Advertisement

ಬಿಒಬಿ ಜತೆ ವಿಜಯ ಬ್ಯಾಂಕ್‌ ವಿಲೀನ

01:48 AM Apr 02, 2019 | Team Udayavani |

ಮಂಗಳೂರು: ಕರಾವಳಿ ಮೂಲದ ಪ್ರತಿಷ್ಠಿತ ವಿಜಯ ಬ್ಯಾಂಕ್‌, ಮಹಾರಾಷ್ಟ್ರ ಮೂಲದ ದೇನಾ ಬ್ಯಾಂಕ್‌ ಸೋಮವಾರ ಬ್ಯಾಂಕ್‌ ಆಫ್‌ ಬರೋಡಾ ಜತೆಗೆ ಅಧಿಕೃತವಾಗಿ ವಿಲೀನಗೊಳ್ಳುವ ಮೂಲಕ ದೇಶದ ಎರಡನೇ ಅತಿ ದೊಡ್ಡ ಸರಕಾರಿ ಸ್ವಾಮ್ಯದ ಬ್ಯಾಂಕ್‌ ಎಂಬ ಮಾನ್ಯತೆ ಪಡೆದು ಕೊಂಡಿದೆ.

Advertisement

ವಿಜಯ ಬ್ಯಾಂಕ್‌ನ ಮಂಗಳೂರಿನಲ್ಲಿ ಕಾರ್ಯಾಚರಿ ಸುತ್ತಿದ್ದ ಪ್ರಾದೇಶಿಕ ಕಚೇರಿಯಲ್ಲಿ ಸೋಮವಾರ ದೀಪ ಬೆಳಗುವ ಮೂಲಕ ಔಪಚಾರಿಕವಾಗಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆಯಿತು. ಮೂರೂ ಪ್ರತಿಷ್ಠಿತ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹಿಂದಿನ ವಿಜಯ ಬ್ಯಾಂಕ್‌ನ ಮಹಾಪ್ರಬಂಧಕ ಶ್ರೀಧರಮೂರ್ತಿ ಹಾಗೂ ಬ್ಯಾಂಕ್‌ ಆಫ್ ಬರೋಡಾದ ಡಿಜಿಎಂ ಲಲಿತ್‌ ತ್ಯಾಹಿ ಅವರು ಮಾತನಾಡಿ, ಬ್ಯಾಂಕ್‌ ಆಫ್‌ ಬರೋಡಾ ಜತೆಗೆ ವಿಜಯ ಬ್ಯಾಂಕ್‌, ದೇನಾ ಬ್ಯಾಂಕ್‌ ಅಧಿಕೃತವಾಗಿ ವಿಲೀನವಾಗುವ ಮುಖೇನ ಭಾರತದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಆಗಿ ಪರಿವರ್ತನೆಗೊಂಡಿದೆ. ಮಾ. 30ರಂದು ಆರ್‌ಬಿಐ ಅಧಿಸೂಚನೆಯ ಅನ್ವಯ ವಿಜಯ ಬ್ಯಾಂಕ್‌, ದೇನಾ ಬ್ಯಾಂಕ್‌ನ ಎಲ್ಲ ಶಾಖೆಗಳೂ ಬ್ಯಾಂಕ್‌ ಆಫ್ ಬರೋಡಾದ ಶಾಖೆ ಗಳಾಗಿ ಕಾರ್ಯನಿರ್ವಹಿಸಲಿವೆ.

ಈ ಬ್ಯಾಂಕ್‌ಗಳ ಗ್ರಾಹಕರೆಲ್ಲರೂ ಬ್ಯಾಂಕ್‌ ಆಫ್ ಬರೋಡಾದ ಗ್ರಾಹಕ ರಾಗಲಿದ್ದಾರೆ. ಈ ಮೂಲಕ ದೇಶದ ಬ್ಯಾಂಕಿಂಗ್‌ ಕ್ಷೇತ್ರ ದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ ಎಂದರು.

