Advertisement

ರಕ್ತ ಬಸಿದು ಹಾಲು ಹರಿಸಿದ ಬಿಸಿಲೂರ ವೇಗಿ

07:59 PM Dec 20, 2019 | Lakshmi GovindaRaj |

ಬದುಕು ಯಾವಾಗಲೂ ಬವಣೆಯನ್ನೇ ನೀಡುವುದಿಲ್ಲ. ರಕ್ತ ಬಸಿದರೆ ಕೆಲವೊಮ್ಮೆ ಹಾಲನ್ನೂ ಹರಿಸಬಹುದು. ಅಂತಹದ್ದೊಂದು ಬದುಕಿನ ದರ್ಶನ ಮಾಡಿಸಿರುವುದು ಬಿಸಿಲನಾಡು ರಾಯಚೂರಿನ 19 ವಯೋಮಿತಿ ಕ್ರಿಕೆಟಿಗ ವಿದ್ಯಾಧರ ಪಾಟೀಲ. ಈ ಹುಡುಗ ಇವತ್ತು ಭಾರತ 19 ವಯೋಮಿತಿ ವಿಶ್ವಕಪ್‌ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರ ಸಾಧನೆಯೂ ಒಂದು ರೀತಿ ರಕ್ತ ಬಸಿದು ಹಾಲನ್ನು ಹರಿಸಿದ ಕಥೆ.

Advertisement

ಬಿಸಿಲು, ಅಪೌಷ್ಟಿಕತೆ, ಹಿಂದುಳಿದ ಪ್ರದೇಶ ಎಂದು ಕುಖ್ಯಾತವಾಗಿರುವ ರಾಯಚೂರಿನಲ್ಲಿ ಜನರ ಬದುಕು ದುರ್ಬರವಾಗಿದೆ. ಅಲ್ಲಿನ ಬಿಸಿಲಿಗೆ ಒಂದು ಹೂವು ಅರಳಲೂ ಪಡಿಪಾಟಲು ಪಡುತ್ತದೆ. ಅಂತಹ ಕಡೆ ವಿದ್ಯಾಧರ ಭಾರತೀಯ ಕ್ರಿಕೆಟ್‌ ತಂಡದ ಹೂವಾಗಿ ಅರಳಿ ನಿಂತಿದ್ದಾರೆ. ಅವರೀಗ ರಾಜ್ಯದ ಹೆಮ್ಮೆಯ ಕ್ರಿಕೆಟಿಗ. ಭವಿಷ್ಯದಲ್ಲಿ ಭಾರತ ಹಿರಿಯರ ತಂಡದ ಕದ ಬಡಿಯುವುದು ಅವರಿಗೆ ಕಷ್ಟದ ಮಾತೇನಲ್ಲ.

ರಾಯಚೂರು ಜಿಲ್ಲೆಯ ಚಿಕ್ಕಸೂಗೂರು ಮೂಲದ ವಿದ್ಯಾಧರ, ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಭಾರತ ಕಿರಿಯರ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದರು. ಈಗವರು ಜನವರಿಯಲ್ಲಿ ನಡೆಯಲಿರುವ 19 ವಯೋಮಿತಿ ವಿಶ್ವಕಪ್‌ನಲ್ಲಿ ಆಡಲು ಸಜ್ಜಾಗಿದ್ದಾರೆ. ಇದು ಕನಸೆಂದು ಭಾವಿಸಿದ್ದ ಕಥೆಯೊಂದು ನನಸಾದ ಸತ್ಯಕಥೆ.

2011ರ ವಿಶ್ವಕಪ್‌ ಜಯದ ನಂತರ ಮೊಳಕೆಯೊಡೆದ ಕನಸು: ವಿದ್ಯಾಧರ ಅವರ ತಂದೆ ಸೋಮಶೇಖರಗೌಡ, ಕರ್ನಾಟಕ ಜಲಮಂಡಳಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ, ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದಾರೆ. ತಾಯಿ ಕವಿತಾ ಪಾಟೀಲ್‌ ಗೃಹಿಣಿ. ಇಬ್ಬರು ಮಕ್ಕಳಲ್ಲಿ ಕಿರಿಯವನಾದ ವಿದ್ಯಾಧರಗೆ ಚಿಕ್ಕವನಿದ್ದಾಗಲೇ ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಆಸಕ್ತಿಯಿತ್ತು. ಅವರಿಗೆ 10 ವರ್ಷವಾಗಿದ್ದಾಗ, ಧೋನಿ ನಾಯಕತ್ವದ ಭಾರತ ಹಿರಿಯರ ತಂಡ, 2011ರ ಏಕದಿನ ವಿಶ್ವಕಪ್‌ ಗೆದ್ದಿತ್ತು. ಇದನ್ನು ಕಂಡ ವಿದ್ಯಾಧರಗೆ ತಾನೂ ಭಾರತದ ಪರ ಆಡಬೇಕು ಎಂಬ ಕನಸು ಹುಟ್ಟಿಕೊಂಡಿತು. ಅಲ್ಲಿಂದಲೇ ಅವರ ಕ್ರಿಕೆಟ್‌ ಪಯಣ ಆರಂಭವಾಯಿತು.

