ಮಹಾನಗರ: ಈ ಹಣಕಾಸು ವರ್ಷಾಂತ್ಯದ ಕೆಲಸ ಮುಗಿಸುವ ತವಕದಲ್ಲಿಯೂ ಅಲ್ಲಿನ ಉದ್ಯೋಗಿಗಳ ಮುಖದಲ್ಲಿ ನೋವಿನ ಛಾಯೆ ಇತ್ತು. ‘ವಿಜಯ ಬ್ಯಾಂಕ್’ ಹೆಸರು ಇನ್ನು ನೆನಪು ಮಾತ್ರವಾಗಿದ್ದರೂ ‘ನಮಗೆ ವಿಜಯ ಬ್ಯಾಂಕ್ ಬೇಕು; ಉಳಿಸಿ ಕೊಡಿ’ ಎಂಬ ಗ್ರಾಹಕರ ಕೊನೆಯ ಒತ್ತಾಸೆ ಕೇಳಿಬಂದಿತು. ‘ಹೆಸರಿನೊಂದಿಗಿನ’ ಆತ್ಮೀಯತೆಯ ಕೊಂಡಿಯೊಂದು ಕಳಚಿಕೊಂಡ ನೋವು ಅವರಲ್ಲಿತ್ತು.
ಮಂಗಳೂರು ಸಹಿತ ದೇಶದೆಲ್ಲೆಡೆ ವಿಜಯ ಬ್ಯಾಂಕ್ ಬ್ರ್ಯಾಂಡ್ ಹೆಸರಿನಡಿ ಶನಿವಾರ ಉದ್ಯೋಗಿಗಳ ಪಾಲಿಗೆ ಕೊನೆಯ ದಿನದ ಕೆಲಸವಾದರೆ, ಅತ್ತ ಗ್ರಾಹಕರಿಗೆ ಕೊನೆ ದಿನದ ಸೇವೆ. ಆದರೆ, ಅತ್ತ ಉದ್ಯೋಗಿಗಳು; ಇತ್ತ ಗ್ರಾಹಕರು ಇಬ್ಬರ ಪಾಲಿಗೂ ಈ ದಿನವು ಭಾವನಾತ್ಮಕವಾಗಿ ರೂಪುಗೊಂಡಿತು.
ಸುಮಾರು ಎಂಟೂವರೆ ದಶಕದ ಬ್ಯಾಂಕಿಂಗ್ ಕೊಂಡಿಯೊಂದು ಕಳಚಿ ಜನಮಾನಸದಿಂದ ದೂರವಾಗುವ ಕ್ಷಣವದು. ಅಷ್ಟೇಅಲ್ಲ; ಇಡೀ ದೇಶದಲ್ಲೇ ಬ್ಯಾಂಕ್‌ಗಳ ತೊಟ್ಟಿಲು ಎಂದು ಕರೆಸಿಕೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗೆ ಇದು ನೋವಿನ ಸಂಗತಿ. ಏಕೆಂದರೆ, ಬ್ಯಾಂಕ್‌ಗಳ ತವರೂರು ಪಟ್ಟಿಯಿಂದ ಪ್ರತಿಷ್ಠಿತ ವಿಜಯ ಬ್ಯಾಂಕ್ ಎಂಬ ಕೊಂಡಿಯೇ ಕಳಚಿ ಹೋಗುತ್ತಿರುವ ದಿನವಿದು.
ಎ. 1ರಿಂದ ಬ್ರ್ಯಾಂಡ್ ಇಮೇಜ್ ಕಣ್ಮರೆ
ಬಂಟ್ಸ್ ಹಾಸ್ಟೆಲ್ ಬಳಿ ಹುಟ್ಟಿ ಒಂದಷ್ಟು ವರ್ಷಗಳ ಕಾಲ ನಗರದಲ್ಲೇ ತನ್ನ ಕೇಂದ್ರ ಕಚೇರಿಯನ್ನು ಹೊಂದಿ, ಆ ಮೂಲಕ ಮಂಗಳೂರು ಮಾತ್ರವಲ್ಲ, ಇಡೀ ಅವಿಭಿಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗೆ ಪ್ರೀತಿಯ, ಅಭಿಮಾನದ ಬ್ಯಾಂಕ್ ಆಗಿತ್ತು. ಆರಂಭದ ದಿನಗಳಲ್ಲಿ ಇದ್ದ ಬ್ಯಾಂಕ್ ಕಟ್ಟಡ ಈಗ ನೆಲಸಮಗೊಂಡಿದ್ದು, ಆ ಜಾಗ ಖಾಲಿಯಿದೆ.
