Advertisement

ವಿಜಯ್ ಹಜಾರೆ ಟ್ರೋಫಿ: ಎನ್.ಜಗದೀಶನ್ ಇತಿಹಾಸ; ಕೊಹ್ಲಿ ದಾಖಲೆ ಪತನ

03:03 PM Nov 21, 2022 | Team Udayavani |

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡಿನ ಆರಂಭಿಕ ಆಟಗಾರ ಎನ್.ಜಗದೀಶನ್ ಅವರು ಅರುಣಾಚಲ ಪ್ರದೇಶದ ವಿರುದ್ಧ ಸ್ಪೋಟಕ ದ್ವಿಶತಕ ಗಳಿಸಿದ್ದು, ದಿಗ್ಗಜರ ಹಲವು ದಾಖಲೆಗಳು ಮುರಿಯಲ್ಪಟ್ಟಿವೆ. ತಮ್ಮ ಸತತ ಐದನೇ ಶತಕವನ್ನು ಗಳಿಸಿದ ಜಗದೀಶನ್ ಈಗ ಪ್ರಧಾನ ದೇಶೀಯ ಕ್ರಿಕೆಟ್ ನಲ್ಲಿ ಸತತ ಶತಕಗಳ ದಾಖಲೆ ಹೊಂದಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ.

Advertisement

ಜಗದೀಶನ್ ನಿರ್ಗಮಿಸಿದಾಗ, ಅವರು ಬರೋಬ್ಬರಿ 277 ರನ್ ಗಳಿಸಿದ್ದರು. ತಮಿಳುನಾಡು 50 ಓವರ್‌ಗಳಲ್ಲಿ 506 ರನ್ ಗಳ ಹೊಸ ದಾಖಲೆಯ ಬೃಹತ್ ಮೊತ್ತ ಕಲೆ ಹಾಕಿತು.

ಜಗದೀಶನ್ ಸಿಡಿಲಬ್ಬರದ ಬ್ಯಾಟಿಂಗ್
ಟಾಸ್ ಗೆದ್ದ ನಂತರ ಅರುಣಾಚಲ ಪ್ರದೇಶ ಫೀಲ್ಡಿಂಗ್ ಆಯ್ದು ಕೊಂಡಿತು. ಈ ನಿರ್ಧಾರವು ಬೌಲರ್ ಗಳಿಗೆ ದೊಡ್ಡ ಸಂಕಟವನ್ನೇ ತಂದೊಡ್ಡಿತು. ಈ ಹಿಂದೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ನಾಲ್ಕು ಶತಕಗಳನ್ನು ಗಳಿಸಿದ್ದ ಜಗದೀಶನ್ ಅವರು ಪ್ರಭಾವಶಾಲಿ ಫಾರ್ಮ್‌ನೊಂದಿಗೆ ಮುಂದುವರಿದು 141 ಎಸೆತಗಳಲ್ಲಿ 277 ರನ್ ಗಳಿಸಿದರು. ಅವರ ಅದ್ಭುತ ಇನ್ನಿಂಗ್ಸ್‌ನಲ್ಲಿ ಅತ್ಯಮೋಘ 15 ಸಿಕ್ಸರ್ ಮತ್ತು ಆಕರ್ಷಕ 25 ಬೌಂಡರಿಗಳು ಒಳಗೊಂಡಿದ್ದವು.