ಸಿಟಿ ಇಲೆವೆನ್‌ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ: ವಿದ್ಯಾಧರ ನಾನು ಕೂಡ ಇಂಡಿಯಾ ಟೀಮ್‌ನಲ್ಲಿ ಆಡುತ್ತೇನೆ ಎಂದಾಗ ಮನೆಯವರು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಹಠಕ್ಕೆ ಬಿದ್ದವನಂತೆ ಮನೆಯವರನ್ನೆಲ್ಲ ಒಪ್ಪಿಸಿದ. ಮಗನ ಆಸೆಗೆ ಇಲ್ಲ ಎನ್ನದೆ ತಂದೆ ನಗರದ ಸಿಟಿ ಇಲೆವೆನ್‌ ಕ್ರಿಕೆಟ್‌ ಕೋಚಿಂಗ್‌ ಸೆಂಟರ್‌ಗೆ ಸೇರಿಸಿದರು. ಆಗ ತರಬೇತುದಾರ ವೆಂಕಟರೆಡ್ಡಿ ಯುವಕನ ಪ್ರತಿಭೆ ಗುರುತಿಸಿ ಸಾಧನೆಗೆ ಪ್ರೇಕರರಾದರು.

Advertisement

ಅಲ್ಲಿಂದ ಹಂತಹಂತವಾಗಿ ಬೆಳೆಯಲಾರಂಭಿಸಿದ ವಿದ್ಯಾಧರ; 16 ವಯೋಮಿತಿ ರಾಜ್ಯ ತಂಡಕ್ಕೆ ಆಯ್ಕೆಯಾದರು. ಅಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿ ಕರ್ನಾಟಕ 19 ವಯೋಮಿತಿ ತಂಡದಲ್ಲೂ ಸ್ಥಾನ ಪಡೆದರು. ಅದು ನನ್ನ ಸಾಮರ್ಥ್ಯ ಹೆಚ್ಚಿಸಿತಲ್ಲದೇ, ನಾನು ಆಡಬಲ್ಲೆ ಎಂಬ ವಿಶ್ವಾಸ ಮೂಡಿಸಿತು ಎನ್ನುತ್ತಾರೆ ವಿದ್ಯಾಧರ ಪಾಟೀಲ್‌.

8 ದೇಶಗಳ ವಿರುದ್ಧ ಬೌಲಿಂಗ್‌: ರಾಷ್ಟ್ರೀಯ ಅಕಾಡೆಬಳಿಕ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ ಆಯ್ಕೆಯಾಗಿ 19 ವಯೋಮಿತಿ ರಾಷ್ಟ್ರೀಯ ತಂಡದ ಸದಸ್ಯರಾದರು. ಮಧ್ಯಮ ವೇಗದ ಬೌಲರ್‌ ಆಗಿರುವ ವಿದ್ಯಾಧರ, ವಿವಿಧ ದೇಶ ವಿರುದ್ಧ ಸುಮಾರು 8 ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್‌, ಬಾಂಗ್ಲಾದೇಶ, ಶ್ರೀಲಂಕಾ, ಕುವೈತ್‌ ಸೇರಿ ವಿವಿಧ ದೇಶಗಳೊಂದಿಗೆ ಕ್ರಿಕೆಟ್‌ ಆಡಿದ್ದು, ಎಲ್ಲ ಪಂದ್ಯಗಳಲ್ಲೂ ಸರಾಸರಿ ಬೌಲಿಂಗ್‌ ನಿರ್ವಹಣೆ ಮಾಡಿದ್ದಾರೆ. ಪ್ರತಿ ಪಂದ್ಯದಲ್ಲೂ ವಿಕೆಟ್‌ ಪಡೆಯುವ ಮೂಲಕ ಆಯ್ಕೆದಾರರ ಗಮನ ಸೆಳೆದಿರುವುದೇ ಇಂದು ವಿಶ್ವಕಪ್‌ ತಂಡಕ್ಕೆ ಸೇರಲು ಕಾರಣವಾಗಿದೆ.