ಬಂಟ್ಸ್ ಹಾಸ್ಟೆಲ್‌ನಿಂದ ಬ್ಯಾಂಕ್ ಜ್ಯೋತಿ ವೃತ್ತಕ್ಕೆ ಸ್ಥಳಾಂತರಗೊಂಡಿದ್ದು, ಈಗ ಮಂಗಳೂರು ಪ್ರಾದೇಶಿಕ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಎ. 1ರಿಂದ ಬ್ಯಾಂಕ್ ಆಫ್ ಬರೋಡಾ ಜತೆಗೆ ವಿಜಯ ಬ್ಯಾಂಕ್ ವಿಲೀನಗೊಳ್ಳುವ ಮೂಲಕ ಅದರ ಬ್ರ್ಯಾಂಡ್ ಇಮೇಜ್ ಕಣ್ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಉದಯವಾಣಿ-ಸುದಿನ’ವು ಶನಿವಾರ ಜ್ಯೋತಿ ವೃತ್ತದ ಬಳಿಯ ವಿಜಯ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ಅಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಮಾತನಾಡಿಸಿತು.
ಮಾ. 30 ವರ್ಷಾಂತ್ಯದ ಕೊನೆಯ ದಿನ. ಆದರೆ ವಿಜಯ ಬ್ಯಾಂಕ್ ನೌಕರ ವೃಂದದ ಪಾಲಿಗೆ ಶನಿವಾರ ವರ್ಷಾಂತ್ಯದ ದಿನದೊಂದಿಗೆ ವಿಜಯ ಬ್ಯಾಂಕ್ ಬ್ರ್ಯಾಂಡ್ ಹೆಸರಿನಡಿ ದುಡಿಯಲೂ ಕೊನೆಯ ದಿನವಾಗಿತ್ತು. ಇಲ್ಲಿ ಸೇವಾನಿರತರಾದ ಬಹುತೇಕರು ಬ್ಯಾಂಕಿನೊಂದಿಗೆ ದಶಕಗಳಿಗೂ ಹೆಚ್ಚು ಕಾಲ ಒಡನಾಟ ಹೊಂದಿದ್ದವರು. ತಮಗೊಂದು ಅಸ್ತಿತ್ವ ಕಲ್ಪಿಸಿದ್ದ ಬ್ಯಾಂಕೇ ಇಂದು ಮತ್ತೊಂದರ ಜತೆ ವಿಲೀನವಾಗುತ್ತಿರುವ ದುಃಖದೊಂದಿಗೆ ವಿದಾಯ ಹೇಳುತ್ತಲೇ ಸಿಬಂದಿ ಕಾರ್ಯ ನಿರತರಾಗಿದ್ದು ಕಂಡು ಬಂದಿತು.
ಹನ್ನೊಂದು ವರ್ಷಗಳಿಂದ ಬ್ಯಾಂಕ್‌ನಲ್ಲಿ ವಿವಿಧ ಸ್ತರದ ಹುದ್ದೆಗಳನ್ನು ಅಲಂಕರಿಸಿದ ನೌಕರರೋರ್ವರು, ‘ವಿಜಯ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಬಗ್ಗೆ ಹೆಮ್ಮೆ ಇತ್ತು. ಬ್ಯಾಂಕ್ ನ ಹೆಸರಿನೊಂದಿಗೆ ನಮಗಿರುವ ನಂಟು ಅನನ್ಯ. ಆದರೀಗ ನಮ್ಮ ಸಂಸ್ಥೆ ವಿಲೀನವಾಗುತ್ತಿರುವುದು ತುಂಬಾ ನೋವಿನ ವಿಷಯ’ ಎಂದರು. ‘ಹೇಳಲು ಏನೂ ಉಳಿದಿಲ್ಲ. ನಮ್ಮ ಹೆಮ್ಮೆಯ ವಿಜಯ ಬ್ಯಾಂಕ್ ನೌಕರರು, ಗ್ರಾಹಕರ ಮನೆಮನದಲ್ಲಿ ಉಳಿಯುತ್ತದೆ’ ಎನ್ನುತ್ತಾರೆ ಬ್ಯಾಂಕಿನ ಸಿಬಂದಿ.
