ಚನ್ನಪಟ್ಟಣ: ತಾಲೂಕಿನ ಒಕ್ಕಲಿಗ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಕಣ ರಂಗೇರಿದ್ದು, ಕಣದಲ್ಲಿರುವ ಹುರಿಯಾಳು ಈಗಾಗಲೇ ಸಿಂಡಿ ಕೇಟ್ ಜೊತೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. 15 ನಿರ್ದೇಶಕರ ಸ್ಥಾನಕ್ಕೆ 47 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದು, ಚುನಾವಣಾ ಕಣ ಕಳೆದ ಅವ ಧಿಗಿಂತ ರಂಗೇರಿದೆ.
ಒಕ್ಕಲಿಗ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಗೆ (2015ರ) ಹಿಂದೆ ಮೂರು ವರ್ಷದ ಅವಧಿಗೆ ಚುನಾವಣೆ ಘೋಷಣೆಯಾದರೂ, ಅಂದೆಲ್ಲಾ ಅವಿರೋಧವಾಗಿಯೇ ಆಡಳಿತ ಮಂಡಳಿ ಆಯ್ಕೆ ಮಾಡಿಕೊಂಡು ಬಂದಿದ್ದರು. ಆದರೆ, 2015ರ ಆಡಳಿತ ಮಂಡಳಿ ಚುನಾವಣೆ ವೇಳೆ ಅಧಿಕಾರದ ಅವಧಿಯನ್ನು
ಐದು ವರ್ಷಕ್ಕೆ ತಿದ್ದುಪಡಿ ಮಾಡಲಾಗಿತ್ತು. ಈ ಅವಧಿಯಲ್ಲಿ ಆಡಳಿತ ಮಂಡಳಿಗೆ ಆಕಾಂಕ್ಷಿಗಳು ಹೆಚ್ಚು ಆಸಕ್ತಿ ತೋರಿದ್ದು, ಪಕ್ಷದ ಮುಖಂಡರು, ಜಿಪಂ ವ್ಯಾಪ್ತಿಯ ಮುಖಂಡರು ಸೇರಿದಂತೆ ಒಟ್ಟು 52 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿ ಚುನಾವಣೆ ಎದುರಿಸಿದ್ದರು.
ಸಂಸ್ಥೆ ಅಭಿವೃದ್ಧಿಗೆ ಲಕ್ಷಾಂತರ ರೂ.: ಬಿ.ಟಿ.ಜಯಮುದ್ದಪ್ಪ ಸಿಂಡಿಕೇಟ್‌ನಿಂದ ಒಂಭತ್ತು ನಿರ್ದೇಶಕರು ಹಾಗೂ ಟಿ.ಕೆ. ಯೋಗೀಶ್ ಸಿಂಡಿಕೇಟ್‌ನಿಂದ ಐದು ನಿರ್ದೇಶಕರು ಹಾಗೂ ಒಬ್ಬ ಪಕ್ಷೇತರ ನಿರ್ದೇಶಕ ಜಯಗಳಿಸಿದ್ದರು. ಆಡಳಿತ ಮಂಡಳಿಗೆ ಯಾವುದೇ ಆದಾಯ ಬರುವುದಿಲ್ಲ ಎಂದುಕೊಂಡಿದ್ದ ಸಂಸ್ಥೆಯ ಸದಸ್ಯರಿಗೆ, ಕಳೆದ ವರ್ಷ ಸಂಸ್ಥೆಗೆ 12 ಶಿಕ್ಷಕರ ಹುದ್ದೆ ಭರ್ತಿ ಮಾಡಿದ ವೇಳೆ ಪ್ರತಿ ಅಭ್ಯರ್ಥಿಯಿಂದ ಸಂಸ್ಥೆ ಅಭಿವೃದ್ಧಿಗೆ ಲಕ್ಷಗಟ್ಟಲೆ ಹಣ ಪಡೆಯಲಾಗಿತ್ತು ಎಂಬ ಮಾತು ಕೇಳಿ ಬಂದಿದ್ದವು.
ಪ್ರತಿಷ್ಠೆಗಾಗಿ ಚುನಾವಣೆ: ಕಳೆದ ಅವಧಿಯಲ್ಲಿ ಸಂಸ್ಥೆ ಅಭಿವೃದ್ಧಿಗೆ ಹಣವನ್ನು ಮೀಸಲಾಗಿಡಲಾಗಿತ್ತೇ? ಅಥವಾ ಬೇರೆ ಅವ್ಯವಹಾರ ನಡೆದಿದೆಯೇ? ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನಲೆ , ಇದನ್ನು ಪ್ರಶ್ನಿಸಬೇಕೆಂದು ಆಡಳಿತ ಮಂಡಳಿ ಚುನಾವಣೆಗೆ ಹಲವರು ಸ್ಪರ್ಧಿಸಿದ್ದಾರೆ. 2015ರ ಆಡಳಿತ ಮಂಡಳಿ ಚುನಾವಣೆಯಲ್ಲಿ ಆಸಕ್ತಿ ಹೊಂದಿದ್ದವರು, ಪ್ರತಿಷ್ಠೆಗಾಗಿ ಚುನಾವಣೆ ಎದುರಿಸಿದ್ದರು. ಆದರೆ, ಮುಂದೆ ಅಲ್ಲಿ ಕಾಂಚಾಣದ ಕುಣಿತವೇ ನಡೆದಿದ್ದು, ಈ ಬಾರಿ ನಿರ್ದೇಶಕ ಚುನಾವಣೆ ಮತ್ತಷ್ಟು ರಂಗೇರಿದೆ ಎನ್ನಲಾಗಿದೆ.
ಒಟ್ಟಾರೆ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಚುನಾವಣೆಯಲ್ಲಿ ಈ ಬಾರಿ ಹೆಚ್ಚು ಪೈಪೋಟಿ ಏರ್ಪಟ್ಟಿದೆ. ಚುನಾವಣೆ ಕಣಕ್ಕೆ ಯುವಕರು ಸ್ಪರ್ಧಿಸಿದ್ದು, ಚುನಾವಣಾ ಕಣ ಮತ್ತಷ್ಟು ಕುತೂಹಲ ಉಂಟುಮಾಡಿದೆ.