ಕ್ರಿಕೆಟ್‌ಗಾಗಿ ಶಿಕ್ಷಣವನ್ನೇ ಮರೆತರು: ವಿದ್ಯಾಧರ ಅವರ ಕುಟುಂಬ ರಾಯಚೂರು ಸಮೀಪದ ಯರಮರಸ್‌ ಕ್ಯಾಂಪ್‌ನಲ್ಲಿ ವಾಸವಾಗಿದೆ. ನಿತ್ಯ ಕ್ರಿಕೆಟ್‌ ಅಭ್ಯಾಸಕ್ಕಾಗಿ ಸೈಕಲ್‌ನಲ್ಲೇ ರಾಯಚೂರಿಗೆ ತೆರಳುತ್ತಿದ್ದರು. ಎಂತಹ ಸನ್ನಿವೇಶವಿದ್ದರೂ, ಅಭ್ಯಾಸವನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಮೂರ್‍ನಾಲ್ಕು ವರ್ಷ ನಿತ್ಯ ಏನಿಲ್ಲವೆಂದರೂ ನಾಲ್ಕೈದು ಗಂಟೆ ಅಭ್ಯಾಸ ಮಾಡುತ್ತಿದ್ದರು. ನಗರದ ಮೆಥೋಡಿಸ್ಟ್‌ ಕಾಲೇಜ್‌ನಲ್ಲಿ ದ್ವಿತೀಯ ಪಿಯು ಕಾಮರ್ಸ್‌ ಓದುತ್ತಿರುವ ವಿದ್ಯಾಧರ, ವ್ಯಾಸಂಗಕ್ಕೆ ಹೆಚ್ಚು ಒತ್ತು ನೀಡದೆ ಸಂಪೂರ್ಣ ಚಿತ್ತ ಕ್ರಿಕೆಟ್‌ನತ್ತ ನೆಟ್ಟಿದ್ದಾರೆ. ಈಗ ಅವರ ಮೊದಲ ಆಯ್ಕೆ ಕ್ರಿಕೆಟ್‌ ಆಗಿರುವುದರಿಂದ, ವ್ಯಾಸಂಗವನ್ನು ಕೈಬಿಟ್ಟಿದ್ದಾರೆ.

ದ್ರಾವಿಡ್‌ರಿಂದ ತರಬೇತಿ, ಅವರೇ ಸ್ಫೂರ್ತಿ: ವಿದ್ಯಾಧರ ಪಾಟೀಲ್‌ ಸಾಧನೆಗೆ ಸ್ಫೂರ್ತಿ, ಬೆನ್ನೆಲುಬಾಗಿ ನಿಂತಿದ್ದು ಖ್ಯಾತ ಕ್ರಿಕೆಟರ್‌ ರಾಹುಲ್‌ ದ್ರಾವಿಡ್‌. ಲೀಗ್‌ ಪಂದ್ಯಗಳಲ್ಲಿ ವಿದ್ಯಾಧರ ಸಾಧನೆ ಗಮನಿಸಿದ್ದ ರಾಹುಲ್‌ ದ್ರಾವಿಡ್‌, ವಿದ್ಯಾಧರರನ್ನು ಬೆಂಗಳೂರಿಗೆ ಕರೆಸಿಕೊಂಡು ತಮ್ಮ ಕ್ರಿಕೆಟ್‌ ಅಕಾಡೆಮಿಗೆ ಸೇರಿಸಿಕೊಂಡರು. ಇರಲು ವ್ಯವಸ್ಥೆ, ಊಟ ನೀಡಿ ವಿಶೇಷ ತರಬೇತಿ ಕೊಡಿಸುತ್ತಿದ್ದಾರೆ. ಅದೂ ಅಲ್ಲದೇ, ಒಬ್ಬ ಕ್ರಿಕೆಟರ್‌ ಹೇಗಿರಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಿ ಯುವಕನನ್ನು ತಯಾರು ಮಾಡುತ್ತಿದ್ದಾರೆ.

19 ವಯೋಮಿತಿ ಭಾರತ ತಂಡಕ್ಕೆ ಕಲ್ಯಾಣ ಕರ್ನಾಟಕ ಭಾಗದಿಂದ ಆಯ್ಕೆಯಾದ ಮೊದಲ ಆಟಗಾರ ವಿದ್ಯಾಧರ ಪಾಟೀಲ್‌. ಈ ಮುಂಚೆ ರಣಜಿಯಲ್ಲಿ ಸಾಕಷ್ಟು ಜನ ಆಡಿದ್ದಾರೆ. ವಿದ್ಯಾಧರ ನನ್ನ ಬಳಿ ತರಬೇತಿಗೆ ಬಂದಾಗ ಬ್ಯಾಟ್ಸ್‌ಮನ್‌ ಆಗುವುದಾಗಿ ತಿಳಿಸಿದ್ದ. ಆದರೆ, ಬೌಲಿಂಗ್‌ನಲ್ಲಿದ್ದ ಪ್ರತಿಭೆ ಗುರುತಿಸಿ ಬೌಲಿಂಗ್‌ನಲ್ಲೇ ತರಬೇತಿ ನೀಡಲಾಯಿತು. ನಮ್ಮ ವಿದ್ಯಾರ್ಥಿ ಈ ಸಾಧನೆ ಮಾಡಿರುವುದು ಹೆಮ್ಮೆ ಎನಿಸುತ್ತದೆ.
-ವೆಂಕಟ ರೆಡ್ಡಿ, ತರಬೇತುದಾರ, ರಾಯಚೂರು

* ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next