ದೇಶದ ವಿವಿಧ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ರೂಪಾಯಿ ಸಾಲ ಮಾಡಿ ಸುಸ್ತಿದಾರನಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಲಂಡನ್ ನಲ್ಲಿ ಮಂಗಳವಾರ ಬಂಧನಕ್ಕೀಡಾಗಿ 3 ಗಂಟೆಯಲ್ಲೇ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ 6, 50, 000 ಪೌಂಡ್(5, 32, 79, 154 ರೂಪಾಯಿ ) ಠೇವಣಿ ಜೊತೆಗೆ ಷರತ್ತುಬದ್ಧ ಜಾಮೀನ ಮೇಲೆ ಬಿಡುಗಡೆ ಮಾಡಿದೆ. ಮೇ 17ಕ್ಕೆ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆ ನಡೆಯಲಿದೆ. ವಿಜಯ್ ಮಲ್ಯ 2016ರಂದು ಭಾರತದಿಂದ ಪರಾರಿಯಾಗಿ ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದ ಪ್ರಕರಣ ಆರೋಪ, ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿತ್ತು. ಮಲ್ಯ ಬಂಧನಕ್ಕಾಗಿ ವಿಪಕ್ಷಗಳು, ಬ್ಯಾಂಕ್ ಗಳು ಒತ್ತಡ ಹೇರಿದ್ದವು. ಬಳಿಕ ಕೇಂದ್ರ ಸರ್ಕಾರ ವಿಜಯ್ ಮಲ್ಯ ಗಡಿಪಾರು ಮಾಡುವಂತೆ ಬ್ರಿಟನ್ ಗೆ ಮನವಿ ಮಾಡಿಕೊಂಡಿದ್ದಲ್ಲದೇ ತೀವ್ರ ಒತ್ತಡ ಹಾಕಿತ್ತು. ಮಲ್ಯ ಬಂಧನಕ್ಕಾಗಿ ನವದೆಹಲಿಯ ನೆಹರು ಭವನ ಹಾಗೂ ಬ್ರಿಟನ್ ನಲ್ಲಿ ಉಭಯ ದೇಶಗಳ ಅಧಿಕಾರಿಗಳ ನಡುವೆ ರಹಸ್ಯ ಮಾತುಕತೆ ಕೂಡಾ ನಡೆದಿತ್ತು ಎಂದು ಖಾಸಗಿ ವಾಹಿನಿ ವರದಿ ಮಾಡಿದೆ. ಮಂಗಳವಾರ ಲಂಡನ್ ನಲ್ಲಿ ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಮಲ್ಯನನ್ನು ಬಂಧಿಸಿದ್ದು, ವೆಸ್ಟ್ ಮಿನಿಷ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಿದ್ದರು. ತನ್ನ ಬಂಧನದ ಬಗ್ಗೆ ಭಾರತದ ಮಾಧ್ಯಮಗಳು ಹಂಗಾಮ ಸೃಷ್ಟಿಸಿವೆ ಎಂದು ಟ್ವೀಟ್ ಮಾಡುವ ಮೂಲಕ ಮಲ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಯಗೆ ಜಾಮೀನು ಸಿಕ್ಕಿದ್ದರೂ ಕೂಡಾ ಸಂಕಷ್ಟ ತಪ್ಪಿದ್ದಲ್ಲ, ಇದು ಆರಂಭವಷ್ಟೇ ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಮತ್ತೊಂದೆಡೆ ಬಿಜೆಪಿ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.