ನವದೆಹಲಿ:2017ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿ ತಲೆಮರೆಯಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂಕೋರ್ಟ್ ಸೋಮವಾರ (ಜುಲೈ 11) ನಾಲ್ಕು ತಿಂಗಳ ಜೈಲುಶಿಕ್ಷೆ ಹಾಗೂ ಎರಡು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ:ಜನಸಂಖ್ಯೆ: ಇನ್ನೊಂದೇ ವರ್ಷದಲ್ಲಿ ಚೀನಾವನ್ನು ಮೀರಿಸಲಿದೆ ಭಾರತ!
2017ರಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ತನ್ನ ಮಗನಿಗೆ 40 ಮಿಲಿಯನ್ ಡಾಲರ್ ಹಣವನ್ನು ವರ್ಗಾವಣೆ ಮಾಡಿರುವ ಪ್ರಕರಣದಲ್ಲಿ ವಿಜಯ್ ಮಲ್ಯ ದೋಷಿಯಾಗಿದ್ದಾರೆ. ನಾಲ್ಕು ಕೋಟಿ ರೂಪಾಯಿ (40 ಮಿಲಿಯನ್ ಡಾಲರ್) ಹಣವನ್ನು ನಾಲ್ಕು ವಾರಗಳಲ್ಲಿ ಸುಪ್ರೀಂಕೋರ್ಟ್ ನ ಕಾನೂನು ಸೇವಾ ಪ್ರಾಧಿಕಾರದಲ್ಲಿ ಠೇವಣಿ ಇಡಬೇಕು. ಒಂದು ವೇಳೆ ಹಣ ಠೇವಣಿ ಇಡಲು ವಿಫಲರಾದರೆ ಇನ್ನೂ ಎರಡು ತಿಂಗಳ ಕಾಲ ಹೆಚ್ಚುವರಿ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಮಲ್ಯಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಒಂದು ವೇಳೆ ಮಲ್ಯ ಹಣವನ್ನು ಠೇವಣಿ ಇಡದಿದ್ದರೆ, ಹಣ ವಸೂಲಿ ಮಾಡಲು ರಿಕವರಿ ಅಧಿಕಾರಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಹಣ ವಸೂಲಿ ಮಾಡಿಕೊಳ್ಳುವ ಪ್ರಕ್ರಿಯೆ ಬಗ್ಗೆ ಭಾರತ ಸರ್ಕಾರ ಮತ್ತು ಎಲ್ಲಾ ಏಜೆನ್ಸಿಗಳು ನೆರವು ನೀಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ನ ಜಸ್ಟೀಸ್ ಯು.ಯು ಲಲಿತ್, ಜಸ್ಟೀಸ್ ಎಸ್ ರವೀಂದ್ರ ಭಟ್ ಮತ್ತು ಜಸ್ಟಿಸ್ ಪಿಎಸ್ ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ.