Advertisement

ವಿಧಾನಸೌಧ ವಜ್ರ ಮಹೋತ್ಸವ:ಮುಂದುವರಿದ ಜಟಾಪಟಿ

06:45 AM Oct 14, 2017 | |

ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವ ವಿಚಾರದಲ್ಲಿ ಸರ್ಕಾರ ಹಾಗೂ ಸ್ಪೀಕರ್‌ ಕಾರ್ಯಾಲಯ ನಡುವೆ ಗುದ್ದಾಟ ಮುಂದುವರಿದಿದ್ದು, ಸಂಪುಟದಲ್ಲಿ ಅನುಮೋದನೆ ದೊರೆಯದಿರುವ ಬಗ್ಗೆ ಸ್ಪೀಕರ್‌ ಕೆ.ಬಿ.ಕೋಳಿವಾಡ ತಲೆಕೆಡಿಸಿಕೊಂಡಿಲ್ಲ.

Advertisement

ಜತೆಗೆ ನಿಯಮಾನುಸಾರ ರಾಷ್ಟ್ರಪತಿಯವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಅವಕಾಶವಿಲ್ಲ ಎಂಬುದಕ್ಕೂ, ಹಿಂದೆ ನಾಲ್ಕೈದು ಬಾರಿ ಅಬ್ದುಲ್‌ ಕಲಾಂ, ಪ್ರಣಬ್‌ ಮುಖರ್ಜಿ ಸೇರಿ ರಾಷ್ಟ್ರಪತಿಯವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಉದಾಹರಣೆಯಿದೆ ಎಂಬ ಸಮರ್ಥನೆಯನ್ನೂ ಸ್ಪೀಕರ್‌ ನೀಡಿದ್ದಾರೆ.

ವಜ್ರ ಮಹೋತ್ಸವಕ್ಕೆ 26.87 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿರುವುದನ್ನೂ ಸಮರ್ಥಿಸಿಕೊಂಡಿರುವ ಅವರು, ಹಣಕಾಸು ಇಲಾಖೆಗೆ ಐಟಂವಾರು ವೆಚ್ಚದ ಬಗ್ಗೆ ವಿವರ ಕಳುಹಿಸಿದ್ದೇವೆ. ಎಷ್ಟಕ್ಕೆ ಒಪ್ಪಿಗೆ ಕೊಡುತ್ತಾರೋ ಅಷ್ಟರಲ್ಲಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ವಜ್ರ ಮಹೋತ್ಸವ ವೆಚ್ಚದ ಬಗ್ಗೆ ಮಾಹಿತಿ ಪಡೆಯಲು ಮಾಧ್ಯಮದವರು ಶುಕ್ರವಾರ ಸ್ಪೀಕರ್‌ ಕಚೇರಿಗೆ ತೆರಳಿದಾಗ ಕೋಪಗೊಂಡ ಸ್ಪೀಕರ್‌, ಕಾರ್ಯದರ್ಶಿ, ಇತರೆ ಸಿಬ್ಬಂದಿ ಕೆಲಸ ಅದು, ಅವರನ್ನೇ ಕೇಳಿ ಎಂದು ಹೇಳಿದರು. 

ಕಾರ್ಯದರ್ಶಿಯವರು ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆಂದು ಹೇಳಿದಾಗ, 26.87 ಕೋಟಿ ರೂ. ವೆಚ್ಚದಲ್ಲಿ ವಜ್ರ ಮಹೋತ್ಸವ ಕಾರ್ಯಕ್ರಮದ ಪಟ್ಟಿ ಸಿದ್ಧಗೊಂಡಿದೆ. ಉಳಿದ ವಿವರ ನಾನು ನೀಡಲು ಸಾಧ್ಯವಿಲ್ಲ. ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದಷ್ಟೇ ತಿಳಿಸಿದರು.

Advertisement

ಸಾಮಾಜಿಕ ಜಾಲತಾಣಗಳಲ್ಲಿ  ವೆಚ್ಚದ ಬಗ್ಗೆ ಟೀಕೆಗಳು ಬರುತ್ತಿರುವ ಬಗ್ಗೆ ಕೇಳಿದಾಗ, ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಟೀಕೆಗಳು ಮಾಡುವವರು ಮಾಡುತ್ತಾರೆ ಬಿಡಿ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಹಿತ ಎಲ್ಲರ ಜತೆ ಮಾತನಾಡಿಯೇ ಕಾರ್ಯಕ್ರಮ ನಿಗದಿಪಡಿಸಲಾಗಿದೆ. ಅ.25ರಂದು ರಾಷ್ಟ್ರಪತಿಯವರು ಬರುತ್ತಾರೆ. ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಾರೆ. ಅದು ರಾಷ್ಟ್ರಪತಿಯವರ ಭಾಷಣ ಅಲ್ಲ ಜಂಟಿ ಅಧಿವೇಶನ ಎಂದು ಪುನರುಚ್ಚರಿಸಿದರು.

ವಜ್ರಮಹೋತ್ಸವಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರನ್ನೂ ಬೇಕಾದರೆ ಕೇಳಿಕೊಳ್ಳಿ. ನಿನ್ನೆಯೂ ಕಾನೂನು ಸಚಿವರ ಜತೆ, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ವಿವಾದ ಎಂಬುದು ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.

