Advertisement

ವಿಜಯ್‌ ಹಜಾರೆ ಏಕದಿನ ಫೈನಲ್‌: ಕರ್ನಾಟಕ-ತಮಿಳುನಾಡು: ವಿಜಯಕ್ಕೆ ಒಂದೇ ಮೆಟ್ಟಿಲು

10:01 PM Oct 24, 2019 | Sriram |

ಬೆಂಗಳೂರು: ಎಲ್ಲರ ಕಣ್ಣು ಈಗ ಚಿನ್ನಸ್ವಾಮಿ ಕ್ರೀಡಾಂಗಣದತ್ತ ನೆಟ್ಟಿದೆ. ಶುಕ್ರವಾರ ನಡೆಯಲಿರುವ ವಿಜಯ್‌ ಹಜಾರೆ ಏಕದಿನ ಫೈನಲ್‌ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಬಲಿಷ್ಠ ತಮಿಳುನಾಡು ತಂಡವನ್ನು ಎದುರಿಸಲಿದೆ. ಎರಡೂ ತಂಡಗಳಲ್ಲಿ ತಾರಾ ಆಟಗಾರರ ದಂಡೇ ಇರುವುದರಿಂದ ಫೈನಲ್‌ ಫೈಟ್‌ ತೀವ್ರ ಕುತೂಹಲ ಕೆರಳಿಸಿದೆ.

Advertisement

ಮನೀಷ್‌ ಪಾಂಡೆ ಸಾರಥ್ಯದ ಕರ್ನಾಟಕಕ್ಕೆ ಇದು ತವರು ಪಂದ್ಯವಾದ್ದರಿಂದ ನೆಚ್ಚಿನ ತಂಡವಾಗಿ ಗುರುತಿಸಲ್ಪಟ್ಟಿದೆ. 4ನೇ ಸಲ ಟ್ರೋಫಿ ಗೆಲ್ಲುವತ್ತ ಹೆಜ್ಜೆ ಇಟ್ಟಿದೆ. ಮತ್ತೂಂದು ಕಡೆ ತಮಿಳುನಾಡು 5ನೇ ಸಲ ಟ್ರೋಫಿ ಗೆಲುವಿನತ್ತ ದೃಷ್ಟಿ ಹರಿಸಿದೆ.

ಸಂಘಟಿತ ಪ್ರದರ್ಶನ
ಕರ್ನಾಟಕ ತಂಡ ಕೂಟದುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿದೆ. ಪ್ರತೀ ಗೆಲುವಿನಲ್ಲೂ ಆರಂಭಕಾರ ದೇವದತ್‌ ಪಡಿಕ್ಕಲ್‌ ಮಿಂಚಿದ್ದಾರೆ. 10 ಪಂದ್ಯಗಳಲ್ಲಿ 598 ರನ್‌ ಪೇರಿಸಿದ್ದಾರೆ. ಫೈನಲ್‌ನಲ್ಲೂ ಅವರು ಸಿಡಿದು ನಿಂತರೆ ಕರ್ನಾಟಕ ಮೇಲುಗೈ ಸಾಧಿಸುವುದರಲ್ಲಿ ಅನುಮಾನವಿಲ್ಲ.

ಮತ್ತೂಬ್ಬ ಆರಂಭಕಾರ ಕೆ.ಎಲ್‌. ರಾಹುಲ್‌ ಲೀಗ್‌ ಪಂದ್ಯಗಳಿಗಿಂತ ನಾಕೌಟ್‌ನಲ್ಲಿ ಉತ್ತಮ ಆಟವಾಡಿದ್ದಾರೆ. 10 ಪಂದ್ಯಗಳಿಂದ 546 ರನ್‌ ಗಳಿಸಿದ್ದಾರೆ. ಇವರಿಬ್ಬರ ಆರಂಭ ಕರ್ನಾಟಕದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಸೆಮಿಫೈನಲ್‌ ವೇಳೆ ತಂಡವನ್ನು ಕೂಡಿಕೊಂಡಿದ್ದ ಮಾಯಾಂಕ್‌ ಅಗರ್ವಾಲ್‌ ಮೊದಲ ಪಂದ್ಯದಲ್ಲೇ ಭರ್ಜರಿ ಬ್ಯಾಟ್‌ ಬೀಸಿದ್ದಾರೆ. ಮನೀಷ್‌ ಪಾಂಡೆ, ಕೆ. ಗೌತಮ್‌ ಕೂಡ ಲಯದಲ್ಲಿದ್ದಾರೆ. ಆದರೆ ಅಗ್ರ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ಫಾರ್ಮ್ ನಿರೀಕ್ಷಿತ ಮಟ್ಟದಲ್ಲಿಲ್ಲ.

