ನಟ ವಿಜಯ ರಾಘವೇಂದ್ರ ಈಗ ಮತ್ತೂಮ್ಮೆ ಖಾಕಿ ತೊಟ್ಟು ಖಡಕ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ವಿಜಯ ರಾಘವೇಂದ್ರ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಹೊಸ ಸಿನಿಮಾ “ಮರೀಚಿ’ ಬಿಡುಗಡೆಗೆ ರೆಡಿಯಾಗಿದ್ದು, ಡಿಸೆಂಬರ್ 8ರಂದು ತೆರೆಕಾಣುತ್ತಿದೆ. ಮಿಸ್ಟರಿ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರದ ಔಟ್ ಆ್ಯಂಡ್ ಔಟ್ ಹೈಬ್ರಿಡ್ ಜಾನರ್‌ನ “ಮರೀಚಿ’ ಮೇಲೆ ಚಿತ್ರತಂಡಕ್ಕೆ ನಿರೀಕ್ಷೆ ಇದೆ.
“ಮರೀಚಿ’ ಸಿನಿಮಾವನ್ನು ತೆರೆಗೆ ತರುತ್ತಿರುವವರು ನಿರ್ದೇಶಕ ಸಿದ್ದ್ರುವ್. ಮೂಲತಃ ಇಂಜಿನಿಯರ್ ಆಗಿರುವ ಸುಮಾರು 12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ, ಒಂದಷ್ಟು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಜೊತೆಗೆ ಒಂದಷ್ಟು ಶಾರ್ಟ್ ಫಿಲಂ ಮಾಡಿದ ಅನುಭವವಿರುವ ಸಿದ್ದ್ರುವ್ “ಮರೀಚಿ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್‌ಹೇಳುತ್ತಿದ್ದಾರೆ.
ತಮ್ಮ ಕನಸಿನ “ಮರೀಚಿ’ಯ ಬಗ್ಗೆ ಮಾತನಾಡುವ ನಿರ್ದೇಶಕ ಸಿದ್ದ್ರುವ್, “ಇದೊಂದು ಚೇಸ್ ಸಿನಿಮಾ. ಸರಣಿ ಕೊಲೆಗಳನ್ನು ಮಾಡುತ್ತಿರುವ ಸೈಕೋ ಕಿಲ್ಲರ್ ಒಬ್ಬನ ಬೆನ್ನತ್ತುವ ಪೊಲೀಸ್ ಅಧಿಕಾರಿಯ ಚೇಸ್ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಯಾಕೆ ಈ ಸರಣಿ ಕೊಲೆ ನಡೆಯುತ್ತದೆ. ಅದರ ಹಿಂದಿನ ಉದ್ದೇಶವೇನು? ಅಂತಿಮವಾಗಿ “ಮರೀಚಿ’ ಅಂದ್ರೆ ಯಾರು? ಎಂಬುದೇ ಸಿನಿಮಾದ ಕಥೆ. ಈ ಚೇಸಿಂಗ್ ಸ್ಟೋರಿ ಹೇಗೆಲ್ಲ ಸಾಗುತ್ತದೆ ಎಂಬುದನ್ನು ಥಿಯೇಟರ್‌ನಲ್ಲೇ ನೋಡಬೇಕು. ಈ ಸಿನಿಮಾದಲ್ಲಿ ಸಸ್ಪೆನ್ಸ್-ಥ್ರಿಲ್ಲರ್, ಲವ್ ಎಲ್ಲವೂ ಇದೆ’ ಎನ್ನುತ್ತಾರೆ.
“ಮರೀಚಿ’ ಸಿನಿಮಾದಲ್ಲಿ ನಾಯಕ ವಿಜಯ ರಾಘವೇಂದ್ರ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸೈಕೋ ಕಿಲ್ಲರ್ ಬೆನ್ನತ್ತುವ ವಿಜಯ ರಾಘವೇಂದ್ರ ಆತನನ್ನು ಹೇಗೆ ಟ್ರ್ಯಾಪ್ ಮಾಡುತ್ತಾರೆ ಎಂಬುದೇ ಅವರ ಪಾತ್ರ. “ಇದೊಂದು ಅಪರೂಪದ ಕ್ರೈಂ-ಥ್ರಿಲ್ಲರ್ ಸಿನಿಮಾ. ತುಂಬ ವಿರಳ ಕಥೆಯನ್ನು ನಿರ್ದೇಶಕರು ತುಂಬ ಬುದ್ಧಿವಂತಿಕೆಯಿಂದ, ಅದ್ಭುತವಾಗಿ ಸ್ಕ್ರೀನ್ ಮೇಲೆ ಪ್ರಸೆಂಟ್ ಮಾಡಿದ್ದಾರೆ. ಕಥೆಗೆ ತಕ್ಕಂತೆ ಮೇಕಿಂಗ್ ಸಿನಿಮಾದಲ್ಲಿದೆ. “ಮರೀಚಿ’ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವಂಥ ಸಿನಿಮಾ. ಸಿನಿಮಾದಲ್ಲಿ ಪ್ರತಿ ದೃಶ್ಯಗಳಲ್ಲೂ ಬರುವ ಟ್ವಿಸ್ಟ್ ಆ್ಯಂಡ್ ಟರ್ನ್ಸ್ ಆಡಿಯನ್ಸ್‌ಗೆ ಥ್ರಿಲ್ಲಿಂಗ್ ಅನುಭವ ಕೊಡೋದು ಗ್ಯಾರೆಂಟಿ. ಸಿನಿಮಾದ ಮೇಲೆ ನನ್ನ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ’ ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ ವಿಜಯ ರಾಘವೇಂದ್ರ.