Advertisement

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

12:09 AM Mar 09, 2021 | Team Udayavani |

ಹೊಸದಿಲ್ಲಿ: ಅಮೋಘ ಫಾರ್ಮ್ ನಲ್ಲಿರುವ ಯುವ ಎಡಗೈ ಆರಂಭಕಾರ ದೇವದತ್ತ ಪಡಿಕ್ಕಲ್‌ “ವಿಜಯ್‌ ಹಜಾರೆ ಟ್ರೋಫಿ’ಯಲ್ಲಿ ಶತಕಗಳ ತೋರಣ ಕಟ್ಟುವುದನ್ನು ಮುಂದುವರಿಸಿದ್ದಾರೆ. ಅವರ ಸತತ ಸೆಂಚುರಿಯಾಟ ಈಗ ನಾಲ್ಕಕ್ಕೆ ಏರಿದೆ. ಈ ಮೂಲಕ ರಾಷ್ಟ್ರೀಯ ಆಯ್ಕೆಗಾರರಿಗೆ ಬಲವಾದ ಸಂದೇಶವೊಂದನ್ನು ರವಾನಿಸಿದ್ದಾರೆ.

Advertisement

ಅಂದಹಾಗೆ ಪಡಿಕ್ಕಲ್‌ ಅವರ ಈ ಸೆಂಚುರಿ ದಾಖಲಾದದ್ದು ಕೇರಳ ವಿರುದ್ಧ ಸೋಮವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ. ಪಡಿಕ್ಕಲ್‌ ಗಳಿಕೆ 101 ರನ್‌ (119 ಎಸೆತ, 10 ಫೋರ್‌, 2 ಸಿಕ್ಸರ್‌). ಇವರ ಜತೆಗಾರ, ನಾಯಕ ಆರ್‌. ಸಮರ್ಥ್ ಕೂಡ ಸಮರ್ಥ ಬ್ಯಾಟಿಂಗ್‌ ಮುಂದುವರಿಸಿ ಭರ್ಜರಿ 192 ರನ್‌ ರಾಶಿ ಹಾಕಿದರು (158 ಎಸೆತ, 22 ಬೌಂಡರಿ, 3 ಸಿಕ್ಸರ್‌). ಇದು ಪ್ರಸಕ್ತ ಸರಣಿಯಲ್ಲಿ ಸಮರ್ಥ್ ಅವರ ಸತತ 2ನೇ, ಒಟ್ಟಾರೆ 3ನೇ ಸೆಂಚುರಿ. ಇವರಿಬ್ಬರ 249 ರನ್‌ ಜತೆಯಾಟದ ನೆರವಿನಿಂದ ಕೇರಳವನ್ನು 80 ರನ್ನುಗಳಿಂದ ಪರಾಭವಗೊಳಿಸಿದ ಕರ್ನಾಟಕ ಸೆಮಿಫೈನಲ್‌ಗೆ ಮುನ್ನುಗ್ಗಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ 3 ವಿಕೆಟಿಗೆ 338 ರನ್‌ ಪೇರಿಸಿತು. ಕೇರಳ 43.4 ಓವರ್‌ಗಳಲ್ಲಿ 258ಕ್ಕೆ ಆಲೌಟ್‌ ಆಯಿತು. ಲೀಗ್‌ ಹಂತದಲ್ಲಿಯೂ ಕರ್ನಾಟಕ ಕೇರಳವನ್ನು ಮಣಿಸಿತ್ತು (9 ವಿಕೆಟ್‌). ಅಲ್ಲಿಯೂ ಪಡಿಕ್ಕಲ್‌ ಶತಕ ಬಾರಿಸಿದ್ದರು (ಅಜೇಯ 126).

ಚೇಸಿಂಗ್‌ ವೇಳೆ ವತ್ಸಲ ಗೋವಿಂದ್‌ (92)- ಮೊಹಮ್ಮದ್‌ ಅಜರುದ್ದೀನ್‌ (52) ಉತ್ತಮ ಹೋರಾಟವೊಂದನ್ನು ಪ್ರದರ್ಶಿಸಿದರು. ರೋನಿತ್‌ ಮೋರೆ 5 ವಿಕೆಟ್‌ ಕಿತ್ತು ಬೌಲಿಂಗ್‌ ಹೀರೋ ಎನಿಸಿದರು.

ಇಬ್ಬರಿಂದಲೂ 600 ರನ್‌
ಪಡಿಕ್ಕಲ್‌ ಕಳೆದ 3 ಪಂದ್ಯಗಳಲ್ಲಿ ಕ್ರಮವಾಗಿ 152 (ಒಡಿಶಾ), ಅಜೇಯ 126 (ಕೇರಳ) ಮತ್ತು ಅಜೇಯ 145 ರನ್‌ (ರೈಲ್ವೇಸ್‌) ಬಾರಿಸಿದ್ದರು. ಬಿಹಾರ್‌ ವಿರುದ್ಧ ಕೇವಲ 3 ರನ್ನಿನಿಂದ ಶತಕ ಮಿಸ್‌ ಆಗಿತ್ತು. ಇಲ್ಲವಾದರೆ ಪಡಿಕ್ಕಲ್‌ ಈ ಹೊತ್ತಿಗೆ ಸತತ 5 ಸೆಂಚುರಿಗಳ ಸರದಾರನಾಗಿರುತ್ತಿದ್ದರು. ಈ ಸರಣಿಯಲ್ಲಿ ಪಡಿಕ್ಕಲ್‌ ಅವರ ಒಟ್ಟು ರನ್‌ ಗಳಿಕೆ 673ಕ್ಕೆ ಏರಿದೆ.

Advertisement

ರೈಲ್ವೇಸ್‌ ಎದುರಿನ ಕಳೆದ ಪಂದ್ಯದಲ್ಲಿ ಸಮರ್ಥ್ ಬ್ಯಾಟ್‌ನಿಂದ ಅಜೇಯ 130 ರನ್‌ ಹರಿದು ಬಂದಿತ್ತು. ಬಿಹಾರ ವಿರುದ್ಧ 158 ರನ್‌ ಬಾರಿಸಿದ್ದರು. 6 ಪಂದ್ಯಗಳಿಂದ 605 ರನ್‌ ಗಳಿಸಿದ ಸಾಧನೆ ಸಮರ್ಥ್ ಅವರದು.
ಕರ್ನಾಟಕದ ಸೆಮಿಫೈನಲ್‌ ಎದುರಾಳಿ ಯಾರೆಂಬುದು ಮಂಗಳವಾರ ತಿಳಿಯಲಿದೆ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-3 ವಿಕೆಟಿಗೆ 338 (ಸಮರ್ಥ್ 192, ಪಡಿಕ್ಕಲ್‌ 101, ಬಾಸಿಲ್‌ 57ಕ್ಕೆ 3). ಕೇರಳ-43.4 ಓವರ್‌ಗಳಲ್ಲಿ 258 (ಗೋವಿಂದ್‌ 92, ಅಜರುದ್ದೀನ್‌ 52, ಮೋರೆ 36ಕ್ಕೆ 5, ಗೋಪಾಲ್‌ 64ಕ್ಕೆ 2, ಗೌತಮ್‌ 73ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next