Advertisement

Kannada Cinema; ‘ಸ್ವಪ್ನ ಮಂಟಪ’ದಲ್ಲಿ ವಿಜಯ ರಾಘವೇಂದ್ರ-ರಂಜನಿ; ಬರಗೂರು ನಿರ್ದೇಶನ

03:38 PM May 17, 2024 | Team Udayavani |

ವಿಜಯ ರಾಘವೇಂದ್ರ ಸದ್ದಿಲ್ಲದೇ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು, ಚಿತ್ರೀಕರಣ ಕೂಡಾ ಮುಗಿಸಿರುತ್ತಾರೆ. ಆ ಸಿನಿಮಾಗಳು ಶೂಟಿಂಗ್‌ ಮುಗಿಸಿದ ನಂತರವಷ್ಟೇ ಆ ಸಿನಿಮಾದ ಬಗ್ಗೆ ಗೊತ್ತಾಗುತ್ತದೆ. ಇದೇ ರೀತಿ ಈಗ ವಿಜಯ ರಾಘವೇಂದ್ರ “ಸ್ವಪ್ನ ಮಂಟಪ’ ಎಂಬ ಸಿನಿಮಾದ ಶೂಟಿಂಗ್‌ ಮುಗಿಸಿದ್ದಾರೆ.

Advertisement

ಬರಗೂರು ರಾಮಚಂದ್ರಪ್ಪ ಅವರು ಈ ಸಿನಿಮಾದ ನಿರ್ದೇಶಕರು. ಈ ಚಿತ್ರವು ಬರಗೂರು ರಾಮಚಂದ್ರಪ್ಪ ನವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಮೈಸೂರಿನ ಬಾಬುನಾಯ್ಕ್ ಅವರು ಈ ಸಿನಿಮಾದ ನಿರ್ಮಾಪಕರು.

“ಸ್ವಪ್ನ ಮಂಟಪ’ ಚಿತ್ರವು ಈಗಾಗಲೇ ಚಿತ್ರೀ ಕರಣ ಮತ್ತು ಡಬ್ಬಿಂಗ್‌ ಕೆಲಸಗಳನ್ನು ಮುಗಿಸಿದೆ. ಕನಕಪುರ ರಸ್ತೆಯ ಒಂದು ಹಳ್ಳಿಯಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಹೊಸಮನೆ ಮೂರ್ತಿಯವರು ಈ ಸೆಟ್‌ ನಿರ್ಮಾಣ ಮಾಡಿದ್ದಾರೆ. “ಸ್ವಪ್ನ ಮಂಟಪ’ ಚಿತ್ರವು ಪಾರಂಪರಿಕ ಸ್ಥಳಗಳ ರಕ್ಷಣೆಯನ್ನು ಪ್ರತಿಪಾದಿಸುವ ಕಥಾವಸ್ತುವನ್ನು ಒಳಗೊಂಡಿದೆ.

ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ಸ್ವಪ್ನಮಂಟಪವನ್ನು ಕೆಡವಿ ಹಾಕುವ ಪ್ರಯತ್ನವನ್ನು ಕೆಲವರು ಮಾಡಿದಾಗ, ಕಥಾನಾಯಕ ಮತ್ತು ನಾಯಕಿ ಜನರನ್ನು ಸಂಘಟಿಸಿ ಸ್ವಪ್ನಮಂಟಪವನ್ನು ಉಳಿಸಿ ಸರ್ಕಾರದ ಅಧಿಕೃತ ಸ್ಮಾರಕದ ಪಟ್ಟಿಗೆ ಸೇರಿಸುವ ಮೂಲಕ ಚಾರಿತ್ರಿಕ ಸ್ಮಾರಕಗಳ ಪರಂಪರೆಯನ್ನು ಎತ್ತಿ ಹಿಡಿಯುತ್ತಾರೆ. ಈ ಸಾಮಾಜಿಕ ಚಿತ್ರದಲ್ಲಿ ಸ್ವಪ್ನ ಮಂಟಪವನ್ನು ನಿರ್ಮಾಣ ಮಾಡಿದ ರಾಜ-ರಾಣಿ ಯರ ಕಥನವನ್ನೂ ಹಿನ್ನೋಟದಲ್ಲಿ ಸೇರಿಸಲಾಗಿದೆ.

ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ರಂಜಿನಿ ರಾಘವನ್‌ ಅಭಿನಯಿಸಿದ್ದಾರೆ. ಇವರಿಬ್ಬರೂ ದ್ವಿಪಾತ್ರಗಳಲ್ಲಿ ಅಭಿನಯಿಸಿರುವುದು ಸಿನಿಮಾದ ಒಂದು ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next