಶೇ.22.65ರಿಂದ ಶೇ.27.03ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.

ನಿರ್ವಹಣಾ ಲಾಭವು ಶೇ.28.57ರಷ್ಟು ಏರಿಕೆ ಕಂಡಿದ್ದು, 733.96 ಕೋಟಿ ರೂ.ಗಳಿಸಿದೆ. ಒಟ್ಟು ಅನುತ್ಪಾದಕ ಸಾಲ ಮೊತ್ತವು ಶೇ.7.07ರಿಂದ ಶೇ.7.06ರಷ್ಟಕ್ಕೆ ಇಳಿಕೆಯಾಗಿದ್ದರೂ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ಆದರೆ ನಿವ್ವಳ ಅನುತ್ಪಾದಕ ಸಾಲ ಮೊತ್ತವು ಶೇ.5.10ರಿಂದ ಶೇ.4.86ಕ್ಕೆ ಇಳಿಕೆ ಕಂಡಿದೆ ಎಂದರು.

ಸಗಟು ವ್ಯವಹಾರ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆದ್ಯತೆ ಮೇರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ವೇತನದಾರರು, ಪಿಂಚಣಿ ದಾರರು, ಇತರೆ ಸಣ್ಣ ಪುಟ್ಟ ಖಾತೆದಾರರು ಮನವಿ ಸಲ್ಲಿಸಿದರೆ ಶೂನ್ಯ ಠೇವಣಿ ಖಾತೆ ನಿರ್ವಹಣೆಗೆ ಅವಕಾಶ ನೀಡಲಾಗುವುದು. ಜನಧನ್‌ ಯೋಜನೆಯಡಿ ಬ್ಯಾಂಕ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಖಾತೆಗಳಿದ್ದು, ಸುಮಾರು 200 ಕೋಟಿ ರೂ. ಠೇವಣಿಯಿದೆ ಎಂದು ಹೇಳಿದರು. ವಿಜಯಾ ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕರಾದ ಬಿ.ಎಸ್‌ ರಾಮರಾವ್‌, ವೈ.ನಾಗೇಶ್ವರ ರಾವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next