ವಿಜಯ ಬ್ಯಾಂಕ್‌ನ ವಿನೂತನ ಕಾರ್ಯಕ್ರಮಗಳಾದ ತೋಟಗಾರಿಕಾ ಹಣಕಾಸು ನೆರವು, ಸಣ್ಣ ರಸ್ತೆ ಸಾರಿಗೆ ಆಪರೇಟರುಗಳ ಸಾಲದಂತಹ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ವಿವರಿಸಿದರು.

Advertisement

ವಿಲೀನ ರದ್ದಾಗುವುದೇ?
ಕರಾವಳಿ ಭಾಗದಲ್ಲಿ ವಿಜಯ ಬ್ಯಾಂಕ್‌ ವಿಲೀನಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯ ಬ್ಯಾಂಕ್‌ ವಿಲೀನ ಪ್ರಕ್ರಿಯೆಯನ್ನು ರದ್ದು ಮಾಡಿ ಹಿಂದಿನ ವ್ಯವಸ್ಥೆಗೆ ಮರಳುವುದು ಇನ್ನು ಸಾಧ್ಯವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ತ್ಯಾಹಿ ಅವರು ಇದು ಸರಕಾರದ ನಿರ್ಧಾರವಾಗಿರುತ್ತದೆ. ಇದಕ್ಕೆ ನಾವು ಉತ್ತರಿಸಲು ಆಗುವುದಿಲ್ಲ ಎಂದರು. ದೇನಾ ಬ್ಯಾಂಕ್‌ ಮುಖ್ಯಪ್ರಬಂಧಕ ನಾಗರಾಜು, ಎಂ.ಎಸ್‌.ಕುಮಾರ್‌, ವಿಜಯ ಬ್ಯಾಂಕ್‌ನ ರಂಗರಾಜನ್‌ ಉಪಸ್ಥಿತರಿದ್ದರು.

ವಿಜಯ ಬ್ಯಾಂಕ್‌ ಈಗ “ಬ್ಯಾಂಕ್‌ ಆಫ್‌ ಬರೋಡಾ’!
ವಿಜಯ ಬ್ಯಾಂಕ್‌ ವಿಲೀನ ಹಿನ್ನೆಲೆಯಲ್ಲಿ ಬ್ಯಾಂಕಿನ ಫಲಕಗಳೆಲ್ಲ ಕೆಲವೇ ದಿನಗಳಲ್ಲಿ ಹಂತ ಹಂತವಾಗಿ “ಬ್ಯಾಂಕ್‌ ಆಫ್‌ ಬರೋಡಾ’ ಆಗಿ ಪರಿವರ್ತನೆಯಾಗಲಿವೆ. ಪೂರ್ವಭಾವಿಯಾಗಿ ಮಂಗಳೂರಿನ ವಿಜಯ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಫಲಕದ ಕೆಳ ಭಾಗದಲ್ಲಿ “ಈಗ ಬ್ಯಾಂಕ್‌ ಆಫ್‌ ಬರೋಡಾ’ ಎಂಬ ಚಿಕ್ಕ ಪೋಸ್ಟರ್‌ ಅಂಟಿಸಲಾಗಿದೆ. ಜತೆಗೆ ಕಚೇರಿಯ ಒಳಗೆ ಬ್ಯಾಂಕ್‌ ಆಫ್‌ ಬರೋಡಾ ಸ್ಟಿಕ್ಕರ್‌ ಸೇರಿಸಲಾಗಿದೆ. ಈ ಮಧ್ಯೆ ಗ್ರಾಹಕರ ಅನುಕೂಲಕ್ಕಾಗಿ ವಿಜಯ ಬ್ಯಾಂಕ್‌ನ ಹೆಸರು ತಾತ್ಕಾಲಿಕವಾಗಿ ಮುಂದುವರಿಯಲಿದೆ. ಆದರೆ ಆ ಹೆಸರಿನ ಕೆಳಗೆ “ಈಗ ಬ್ಯಾಂಕ್‌ ಆಫ್‌ ಬರೋಡಾ’ ಸ್ಟಿಕ್ಕರ್‌ ಸೇರಿಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next