Advertisement

ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್‌ ನಟನೆಯ ‘ಓ ಮನಸೇ’

05:01 PM Dec 31, 2022 | Team Udayavani |

ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್‌, ಸಂಚಿತಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಓ ಮನಸೇ..’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ “ಓ ಮನಸೇ..’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಸಿನಿಮಾದ ಟೀಸರ್‌ ಬಿಡುಗಡೆ ಮಾಡಿದೆ.

Advertisement

ಇನ್ನು “ಓ ಮನಸೇ’ ಸಿನಿಮಾದಲ್ಲಿ ನಟ ವಿಜಯ ರಾಘವೇಂದ್ರ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಕ್ರೈಂ ಒಂದರ ತನಿಖೆಯ ಜಾಡು ಹಿಡಿದು ಹೊರಡುವ ಪೊಲೀಸ್‌ ಅಧಿಕಾರಿ ಆ ಪ್ರಕರಣಕ್ಕೆ ಹೇಗೆ ತಾರ್ಕಿಕ ಅಂತ್ಯ ನೀಡಲು ಏನೆಲ್ಲ ಮಾಡುತ್ತಾನೆ. ಇದರ ನಡುವೆ ತನ್ನ ಜೀವನಕ್ಕೆ ಬರುವ ಹೊಸ ವ್ಯಕ್ತಿಯೊಬ್ಬರಿಂದ ಏನೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದು ಈ ಪಾತ್ರ. ತುಂಬಾ ದಿನಗಳ ನಂತರ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ನನ್ನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂಬುದು ನಟ ವಿಜಯ ರಾಘವೇಂದ್ರ ಅವರ ವಿಶ್ವಾಸದ ಮಾತು.

ಮತ್ತೂಬ್ಬ ನಟ ಧರ್ಮ ಕೀರ್ತಿರಾಜ್‌ ಅವರಿಗೆ ಚಿತ್ರದಲ್ಲಿ ಕಾಲೇಜ್‌ ಹುಡುಗನ ಪಾತ್ರವಂತೆ. “ಕಾಲೇಜ್‌ ಹುಡುಗನೊಬ್ಬನಿಗೆ ಹುಡುಗಿಯೊಬ್ಬಳ ಮೇಲೆ ಲವ್‌ ಆಗುತ್ತದೆ. ಅವರಿಬ್ಬರ ನಡುವಿನ ಘಟನೆಯೊಂದು ಇಬ್ಬರ ಜೀವನದಲ್ಲೂ ಬೇರೆಯ ಪರಿಣಾಮವನ್ನು ಬೀರುತ್ತದೆ. ಲವ್‌ ಸ್ಟೋರಿ ಜೊತೆಗೆ ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ಸಿನಿಮಾದ ಕಥೆ ಹೇಳಲಾಗಿದೆ’ ಎಂಬುದು ಚಿತ್ರದ ಬಗ್ಗೆ ಧರ್ಮ ಕೀರ್ತಿರಾಜ್‌ ವಿವರಣೆ.

“ಈ ಸಿನಿಮಾದಲ್ಲಿ ನನ್ನದು ಕಾಲೇಜ್‌ ಹುಡುಗಿಯ ಪಾತ್ರ. ಕೆಲವೊಂದು ಅನಿರೀಕ್ಷಿತ ಘಟನೆಗಳು ಆಕೆಯ ಬದುಕಿನಲ್ಲಿ ಹೇಗೆಲ್ಲ ಬದಲಾವಣೆಗೆ ಕಾರಣವಾಗುತ್ತದೆ ಎಂಬುದು ನನ್ನ ಪಾತ್ರ. ತುಂಬ ಒಳ್ಳೆಯ ಕಂಟೆಂಟ್‌ ಇರುವಂಥ, ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಇದಾಗುತ್ತದೆ’ ಎಂಬುದು ನಾಯಕಿ ಸಂಚಿತಾ ಪಡುಕೋಣೆ ಮಾತು.

ಡಿ. ಜಿ ಉಮೇಶ್‌ ಗೌಡ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ “ಓ ಮನಸೇ’ ಚಿತ್ರಕ್ಕೆ ಎಂ.ಆರ್‌ ಸೀನು ಛಾಯಾಗ್ರಹಣ, ಶ್ರೀನಿವಾಸ್‌ ಪಿ. ಬಾಬು ಸಂಕಲನವಿದೆ. ಚಿತ್ರದ ಹಾಡುಗಳಿಗೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜನೆಯಿದ್ದು, ನಾಗೇಂದ್ರ ಪ್ರಸಾದ್‌, ಕವಿರಾಜ್‌ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

Advertisement

“ಶ್ರೀ ಫ್ರೆಂಡ್ಸ್‌ ಮೂವೀ ಮೇಕರ್’ ಬ್ಯಾನರ್‌ನಲ್ಲಿ ಎಂ. ಎನ್‌ ಬೈರೇಗೌಡ, ಧನಂಜಯ್‌ ಕೆ. ಹೆಚ್‌, ಕೆ. ವೆಂಕಟೇಶ್‌, ಯುವರಾಜು ಕೆ. ಎ, ಸು. ಕಾ ರಾಮು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಲವ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯ “ಓ ಮನಸೇ’ ಸಿನಿಮಾವನ್ನು ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರ, ಬೆಂಗಳೂರು ಮತ್ತು ಥೈಲ್ಯಾಂಡ್‌ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಅಂದಹಾಗೆ, ಸದ್ಯ “ಓ ಮನಸೇ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಫೆಬ್ರವರಿ ವೇಳೆಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next