Advertisement
ಬುಧವಾರದ ಮೊದಲ ಸೆಮಿಫೈನಲ್‌ನಲ್ಲಿ ಛತ್ತೀಸ್‌ಗಢ ವಿರುದ್ಧ ಕರ್ನಾಟಕ 9 ವಿಕೆಟ್‌ಗಳ ಅಧಿಕಾರಯುತ ಜಯ ಸಾಧಿಸಿತು. ಉದಯೋನ್ಮುಖ ಬೌಲರ್ ವಿ. ಕೌಶಿಕ್ (46ಕ್ಕೆ 4) ಸೇರಿದಂತೆ ರಾಜ್ಯ ಬೌಲರ್‌ಗಳ ಬಿಗಿ ದಾಳಿಗೆ ತತ್ತರಿಸಿದ ಛತ್ತೀಸ್‌ಗಢ 49.4 ಓವರ್‌ಗಳಲ್ಲಿ 223ಕ್ಕೆ ಆಲೌಟಾಯಿತು. ಕರ್ನಾಟಕ 40 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 229 ರನ್ ಬಾರಿಸಿತು. ಆರಂಭಿಕರಾದ ದೇವದತ್ ಪಡಿಕ್ಕಲ್ (92 ರನ್), ಕೆ.ಎಲ್. ರಾಹುಲ್ (ಅಜೇಯ 88 ರನ್) ಹಾಗೂ ಮಾಯಾಂಕ್ ಅಗರ್ವಾಲ್ (ಅಜೇಯ 47 ರನ್) ಭರ್ಜರಿ ಬ್ಯಾಟಿಂಗ್ ಪ್ರದರ್ಶನವಿತ್ತರು. ಶುಕ್ರವಾರ ಕರ್ನಾಟಕ ಗೆದ್ದರೆ 4ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ.
ಕರ್ನಾಟಕ ನಿರಾಯಾಸವಾಗಿ ಗುರಿ ಬೆನ್ನಟ್ಟಿತು. ಕೆ.ಎಲ್. ರಾಹುಲ್-ದೇವದತ್ ಪಡಿಕ್ಕಲ್ ಪ್ರಚಂಡ ಫಾರ್ಮ್ ಮುಂದುವರಿಸಿ 30.5 ಓವರ್‌ಗಳಿಂದ 155 ರನ್ ಜತೆಯಾಟ ನಿರ್ವಹಿಸಿದರು. ಸ್ಪಿನ್ನರ್ ಅಜಯ್ ಮಂಡಲ್ (51ಕ್ಕೆ 1) ಈ ಜೋಡಿಯನ್ನು ಬೇರ್ಪಡಿಸಿದರು. ಪಡಿಕ್ಕಲ್ ಬೌಲ್ಡ್ ಆದರು. 98 ಎಸೆತ ಎದುರಿಸಿದ ಪಡಿಕ್ಕಲ್ 7 ಬೌಂಡರಿ, 3 ಸಿಕ್ಸರ್ ಬಾರಿಸಿ ಮಿಂಚಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿಸಿ ರಾಜ್ಯ ತಂಡ ಸೇರಿಕೊಂಡ ಮಾಯಾಂಕ್ ಅಗರ್ವಾಲ್ (ಅಜೇಯ 47 ರನ್, 33 ಎಸೆತ, 3 ಬೌಂಡರಿ, 4 ಸಿಕ್ಸರ್) ವನ್‌ಡೌನ್‌ನಲ್ಲಿ ಬ್ಯಾಟಿಂಗ್ ನಡೆಸಿದರು. ರಾಹುಲ್ ಅವರ 88 ರನ್ 111 ಎಸೆತಗಳಿಂದ ಬಂತು (6 ಬೌಂಡರಿ, 1 ಸಿಕ್ಸರ್).
Related Articles
Advertisement
ಇಲ್ಲೇ ನಡೆದ ಎಲೈಟ್ “ಎ’ ಗುಂಪಿನ ಪಂದ್ಯದಲ್ಲೂ ಕರ್ನಾಟಕ ವಿರುದ್ಧ ಛತ್ತೀಸ್‌ಗಢ ಸೋಲು ಕಂಡಿತ್ತು.
ಸಂಕ್ಷಿಪ್ತ ಸ್ಕೋರ್: ಛತ್ತೀಸ್‌ಗಢ-49.4 ಓವರ್‌ಗಳಲ್ಲಿ 223 (ಖಾರೆ 78, ರುಯಿಕರ್ 40, ಕೌಶಿಕ್ 46ಕ್ಕೆ 4, ಕೆ. ಗೌತಮ್ 30ಕ್ಕೆ 2, ದುಬೆ 43ಕ್ಕೆ 2, ಮಿಥುನ್ 44ಕ್ಕೆ 2). ಕರ್ನಾಟಕ-40 ಓವರ್‌ಗಳಲ್ಲಿ ಒಂದು ವಿಕೆಟಿಗೆ 229 (ಪಡಿಕ್ಕಲ್ 92, ರಾಹುಲ್ ಔಟಾಗದೆ 88, ಅಗರ್ವಾಲ್ ಔಟಾಗದೆ 47). 5 ವಿಕೆಟ್‌ಗಳಿಂದ ಗೆದ್ದ ತ.ನಾಡು
ಇನ್ನೊಂದು ಸೆಮಿಫೈನಲ್‌ನಲ್ಲಿ ತಮಿಳುನಾಡು ತಂಡ ಗುಜರಾತ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. 40 ಓವರ್‌ಗಳಿಗೆ ಸೀಮಿತಗೊಂಡ ಈ ಪಂದ್ಯದಲ್ಲಿ ಗುಜರಾತ್ 9 ವಿಕೆಟಿಗೆ 177 ರನ್ ಮಾಡಿದರೆ, ತಮಿಳುನಾಡು 39 ಓವರ್‌ಗಳಲ್ಲಿ 5 ವಿಕೆಟಿಗೆ 181 ರನ್ ಬಾರಿಸಿತು. ಪಂದ್ಯದ ಏಕೈಕ ಅರ್ಧ ಶತಕ ತಮಿಳುನಾಡಿನ ಶಾರೂಖ್ ಖಾನ್ ಅವರಿಂದ ದಾಖಲಾಯಿತು (ಅಜೇಯ 56). ನಾಯಕ ದಿನೇಶ್ ಕಾರ್ತಿಕ್ 47 ರನ್ ಹೊಡೆದರು. ಗುಜರಾತ್ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಧ್ರುವ್ ರಾವಲ್ ಸರ್ವಾಧಿಕ 40 ರನ್ ಹೊಡೆದರು.