ಪ್ರಯತ್ನ ಫಲಿಸಲಿಲ್ಲ
ವಿಜಯ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡಾ ಜತೆಗೆ ವಿಲೀನಗೊಳಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರ ಹೊರ ಬೀಳುತ್ತಲೇ ಕರಾವಳಿಯಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ವಿಜಯ ಬ್ಯಾಂಕ್ ನ್ನು ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಬ್ಯಾಂಕ್‌ನ ಸಿಬಂದಿ, ನಿವೃತ್ತ ನೌಕರರು, ಬ್ಯಾಂಕ್ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳು ಸತತ ಹೋರಾಟಗಳ ಮೂಲಕ ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಿಲ್ಲ.
ಲಾಂಛನವೂ ಮರೆಯಾಗುತ್ತಿದೆ
ವಿಜಯ ಬ್ಯಾಂಕ್ ಜನರಿಗೆ ಹತ್ತಿರವಾಗಲು ಸೂಟು-ಬೂಟು ಧರಿಸಿ ಜೇಬಿಗೆ ಕೈ ಹಾಕಿ ನಿಂತಿರುವ ವ್ಯಕ್ತಿಯ ಚಿತ್ರ ಹೊಂದಿರುವ ಬ್ಯಾಂಕಿನ ಲಾಂಛನವೂ ಕಾರಣ. ಬ್ಯಾಂಕಿನಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ್ದ ಪುತ್ತೂರು ದರ್ಬೆಯ ಬಿ.ಎ. ಪ್ರಭಾಕರ ರೈ ಅವರು ರಚಿಸಿದ್ದ ಈ ಲೋಗೋವನ್ನು ವಿನಮ್ರತೆ, ಪ್ರಾಮಾಣಿಕತೆ ಮತ್ತು ಸಭ್ಯತೆಯ ಸಂಕೇತವಾಗಿ 52 ವರ್ಷಗಳಿಂದ ಬ್ಯಾಂಕ್ ತನ್ನ ಲಾಂಛನವಾಗಿ ಬಳಸಿಕೊಂಡಿದೆ. ಆದರೆ ಬ್ಯಾಂಕ್ ವಿಲೀನಗೊಂಡಂತೆ ಈ ಲಾಂಛನವೂ ಮರೆಯಾಗಲಿದೆ. 1931ರ ಅ. 23ರಂದು ಬಂಟ್ಸ್‌ಹಾಸ್ಟೆಲ್‌ನ ಸಣ್ಣ ಕೊಠಡಿಯೊಂದರಲ್ಲಿ ಗ್ರಾಹಕರ ಸೇವೆಗೆ ತೆರೆದುಕೊಂಡ ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕ್, ಒಟ್ಟು 2129
ಶಾಖೆಗಳನ್ನು ಹೊಂದಿದೆ. ಕರ್ನಾಟಕದಲ್ಲಿ 583 ಶಾಖೆಗಳಿದ್ದು, ದಕ್ಷಿಣ ಕನ್ನಡದಲ್ಲಿ 79, ಉಡುಪಿ ಜಿಲ್ಲೆಯಲ್ಲಿ 63 ಶಾಖೆಗಳಿವೆ.
ವಿಜಯ ಬ್ಯಾಂಕ್ ಬೇಕು
ಮೂವತ್ತು ವರ್ಷಗಳಿಂದ ವಿಜಯ ಬ್ಯಾಂಕ್‌ನ ಗ್ರಾಹಕರಾಗಿರುವ ಕದ್ರಿ ಲೋಬೋಲೇನ್‌ನ ಅಶೋಕ್ ಅವರು ಮಾತಿಗೆ ಸಿಕ್ಕಿದರು. ‘ನಾನು ಮೂರು ದಶಕಗಳಿಂದಲೂ ವಿಜಯ ಬ್ಯಾಂಕ್‌ನ ಗ್ರಾಹಕ. ಮೊದಲು ಕದ್ರಿ ಶಾಖೆಯಲ್ಲಿ, ಈಗ ಜ್ಯೋತಿಯ ಪ್ರಾದೇಶಿಕ ಕಚೇರಿಯಲ್ಲಿ ವ್ಯವಹಾರ ನಡೆಸುತ್ತಿದ್ದೇನೆ. ವಿಜಯ ಬ್ಯಾಂಕ್ ವಿಲೀನವಾಗುವುದು ನನ್ನಂತ ಸಾವಿರಾರು ಗ್ರಾಹಕರಿಗೆ ಸಹಿಸಲಾಗುತ್ತಿಲ್ಲ. ಏಕೆಂದರೆ, ಇಲ್ಲಿ ಸಿಗುತ್ತಿದ್ದ ಸೇವೆ, ಸುಗಮ ಸಾಲ ವ್ಯವಸ್ಥೆ ಮುಂದೆ ಸಿಗುತ್ತದೆ ಎಂಬ ಖಾತರಿ ಇಲ್ಲ. ನಮಗೆ ವಿಜಯ ಬ್ಯಾಂಕ್ ಬೇಕು. ಉಳಿಸಿಕೊಡಿ’ ಎಂದು ವಿಜಯ ಬ್ಯಾಂಕಿನ ಒಡನಾಟದ ಬಗ್ಗೆ ತಮ್ಮ ಮನದಾಳ ಬಿಚ್ಚಿಟ್ಟರು.