Advertisement

ಕರ್ನಾಟಕದ ಬೌಲಿಂಗ್‌, ಆಲ್‌ರೌಂಡ್‌ ವಿಭಾಗ ಕೂಡ ಬಲಿಷ್ಠ. ವಿ. ಕೌಶಿಕ್‌ ಸೆಮಿಫೈನಲ್‌ನಲ್ಲಿ ಘಾತಕ ಬೌಲಿಂಗ್‌ ಸಂಘಟಿಸಿದ್ದಾರೆ. ಇವರಿಗೆ ಅಭಿಮನ್ಯು ಮಿಥುನ್‌ ಉತ್ತಮ ಸಾಥ್‌ ನೀಡುತ್ತಿದ್ದಾರೆ. ಕೆ. ಗೌತಮ್‌, ದುಬೆ, ಪ್ರಸಿದ್ಧ್ ಕೃಷ್ಣ, ಗೋಪಾಲ್‌ ಉಳಿದ ಪ್ರಮುಖರು.

ಅಪಾಯಕಾರಿ ತಮಿಳುನಾಡು
ಬ್ಯಾಟಿಂಗ್‌ ಬೌಲಿಂಗ್‌ ಎರಡರಲ್ಲೂ ತಮಿಳುನಾಡು ಬಲಿಷ್ಠವಾಗಿದೆ. ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿ‌ನ್‌, ರಾಷ್ಟ್ರೀಯ ತಂಡದಲ್ಲಿ ಆಡಿರುವ ಆಲ್‌ರೌಂಡರ್‌ ವಿಜಯ್‌ ಶಂಕರ್‌, ವಿಕೆಟ್‌ ಕೀಪರ್‌ ಕಮ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌, ಆರಂಭಕಾರ ಮುರಳಿ ವಿಜಯ್‌ ತಂಡದ ಪ್ರಮುಖರು.

ಬಾಬಾ ಅಪರಾಜಿತ್‌ (10 ಪಂದ್ಯ, 480 ರನ್‌), ಅಭಿನವ್‌ ಮುಕುಂದ್‌ (10 ಪಂದ್ಯ, 440 ರನ್‌) ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಸುಲಭದಲ್ಲಿ ತಮಿಳುನಾಡು ಬ್ಯಾಟಿಂಗ್‌ ಸರದಿಯನ್ನು ನಿಯಂತ್ರಿಸುವುದು ಅಸಾಧ್ಯ. ಮಧ್ಯಮ ವೇಗಿಗಳಾದ ಟಿ. ನಟರಾಜ್‌, ಎಂ. ಮೊಹಮ್ಮದ್‌ ಹಾಗೂ ಕೆ. ವಿಘ್ನೇಶ್‌ ತಂಡದ ತಾರಾ ಬೌಲರ್‌ಗಳಾಗಿದ್ದು, ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ.

ತಂಡಗಳು
ಕರ್ನಾಟಕ: ಮನೀಷ್‌ ಪಾಂಡೆ (ನಾಯಕ), ಕೆ.ಎಲ್‌. ರಾಹುಲ್‌, ದೇವದತ್‌ ಪಡಿಕ್ಕಲ್‌, ಮಾಯಾಂಕ್‌ ಅಗರ್ವಾಲ್‌, ಕರುಣ್‌ ನಾಯರ್‌, ಪವನ್‌ ದೇಶಪಾಂಡೆ, ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌, ಎಸ್‌. ಶರತ್‌ (ವಿ.ಕೀಪರ್‌), ಅಭಿಮನ್ಯು ಮಿಥುನ್‌, ವಿ. ಕೌಶಿಕ್‌, ಪ್ರಸಿದ್ಧ್ ಕೃಷ್ಣ, ರೋನಿತ್‌ ಮೋರೆ, ಪ್ರವೀಣ್‌ ದುಬೆ, ಜೆ. ಸುಚಿತ್‌, ಅಭಿಷೇಕ್‌ ರೆಡ್ಡಿ.

ತಮಿಳುನಾಡು: ದಿನೇಶ್‌ ಕಾರ್ತಿಕ್‌, ಅಭಿನವ್‌ ಮುಕುಂದ್‌, ಮುರಳಿ ವಿಜಯ್‌, ಬಾಬಾ ಅಪರಾಜಿತ್‌, ವಿಜಯ್‌ ಶಂಕರ್‌, ವಾಷಿಂಗ್ಟನ್‌ ಸುಂದರ್‌, ಶಾರೂಖ್‌ ಖಾನ್‌, ಆರ್‌. ಅಶ್ವಿ‌ನ್‌, ಎಂ. ಮೊಹಮ್ಮದ್‌, ಟಿ. ನಟರಾಜನ್‌, ಕೆ. ವಿಘ್ನೇಶ್‌, ಮುರುಗನ್‌ ಅಶ್ವಿ‌ನ್‌, ಎನ್‌. ಜಗದೀಶನ್‌, ಅಭಿಷೇಕ್‌ ತನ್ವರ್‌, ಹರಿ ನಿಶಾಂತ್‌, ಜೆ. ಕೌಶಿಕ್‌.

ಆರಂಭ: ಬೆಳಗ್ಗೆ 9.00
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್ 2

Advertisement

Udayavani is now on Telegram. Click here to join our channel and stay updated with the latest news.

Next