ಹೊಸದಿಲ್ಲಿ: ಸಾವಿರಾರು ಕೋಟಿ ಬ್ಯಾಂಕ್ ಸಾಲ ಬಾಕಿ ಇರಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರವೊಂದನ್ನು ಬಹಿರಂಗ ಪಡಿಸಿದ್ದು,ನನ್ನ ಪತ್ರಕ್ಕೆ ಪ್ರಧಾನಿ ಸ್ಪಂದನೆಯೇ ನೀಡಿರಲಿಲ್ಲ ಎಂದು ಬಾಂಬ್ ಸಿಡಿಸಿದ್ದಾರೆ.
ಲಂಡನ್‌ನಲ್ಲಿ ಹೇಳಿಕೆ ನೀಡಿರುವ ಮಲ್ಯ ನಾನು 2016 ರಲ್ಲಿ ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವರಿಬ್ಬರಿಗೂ ಪತ್ರ ಬರೆದಿದ್ದೆ. ಆದರೆ ಇಬ್ಬರಿಂದಲೂ ಪ್ರತಿಕ್ರಿಯೆಗಳು ಬರಲಿಲ್ಲ. ಸರಿಯಾದ ದೃಷ್ಟಿಕೋನದಲ್ಲಿ ವಿಷಯ ತಿಳಿಯಲು ಈ ಪತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತಿದ್ದೇನೆ’ ಎಂದಿದ್ದಾರೆ.
‘ನಾನು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ತೀರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ರಾಜಕೀಯ ಪ್ರೇರೇಪಿತ ಬಾಹ್ಯ ಅಂಶಗಳು ಮಧ್ಯಪ್ರವೇಶಿಸಿದರೆ ನಾನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಪತ್ರದಲ್ಲಿ ಬರೆದಿದ್ದಾರೆ.
ಮಾತ್ರವಲ್ಲದೆ ಪತ್ರದಲ್ಲಿ ನನ್ನನ್ನು ಬ್ಯಾಂಕ್ ಹಗರಣಗಳ ಪೋಸ್ಟರ್ ಬಾಯ್ ಮಾಡಲಾಗಿದೆ ಎಂದು ಮಲ್ಯ ನೋವು ತೋಡಿಕೊಂಡಿದ್ದರು.
9,000 ಕೋಟಿಗೂ ಹೆಚ್ಚು ಮೌಲ್ಯದ ಸಾಲ ಬಾಕಿ ಇರಿಸಿ 2016 ರಲ್ಲಿ ಲಂಡನ್‌ಗೆ ಪರಾರಿಯಾಗಿದ್ದ ಮಲ್ಯ ಅವರನ್ನು ವಾರಂಟ್ ಮೇಲೆ ಬಂಧಿಸಿ ಕೂಡಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದುವರೆಗೆ ಭಾರತಕ್ಕೆ ಕಾಲಿಡದೆ ಸರ್ಕಾರಕ್ಕೂ ಸವಾಲಾಗಿ ಪರಿಣಮಿಸಿದ್ದಾರೆ.