ಹೆಸರು ಅಳಿಯುವ ಹೊತ್ತು
ಇನ್ನೇನು ಎಪ್ರಿಲ್ 1ರಿಂದ ವಿಜಯ ಬ್ಯಾಂಕ್ ವಿಲೀನಗೊಂಡು ಬ್ಯಾಂಕ್ ಆಫ್ ಬರೋಡಾ ಹೆಸರು ಪಡೆದುಕೊಳ್ಳಲಿದೆ. ಬ್ಯಾಂಕಿನ ಮುಖ್ಯ ಕಚೇರಿ, ಶಾಖಾ ಕಚೇರಿಗಳ ಮುಂದೆ ಇದ್ದ ವಿಜಯ ಬ್ಯಾಂಕ್ ಹೆಸರಿನ ಬೋರ್ಡ್ ತೆಗೆದು ಬೇರೆ ಬೋರ್ಡ್‌ನ್ನು ಅಂಟಿಸುವ ಕಾರ್ಯವೂ ಸೋಮವಾರವೇ ನಡೆಯಲಿದೆ ಎನ್ನುತ್ತಾರೆ ನೌಕರರು. ಆ ಮೂಲಕ ಅತ್ತಾವರ ಬಾಲಕೃಷ್ಣ ಶೆಟ್ಟಿ (ಎ. ಬಿ. ಶೆಟ್ಟಿ) ಕಟ್ಟಿದ, ಮೂಲ್ಕಿ ಸುಂದರರಾಮ ಶೆಟ್ಟಿ ಆಧುನೀಕತೆಯ ಸ್ಪಷ್ಟ ನೀಡಿದ ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕ್ ಹೆಸರು ಮರೆಗೆ ಸರಿಯಲಿದೆ. ಸೋಮವಾರದಿಂದ ಬ್ಯಾಂಕ್ ಆಫ್ ಬರೋಡಾದ ಹೆಸರಿನಲ್ಲಿ ವಿಜಯ ಬ್ಯಾಂಕ್ ಕಾರ್ಯಾಚರಿಸಲಿದೆ. ಆದರೆ, ಸೇವಾ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಗ್ಗೆ ಗ್ರಾಹಕರಿಗೆ ಯಾವುದೇ ಭಯ ಬೇಡ ಎಂದು ಬ್ಯಾಂಕಿನ ಪ್ರಮುಖರು ತಿಳಿಸಿದ್ದಾರೆ.