ಕೆರೆ ಒತ್ತುವರಿ ವರದಿ ಸಿದ್ಧ
ಕೆರೆ ಒತ್ತುವರಿ ಕುರಿತ ಜಂಟಿ ಸದನ ಸಮಿತಿ ವರದಿ ಸಿದ್ಧಗೊಂಡಿದೆ. ವಿಶೇಷ ಅಧಿವೇಶನವನ್ನು ಎರಡು -ಮೂರು ದಿನ ವಿಸ್ತರಿಸುವ ಸಾಧ್ಯತೆ ಬಗ್ಗೆ ಕಾನೂನು ಸಚಿವರು ಪ್ರಸ್ತಾಪಿಸಿದ್ದಾರೆ. ವಿಸ್ತರಣೆಯಾದರೆ ಇಲ್ಲೇ ಮಂಡಿಸಲಾಗುವುದು. ಇಲ್ಲದಿದ್ದರೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸ್ಪೀಕರ್‌ ಕೆ.ಬಿ.ಕೋಳಿವಾಡ ಹೇಳಿದರು.

ಸಿಡಿಮಿಡಿಗೊಂಡ ಸ್ಪೀಕರ್‌
ವಿಧಾನಸೌಧದ ವಜ್ರ ಮಹೋತ್ಸವಕ್ಕೆ ಸಂಬಂಧಿಸಿದಂತೆ 26.87 ಕೋಟಿ ಗಳಷ್ಟು ಹಣವನ್ನು ಯಾವುದಕ್ಕೆ ವೆಚ್ಚ ಮಾಡಲಾಗುತ್ತದೆಂಬ ಮಾಧ್ಯಮದವರ ಪ್ರಶ್ನೆಗೆ ಒಮ್ಮೆಲೇ ಸಿಟ್ಟಾದ ಸ್ಪೀಕರ್‌ ಕೋಳಿವಾಡ್‌, “ನಾನು ಅದರ ಲೆಕ್ಕ ನಿಮಗೆ ಕೊಡಬೇಕಾ? ಇದು ನೀವು ಸ್ಪೀಕರ್‌ಗೆ ಕೇಳುವ ಪ್ರಶ್ನೆನಾ? ಚಾ ಕೊಡ್ಸ್‌ತೀವಿ, ಉಣ್ಣಾಕ್‌ ಏನ್‌ ಕೊಡ್ತೀವಿ ಎಲ್ಲ ನಿಮY ಲೆಕ್ಕಾ ಕೊಡ್ಬೇಕಾ? ಕ್ಲರಿಕಲ್‌ ಕೆಲ್ಸ ಅದು ‘ ಎಂದು ಸಿಟ್ಟಾದರು. ನಂತರ ಕೆರೆ ಒತ್ತುವರಿ ಸಮಿತಿಗೆ ಬಿಜೆಪಿಯ ಸುರೇಶ್‌ಕುಮಾರ್‌ ರಾಜೀನಾಮೆ ಕೊಟ್ಟ ವಿಚಾರ ಬಂದಾಗ, “ನನ್ನ ಕೇಳ್ತೀರಿ, ಹೋಗ್ರಿ ಕೇಳಿ ಅವ್ರನ್ನ, ಅದೇನೋ ಗುಸು ಗುಸು ನಡೀತೈತೆ ಅಂದ್ರಲ್ಲ, ಏನದು ಗುಸು …ಗುಸು…ಅಂತ ಕೇಳಲಾÅ. ವಾಟ್‌ ಈಸ್‌ ದಿ ಮೀನಿಂಗ್‌ ಆಫ್ ದಟ್‌’ ಎಂದು ಹೇಳಿದರು.

ಶಾಸಕ ಶಿವಮೂರ್ತಿ ನಾಯಕ್‌ ಹಾಗೂ ಐಎಎಸ್‌ ಅಧಿಕಾರಿ ರಾಜೇಂದ್ರಕುಮಾರ್‌ ಕಟಾರಿಯಾ ನಡುವಿನ ವಾಗ್ವಾದ ಪ್ರಕರಣದ ಬಗ್ಗೆ ಇಬ್ಬರನ್ನೂ ಕರೆಸಿ ಮಾಹಿತಿ ಪಡೆದು ಮಾತುಕತೆ ಮೂಲಕ ಇತ್ಯರ್ಥಪಡಿಸಲಾಗುವುದು. ಕಟಾರಿಯಾ ಅವರನ್ನು ಇಂದೇ ಬರಲು ಹೇಳಿದ್ದೆ, ಆದರೆ, ದೆಹಲಿಗೆ ಹೋಗುವ ತುರ್ತು ಕೆಲಸ ಬಂದಿದ್ದರಿಂದ ಆಗಲಿಲ್ಲ. ನಾಳೆ ಶಾಸಕರು ಹಾಗೂ ಅಧಿಕಾರಿಯನ್ನೂ ಕರೆಸಿ ಮಾತನಾಡುತ್ತೇನೆ.
– ಕೆ.ಬಿ.ಕೋಳಿವಾಡ್‌, ವಿಧಾನಸಭೆ ಸ್ಪೀಕರ್‌

Advertisement

Udayavani is now on Telegram. Click here to join our channel and stay updated with the latest news.

Next