ಕಲಬುರಗಿ: ದೇಶದ ಮಹಿಳೆಯರು, ಶಾಸಕರಾಗಿ, ಸಚಿವರಾಗಿ ಅಕ್ಷರಜ್ಞಾನ ಪಡೆದು ವೇದಿಕೆ ಮೇಲೆ ನಿಂತು ಮಾತನಾಡಲು ಸಾಧ್ಯವಾಗಿರುವುದಕ್ಕೆ ಅಕ್ಷರದ ಅವ್ವ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಕಾರಣ. ಆಕೆ ವಿದ್ಯಾ ಸರಸ್ವತಿ ಎಂದು ಸಮಾಜ ಸೇವಕಿ ಜಯಶ್ರೀ ಬಿ. ಮತ್ತಿಮಡು ಹೇಳಿದರು. ಕುಸನೂರಲ್ಲಿ ಸಾವಿತ್ರಿಬಾಯಿ ಫುಲೆ ಅವರ 188ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದು, ಅವರ ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಬೌದ್ಧ ಉಪಾಸಕ ಲಕ್ಷ್ಮೀಕಾಂತ ಹುಬ್ಬಳಿ ಉಪನ್ಯಾಸ ನೀಡಿ, ಮೂಢನಂಬಿಕೆ ತೊರೆದು ಸಾವಿತ್ರಿಬಾಯಿ ಫುಲೆ ಹೇಳಿದ ಮಾರ್ಗದಲ್ಲಿ ನಾವೆಲ್ಲ ಒಂದಾಗಿ ನಡೆಯೋಣ ಎಂದು ಹೇಳಿದರು.
ದಯಾನಂದ ಸಪ್ಪನ್ನ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ, ಡಾ| ನಾಗರತ್ನ ದೇಶಮಾನ್ಯೆ, ಡಾ| ಕೆ.ಎಸ್. ಬಂಧು, ಆನಂದ ದೊಡ್ಮನಿ, ಜಿ.ಪಂ. ಸದಸ್ಯ ಅರವಿಂದ ಚವ್ಹಾಣ, ಹಾಗರಗಿ ಗ್ರಾ.ಪಂ. ಅಧ್ಯಕ್ಷೆ ಶುಭಾಂಗಿ ವಿಠಲ, ಚಂದ್ರಕಲಾ ಪಿ. ಭಟ್ಟರಕಿ ಹಾಗೂ ಇತರರು ಇದ್ದರು. ಗೋರಕನಾಥ ದೊಡ್ಮನಿ ನಿರೂಪಿಸಿದರು, ವಿಶ್ವನಾಥ ತೋಟ್ನಳ್ಳಿ ಸ್ವಾಗತಿಸಿದರು, ರವಿ ಪಟ್ಟೇದಾರ ವಂದಿಸಿದರು.