ಕಣ್ಣೀರಾದ ಗ್ರಾಹಕರು
ವಿಜಯಾ ಬ್ಯಾಂಕ್ ಹೆಸರಿನಡಿ ಸೇವೆ ಪಡೆಯುವ ಕೊನೆಯ ದಿನವಾದ ಶನಿವಾರ ಬ್ಯಾಂಕಿನ ಪಣಂಬೂರು ಶಾಖಾ ಕಚೇರಿಯಲ್ಲಿ ಗ್ರಾಹಕರು ಕಣ್ಣೀರಿನ ಮೂಲಕ ವಿದಾಯ ಹೇಳಿದರು. ಹಲವಾರು ದಶಕಗಳಿಂದ ಬ್ಯಾಂಕಿನೊಂದಿಗೆ ಒಡನಾಟ ಹೊಂದಿದ್ದ ಗ್ರಾಹಕರಿಗೆ ಇದು ಭಾವನಾತ್ಮಕ ಕ್ಷಣವಾಗಿತ್ತು. ವಿಜಯ ಬ್ಯಾಂಕ್ ಹೆಸರು ಇನ್ನು ಚಾಲ್ತಿಯಲ್ಲಿಲ್ಲವಾದ್ದರಿಂದ ಕೊನೆಯ ವ್ಯವಹಾರ ನಡೆಸಿದ ಗ್ರಾಹಕರು ಕಣ್ಣೀರು ಸುರಿಸಿದರು. ಅಲ್ಲದೆ, ಕೆಲ ಗ್ರಾಹಕರು ಶನಿವಾರವೇ ತಮ್ಮ ಸಾಲ ಮರುಪಾವತಿ ಮಾಡಿ ನಿಷ್ಠೆ ಮೆರೆದರು ಎನ್ನುತ್ತಾರೆ ಪಣಂಬೂರು ಬ್ರಾಂಚ್‌ನ ಉನ್ನತ ಅಧಿಕಾರಿಯೋರ್ವರು.
ಬೇಸರದ ವಿಚಾರ
ವಿಜಯ ಬ್ಯಾಂಕ್ ಚಾರಿತ್ರಿಕ ಹಿನ್ನೆಲೆಯಲ್ಲಿ ಬೆಳೆದು ಬಂದಿದೆ. ದೊಡ್ಡ ಕೈಗಾರಿಕೆಗಳಿಗೆ ಸಾಲ ನೀಡಿ ಮರುಪಾವತಿಯಾಗದಿರುವಂತಹ ಇತಿಹಾಸ ಇಲ್ಲ. ಕೃಷಿಕರಿಗೆ, ಬಡವರಿಗಾಗಿ ಆರಂಭವಾದ ಬ್ಯಾಂಕ್. ಸಣ್ಣ ಪುಟ್ಟ ಸಾಲ ನೀಡಿಯೇ ಬ್ಯಾಂಕ್ ಬೆಳೆದಿದೆ; ಜನರನ್ನು ಬೆಳೆಸಿದೆ. ಲಾಭದಲ್ಲಿರುವ ಬ್ಯಾಂಕ್‌ನ್ನು ನಷ್ಟದಲ್ಲಿರುವ ಬ್ಯಾಂಕಿನೊಂದಿಗೆ ವಿಲೀನಗೊಳಿಸಿರುವುದು ಬೇಸರದ ವಿಚಾರ. 1977-2015ವರೆಗೆ ಕೆಲಸ ಮಾಡಿದ್ದೆ. ಹೆಚ್ಚೇನು ಹೇಳುವಂತಿಲ್ಲ.
- ಮೂಲ್ಕಿ ಕರುಣಾಕರ ಶೆಟ್ಟಿ,
ಅಧ್ಯಕ್ಷರು, ವಿಜಯಾ ಬ್ಯಾಂಕ್ ವರ್ಕರ್ ಮತ್ತು ಆಫೀಸರ್ಸ್
ಅಧ್ಯಕ್ಷರು, ವಿಜಯಾ ಬ್ಯಾಂಕ್ ವರ್ಕರ್ ಮತ್ತು ಆಫೀಸರ್ಸ್
ಆರ್ಗನೈಝೇಶನ್ ಮತ್ತು ನಿವೃತ್ತ ನೌಕರರು
ಜನರ ಜೀವನಾಡಿ ಬ್ಯಾಂಕ್
ವಿಜಯ ಬ್ಯಾಂಕ್ ಹೆಸರು ಇನ್ನಿಲ್ಲ ಎಂಬುದನ್ನು ಕೇಳುವಾಗಲೇ ನೋವಾಗುತ್ತದೆ. ನಮ್ಮ ಜಿಲ್ಲೆಯ ಜನರ ಜೀವನಾಡಿ ಈ ಬ್ಯಾಂಕ್. ಕೋಟ್ಯಾಂತರ ಜನರಿಗೆ ಆರ್ಥಿಕ ಭರವಸೆ ನೀಡಿದ ಈ ಬ್ಯಾಂಕ್‌ನ್ನು ವಿಲೀನ ಮಾಡುವುದು ಅವಶ್ಯವಿರಲಿಲ್ಲ.
– ಪದ್ಮನಾಭ,
ಬ್ಯಾಂಕ್ ಗ್ರಾಹಕ