ರೋಹಿತ್ ಶರ್ಮಾ ದಾಖಲೆಯೂ ಪತನ
ನವೆಂಬರ್ 2014 ರಲ್ಲಿ ಐಸಿಸಿ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಜಗದೀಶನ್ ಮುರಿದರು. 277 ರನ್ ಏಕದಿನ ಕ್ರಿಕೆಟ್ ನ ಒಂದು ಇನ್ನಿಂಗ್ಸ್‌ನಲ್ಲಿ  ಗರಿಷ್ಠ ಸ್ಕೋರ್ ಆಗಿದೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಂಡವೊಂದು ಕಲೆ ಹಾಕಿದ ಅತ್ಯಧಿಕ ಮೊತ್ತ ಇದಾಗಿದೆ.
ಉಳಿದ ಅತ್ಯಧಿಕ ಮೊತ್ತಗಳು ಈ ಕೆಳಗಿನಂತೆ ಇವೆ
ಇಂಗ್ಲೆಂಡ್ 498/4 – ನೆದರ್ಲ್ಯಾಂಡ್ಸ್ ವಿರುದ್ಧ (2022)
ಸರ್ರೆ 496/4 – ಗ್ಲೌಸೆಸ್ಟರ್‌ಶೈರ್ ವಿರುದ್ಧ (2007)
ಇಂಗ್ಲೆಂಡ್ 481/6 – ಆಸ್ಟ್ರೇಲಿಯಾದ ವಿರುದ್ಧ (2018)
ಭಾರತ ಎ 458/4 – ಲೀಸೆಸ್ಟರ್‌ಶೈರ್  ವಿರುದ್ಧ (2018)

Advertisement

ಆರಂಭಿಕ ವಿಕೆಟ್‌ ದಾಖಲೆಯ ಜತೆಯಾಟ
ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸುಲಭವಾಗಿ ಮುರಿದ ಜಗದೀಶನ್ ಮತ್ತು ಸಾಯಿ ಸುದರ್ಶನ್ ಅವರು 38.3 ಓವರ್‌ಗಳಲ್ಲಿ 416 ರನ್‌ಗಳ ಆರಂಭಿಕ ಜತೆಯಾಟದೊಂದಿಗೆ ಮತ್ತೊಂದು ದಾಖಲೆಯನ್ನು ಮುರಿದರು. ಇದು ಲಿಸ್ಟ್-ಎ ಕ್ರಿಕೆಟ್‌ನ ಇತಿಹಾಸದಲ್ಲಿ ಮೊದಲ ವಿಕೆಟ್‌ ಗೆ ಕಲೆ ಹಾಕಿದ ಗರಿಷ್ಠ ಮೊತ್ತಗಳ ದಾಖಲೆಯಾಗಿದೆ. ಜಗದೀಶನ್ 277 ರನ್ ಗಳಿಸಿದರೆ, ಸಾಯಿ ಸುದರ್ಶನ್ 102 ಎಸೆತಗಳಲ್ಲಿ 154 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 19 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಒಳಗೊಂಡಿದ್ದು, ಆರಂಭಿಕ ಜತೆಯಾಟಕ್ಕೆ ಟೆಕಿ ಡೋರಿಯಾ ಬ್ರೇಕ್ ಹಾಕಿದರು.

ಜಗದೀಶನ್ 42ನೇ ಓವರ್‌ನಲ್ಲಿ ಔಟಾದ ನಂತರ ಬಾಬಾ ಅಪರಜಿತ್ ಮತ್ತು ಅವರ ಸಹೋದರ ಇಂದ್ರಜಿತ್ ಆಟ ಮುಂದುವರಿಸಿ ತಮಿಳುನಾಡು 50 ಓವರ್‌ಗಳಲ್ಲಿ ಒಟ್ಟು 506 ರನ್‌ ಗಳಿಸಲು ಕಾರಣರಾದರು. ಇಬ್ಬರೂ ಸಹೋದರರು ತಮ್ಮ ಇನ್ನಿಂಗ್ಸ್‌ನಲ್ಲಿ ತಲಾ 31 ರನ್ ಗಳಿಸಿ ಅಜೇಯರಾಗಿ ಉಳಿದರು. ಕುತೂಹಲಕಾರಿಯಾಗಿ, 416 ರನ್ ಜತೆಯಾಟದಲ್ಲಿ ಜಗದೀಶನ್ 251 ರನ್‌ಗಳನ್ನು ಕೊಡುಗೆಯಾಗಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next