ಲಂಡನ್/ನವದೆಹಲಿ: ತಾವು ಮಾಡಿರುವ ಸಾವಿರಾರು ಕೋಟಿ ರೂ. ಸಾಲದ ಬಗ್ಗೆ ಬಹು ದಿನಗಳಿಂದ ತುಟಿ ಪಿಟಿಕ್ ಎನ್ನದೇ ವಿದೇಶದಲ್ಲಿ ಆರಾಮವಾಗಿದ್ದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಈಗ ಬಿಸಿ ತಟ್ಟತೊಡಗಿದೆ. ಅವರನ್ನು “ಘೋಷಿತ ಆರ್ಥಿಕ ಅಪರಾಧಿ’ ಎಂದು ಘೋಷಿಸುವಂತೆ ಹಾಗೂ ಅವರ ಆಸ್ತಿ ಮುಟ್ಟುಗೋಲಿಗೆ ಅವಕಾಶ ಕಲ್ಪಿಸುವಂತೆ ಕೋರಿ ತನಿಖಾ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಭಯಭೀತರಾಗಿರುವ ಮಲ್ಯ, ಸಾಲ ತೀರಿಸುವುದಾಗಿ ವಾಗ್ಧಾನ ಮಾಡಿದ್ದಾರೆ.
ಮಂಗಳವಾರ ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು, “ಈ ಹಿಂದೆಯೇ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲದ ಮೊತ್ತವನ್ನು ಹಿಂದಿರುಗಿಸುವುದಾಗಿ ಪ್ರಧಾನಿ ಮೋದಿ ಹಾಗೂ ಸಚಿವ ಜೇಟ್ಲಿಗೆ ಪತ್ರ ಬರೆದಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಆದರೆ, ಬ್ಯಾಂಕ್ ಸುಸ್ತಿದಾರನಾದ ನನ್ನನ್ನು ತಲೆಮರೆಸಿಕೊಂಡಿರುವ ವ್ಯಕ್ತಿ ಎಂಬರ್ಥದಲ್ಲಿ “ಪೋಸ್ಟರ್ ಬಾಯ್’ ರೀತಿ ನೋಡಲಾಗುತ್ತಿದೆೆ” ಎಂದು ಹೇಳಿದ್ದಾರೆ.
“”ಸಾಲ ಮರುಪಾವತಿಸಲು ಸಾಧ್ಯವಾಗದೇ ಇದ್ದಾಗ ಇಡೀ ಪ್ರಕರಣ ವಿವಾದದ ಸ್ವರೂಪ ಪಡೆದುಕೊಳ್ಳುವಂತೆ ನೋಡಿಕೊಳ್ಳಲಾಯಿತು. ಈ ಬಗ್ಗೆ ವಾಸ್ತವ ಏನು ಎನ್ನುವುದರ ವಿವರವನ್ನು 2016, ಏ.15ರಂದು ಬರೆದ ಪತ್ರದಲ್ಲಿ ತಿಳಿಸಿದ್ದೆ. ಸಾಲದ ಮರುಪಾವತಿಯ ಭರವಸೆಯನ್ನೂ ನೀಡಿದ್ದೆ. ಆದರೆ, ಯಾರಿಂದಲೂ ಪ್ರತಿಕ್ರಿಯೆ ಬರಲಿಲ್ಲ” ಎಂದಿದ್ದಾರೆ.
ಸುಮಾರು 9,000 ಕೋಟಿ ರೂ. ಸಾಲ ಪ್ರಕರಣ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ವಿಜಯ ಮಲ್ಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿವೆ. ಅಲ್ಲದೆ, ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆಯೂ ಈಗಾಗಲೇ ಕ್ರಮಕ್ಕೆ ಮುಂದಾಗಿದೆ. ಜತೆಗೆ, ಅವರ ಹಸ್ತಾಂತರ ಪ್ರಕ್ರಿಯೆಯ ವಿಚಾರಣೆ ಯುಕೆ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಜು.31ರೊಳಗೆ ತೀರ್ಪು ಬರುವ ಸಾಧ್ಯತೆಯೂ ಇದೆ.
ವಿಜಯ ಮಲ್ಯ ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಲು ಬಯಸಿದ್ದರೆ, ಅದಕ್ಕೆ ಬಹಳಷ್ಟು ವರ್ಷಗಳ ಅವಕಾಶವಿತ್ತು.
ಎಂ.ಜೆ.ಅಕ್ಬರ್,
ವಿದೇಶಾಂಗ ಇಲಾಖೆ ಸಹಾಯಕ ಸಚಿವ