ಧಾರವಾಡ: ಕೋವಿಡ್ ಎರಡನೇ ಅಲೆಯಲ್ಲಿ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ತೆಗೆದುಕೊಂಡಿದೆ.ಮೂರನೇ ಅಲೆಯು ಬರಬಾರದು ಎನ್ನುವುದು ಎಲ್ಲರ ಆಶಯವಾಗಿದೆ. ಅದರ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ ಎಂದು ಬೃಹತ್,ಮಧ್ಯಮ ಕೈಗಾರಿಕೆ,ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೊರೊನಾ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಮತ್ತು ಆರೈಕೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆ ಆಗುತ್ತದೆ ಎನ್ನಲಾಗುತ್ತದೆ. ವಯಸ್ಕರು ಮಾಸ್ಕ್ ಹಾಕಿಕೊಂಡು ಮುಂಜಾಗೃತೆ ವಹಿಸುತ್ತಾರೆ ಆದರೆ ಮಕ್ಕಳಿಗೆ ಅದರ ಮಹತ್ವ ಗೊತ್ತಿರುವುದಿಲ್ಲ ನಿರ್ಲಕ್ಷ್ಯ ವಹಿಸುತ್ತಾರೆ. ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ.
ಪ್ರತಿ ಹಂತದಲ್ಲಿ ಕೊರೊನಾ ಮುಂಜಾಗ್ರತಾ ಸಭೆ ನಡೆಸಿದ್ದೇವೆ,ಇದೇ ಮಾದರಿಯಲ್ಲಿ ಸಮರೋಪಾದಿ ಕಾರ್ಯ ಮುಂದುವರೆಸಬೇಕಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಅಂತಹ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ ಎಂದರು.
ಜಿಲ್ಲೆಯಲ್ಲಿ 6 ವರ್ಷದೊಳಗಿನ 1,43,902 ಮಕ್ಕಳು,6 ರಿಂದ 16 ವರ್ಷದೊಳಗಿನ 3,36,510 ಮಕ್ಕಳಿದ್ದಾರೆ. ಹುಬ್ಬಳ್ಳಿಯ ಸುಚಿರಾಯಿ ಆಸ್ಪತ್ರೆಯಿಂದ ಮಕ್ಕಳಿಗೆ ಪಿಡಿಯಾಸ್ಯೂರ್ ಪೌಡರ್, ಆಕ್ಸಿಜನ್ ಸಿಲಿಂಡರ್ ಹಸ್ತಾಂತರಿಸಲಾಯಿತು.
ಕೋವಿಡ್ 3 ನೇ ಅಲೆಯ ತಡೆ ಮತ್ತು ನಿರ್ವಹಣೆ ಬಗ್ಗೆ ಮಕ್ಕಳ ತಜ್ಞ ಡಾ.ಆರ್ ವಿ ದೇಶಪಾಂಡೆ ಅವರು ಮಾತನಾಡಿ, ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅಮೃತ ದೇಸಾಯಿ,ಪ್ರಸಾದ ಅಬಯ್ಯ,ಶಾಸಕಿ ಕುಸುಮಾವತಿ ಶಿವಳ್ಳಿ,ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ,ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ,ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ,ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ,ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ ಯರಗಟ್ಟಿ ಮತ್ತಿತರರು ಇದ್ದರು.